
ಇಂಫಾಲ್: ಮಹತ್ವದ ಬೆಳವಣಿಗೆಯೊಂದರಲ್ಲಿ ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರದಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿನ ಜನಾಂಗೀಯ ಹಿಂಸಾಚಾರದ ಬಗ್ಗೆ ಪ್ರತಿಪಕ್ಷಗಳು ತಮ್ಮ ವಿರುದ್ಧ ಯೋಜಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಒಂದು ದಿನ ಮುಂಚಿತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ನೀಡುವುದಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಸಿಂಗ್ ಅವರು ಪ್ರತಿಪಕ್ಷ ಮತ್ತು ಸ್ವಪಕ್ಷೀಯರಿಂದಲೂ ಟೀಕೆಗೆ ಒಳಗಾಗಿದ್ದರು.
ಬಿರೇನ್ ಸಿಂಗ್ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದು, ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚಿಸಿದ್ದಾರೆ, ಆದರೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಅವರನ್ನು ಕೇಳಿದ್ದಾರೆ.
ಮೂಲಗಳ ಪ್ರಕಾರ, ತಮ್ಮ ವಿರುದ್ದದ ಅವಿಶ್ವಾಸ ನಿರ್ಣಯವು ಅವರ ರಾಜೀನಾಮೆಗೆ ಕಾರಣವಾಗಿರುವ ಅಂಶವಾಗಿದೆ. ಬಿರೇನ್ ಸಿಂಗ್ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಸಭೆ ಅಧಿವೇಶನವನ್ನು ಶೂನ್ಯ ಮತ್ತು ಅನೂರ್ಜಿತಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
