
ಕಾಪು: ಜೀರ್ಣೋದ್ಧಾರದೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನದ ನೂತನ ಸ್ವರ್ಣ ಗದ್ದುಗೆ, ರಜತ ರಥ, ಬೃಹತ್ ಗಂಟೆ ಸಹಿತ ಸ್ವರ್ಣಾಭರಣಗಳ ಪುರಪ್ರವೇಶ ಶೋಭಾಯಾತ್ರೆಯು ಭಾನುವಾರ ನಡೆಯಿತು.
ಶ್ರೀಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ನೇತೃತ್ವದಲ್ಲಿ ಭಕ್ತಾದಿಗಳ ಸಹಕಾರದೊಂದಿಗೆ ₹15 ಕೋಟಿ ವೆಚ್ಚದೊಂದಿಗೆ ಗುಜ್ಜಾಡಿ ಸ್ವರ್ಣ ಆಭರಣದಂಗಡಿಯಲ್ಲಿ ಸ್ವರ್ಣ ಗದ್ದುಗೆ ಮತ್ತು ಮಾರಿಯಮ್ಮ ದೇವಿಯ ಚಿನ್ನದ ಮುಖ ನಿರ್ಮಾಣಗೊಂಡಿದೆ.
ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನದಲ್ಲಿ ಭಾರತದ ಎರಡನೇ ಅತಿ ದೊಡ್ಡ ಮತ್ತು ರಾಜ್ಯದ ಪ್ರಥಮ ಬೃಹತ್ ಗಂಟೆಯ ನಾದ ಮೊಳಗಲಿದೆ. ಕಾಪು ಮಾರಿಯಮ್ಮ ದೇವಿಯ ಭಕ್ತರಾದ ಮುಂಬೈ ಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಸಿಎಂಡಿ ಅರವಿಂದ್ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿಯು ಸಮರ್ಪಿಸಲಿರುವ ಸುಮಾರು 1500 ಕೆ.ಜಿ. ತೂಕ ಮತ್ತು 5ಅಡಿ ಎತ್ತರದ ಸಂಪೂರ್ಣ ಕಂಚಿನಿಂದ ನಿರ್ಮಾಣಗೊಂಡಿರುವ ಬೃಹತ್ ಗಂಟೆಯು ಆಂಧ್ರ ಪ್ರದೇಶದ ಬಿ.ಎಸ್.ಎಂ. ಫೌಂಡ್ರೀಸ್ ಕಾರ್ಖಾನೆಯಲ್ಲಿ ಸಿದ್ಧಗೊಂಡಿದೆ. ಈವರೆಗಿನ ದಾಖಲೆಯೆಂಬಂತೆ ದೇಶದ ಅತೀ ದೊಡ್ಡದಾದ ಸುಮಾರು 2200 ಕೆ.ಜಿ. ತೂಕದ ಬೃಹತ್ ಗಂಟೆ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿದೆ. ಅಷ್ಟಧಾತುವನ್ನು ಬಳಸಿಕೊಂಡು ನಿರ್ಮಿಸಲಾಗಿರುವ ಗಂಟೆ 5 ಅಡಿ ಎತ್ತರ 4 ಅಡಿ ಅಗಲ ಹೊಂದಿದ್ದು ಇದರ ಸದ್ದು ಅತಿದೂರದವರೆಗೂ ಮೊಳಗಲಿದೆ.
ಭಾನುವಾರದಂದು ಶ್ರೀಕ್ಷೇತ್ರ ದಂಡತೀರ್ಥ ಮಠದಿಂದ ಹೊರಟ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ ಕಾಪು ಪೇಟೆಯ ಮೂಲಕ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಪುರಪ್ರವೇಶ ನಡೆಯಿತು.
ಮುಂಬೈ ಉದ್ಯಮಿ ತೋನ್ಸೆ ಆನಂದ ಎಂ. ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ ಅವರು ನೀಡಿದ ಮಂಗಳೂರು ಎಸ್.ಎಲ್. ಶೇಟ್ ಜುವೆಲರ್ಸ್‌ನಲ್ಲಿ ನಿರ್ಮಾಣಗೊಂಡಿರುವ ರಜತ ರಥ, ಮುಂಬೈ ಉದ್ಯಮಿ ಅರವಿಂದ್ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಸಮರ್ಪಿಸಿದ ಅಯೋಧ್ಯೆ ಮಾದರಿಯ ಬೃಹತ್ ಗಂಟೆ, ಉಳಿಯಾರಗೋಳಿ ದಿ. ಸುಂದರ ಶೆಟ್ಟಿ ಮತ್ತು ದಿ. ರಾಧಾ ಸುಂದರ ಶೆಟ್ಟಿ ಅವರ ಮಕ್ಕಳು ಹಾಗೂ ಮೂಳೂರು ಸುಧಾಕರ ಹೆಗ್ಡೆ ಮತ್ತು ರಂಜನಿ ಸುಧಾಕರ ಹೆಗ್ಡೆ ದಂಪತಿ ಸಮರ್ಪಿಸಿದ ರಾಜಗೋಪುರದ ಮಹಾದ್ವಾರದ ಬಾಗಿಲು ಹಾಗೂ ಉಚ್ಚಂಗಿ ದೇವಿಯ ಚಿನ್ನದ ಪಾದಪೀಠ, ಚಿನ್ನದ ಮುಖದ ಪುರಪ್ರವೇಶ ನಡೆಯಿತು.
ಕೃಷ್ಣಾಪುರ ಮಠದ ವಿದ್ಯಾಶ್ರೀ ಸಾಗರ ಸ್ವಾಮೀಜಿ ಸ್ವರ್ಣ ಗದ್ದುಗೆಯನ್ನು ಅನಾವರಣಗೊಳಿಸಿದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಪುರ ಮೆರವಣಿಗೆಗೆ ಚಾಲನೆ ನೀಡಿದರು.
ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸುನಿಲ್ ಕುಮಾರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಲಾಲಾಜಿ ಆರ್.ಮೆಂಡನ್, ರಘುಪತಿ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಧಾನ ತಂತ್ರಿ ಕೊರಂಗ್ರಪಾಡಿ ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ, ಕಾರ್ಯನಿರ್ವಹಣಾಧಿಕಾರಿ ಕೆ. ರವಿಕಿರಣ್, ಸಾಯಿರಾಧಾ ಗ್ರೂಪ್ ಎಂಡಿ ಮನೋಹರ್ ಶೆಟ್ಟಿ ಹಾಗೂ ಸಿದ್ದಾರ್ಥ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಸ್ವರ್ಣ ಗದ್ದುಗೆ ಸಮರ್ಪಣ ಸಮಿತಿ ಅಧ್ಯಕ್ಷ ರವಿಸುಂದರ್ ಶೆಟ್ಟಿ ಸ್ವರ್ಣ ಗದ್ದುಗೆ ಸಮರ್ಪಣ ಮೆರವಣಿಗೆ ಸಮಿತಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಇದ್ದರು.
