
ಮೈಸೂರು: ವ್ಯಕ್ತಿಯಬ್ಬ ಮಾಡಿದ ಅವಹೇಳನಕಾರಿ ಪೋಸ್ಟ್ ವಿರುದ್ಧ ಸೋಮವಾರ ರಾತ್ರಿ ಪೊಲೀಸ್ ಠಾಣೆ ಎದುರು ಇದ್ದಕ್ಕಿದ್ದಂತೆ ಸೇರಿದ ನೂರಾರು ಜನರು ಪ್ರತಿಭಟನೆ ನಡೆಸಿ, ಕಲ್ಲು ತೂರಾಟ ನಡೆಸಿದ್ದರಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಉದಯಗಿರಿ ಪ್ರದೇಶ ಉದ್ವಿಗ್ನಗೊಂಡಿತ್ತು. ಆದರೆ ಘಟನೆಯು ವಿಪರೀತಕ್ಕೆ ತೆರಳದಂತೆ ಪೊಲೀಸರು ಶ್ರಮವಹಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಮಂಗಳವಾರದಂದು ನಗರದಲ್ಲಿ ಸಹಜ ಸ್ಥಿತಿ ಕಂಡು ಬಂದರೂ ಪರಿಸ್ಥಿತಿ ಮಾತ್ರ ಇನ್ನೂ ಬುದಿ ಮುಚ್ಚಿದ ಕೆಂಡದಂತಿದ್ದು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅಶ್ಲೀಲವಾಗಿ ಚಿತ್ರಿಸುವ ರೀತಿಯಲ್ಲಿ ಪೋಸ್ಟ್ ಮಾಡಿದ್ದು, ಸಮುದಾಯ ವಿಶೇಷ ಒಂದಕ್ಕೆ ಅವಹೇಳನಕಾರಿಯಾಗುವಂತೆ ಅದನ್ನು ಚಿತ್ರಿಸಿದ್ದು ಸಮುದಾಯವನ್ನು ಕೆರಳಿಸಿತ್ತು.
ಈ ಕೃತ್ಯವನ್ನು ವಿರೋಧಿಸಿ ಸಾವಿರಾರು ಮಂದಿ ಉದಯಗಿರಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಲ್ಲದೆ, ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಬಳಿಕ ಪೊಲೀಸರು ಲಾಠಿ ಪ್ರಹಾರ ಮಾಡಿ, ಅಶ್ರುವಾಯು ಸಿಡಿಸಿ ಗುಂಪು ಚದುರಿಸಿದ್ದರು.
ಈ ಘಟನೆಯಿಂದಾಗಿ ನಗರವು ಬೂದಿ ಮುಚ್ಚಿದ ಕೆಂಡದಂತಿದ್ದು, ಪರ-ವಿರೋಧ ಟೀಕೆ ಟಿಪ್ಪಣಿಗಳು ಹರಿದಾಡುತ್ತಿವೆ. ವಿರೋಧ ಪಕ್ಷದ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಗೃಹ ಸಚಿವರನ್ನು ಪ್ರಶ್ನಿಸಿದ್ದರು. ಸರ್ಕಾರದ ತುಷ್ಟೀಕರಣ ರಾಜನೀತಿಯಿಂದಾಗಿ ಇಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ಆರೋಪಿಸಿದ್ದರು.
ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಅದಾಗಲೇ ಬಂದಿಸಲಾಗಿದೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಘಟನೆಯಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಎಂಬುದನ್ನು ನಾವು ನಿರ್ಧಾರ ಮಾಡಲು ಆಗುವುದಿಲ್ಲ. ಪೊಲೀಸರು ಕಾನೂನು ಪ್ರಕಾರ ಮಾಡಿರುತ್ತಾರೆ. ತಪ್ಪು ಮಾಡಿದ್ದರೆ ಪೊಲೀಸರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ. ಅನೇಕ ಸಂದರ್ಭಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್, ಪಿಎಸ್ಐಗಳನ್ನು ಅಮಾನತು ಮಾಡಲಾಗಿದೆ. ಪೊಲೀಸರ ಮೇಲು ಕ್ರಮ ಜರುಗಿಸಲಾಗಿದೆ. ಈಗಾಗಲೇ ಕಾನೂನು ಸುವ್ಯವಸ್ಥೆ ಎಡಿಜಿಪಿ ಸ್ಥಳಕ್ಕೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
