
ಉಡುಪಿ: ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಬುಧವಾರದಂದು ನಗರಸಭೆಯ ಸಭಾಂಗಣದಲ್ಲಿ ಆಟೊ ಚಾಲಕರ ಸಭೆ ನಡೆಯಿತು. ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡ ರಿಕ್ಷಾ ಚಾಲಕರು, ನಗರದ ಹೊರವಲಯದಲ್ಲಿ ಕಾರ್ಯಾಚರಿಸುವ ವಲಯ ಎರಡರ ರಿಕ್ಷಾಗಳು ನಗರದೊಳಗೆ ಬಂದರೆ ₹2 ಸಾವಿರದಿಂದ ₹3 ಸಾವಿರದ ವರೆಗೆ ದಂಡ ಹಾಕಲಾಗುತ್ತದೆ. ಇದನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿದರು.
ವಲಯ ಒಂದರ ರಿಕ್ಷಾ ಚಾಲಕ ಗೋಪಾಕೃಷ್ಣ ಶೆಟ್ಟಿ ಮಾತನಾಡಿ, ವಲಯ ಒಂದರಲ್ಲಿ 3,395 ರಿಕ್ಷಾಗಳಿವೆ, ವಲಯ ಎರಡರಲ್ಲಿ 3,643 ರಿಕ್ಷಾಗಳಿವೆ. ನಗರದಲ್ಲಿ ವಲಯ ಒಂದರ ರಿಕ್ಷಾಗಳಿಗಷ್ಟೇ ಬಾಡಿಗೆ ಮಾಡಬಹುದಾಗಿದೆ. ಇಲ್ಲಿನ ಆಟೊಗಳಿಗೇ ನಿಲ್ಲಿಸಲು ಜಾಗವಿಲ್ಲ. ವಲಯ ಎರಡರ ಆಟೊಗಳು ಕೂಡ ಬಂದರೆ ಸಮಸ್ಯೆಯಾಗುತ್ತದೆ ಎಂದರು.
ನಗರದಲ್ಲಿ ಒಟ್ಟು 40 ಅಧಿಕೃತ ರಿಕ್ಷಾ ನಿಲ್ದಾಣಗಳಿದ್ದರೆ, 20 ಅನಧಿಕೃತ ನಿಲ್ದಾಣಗಳಿವೆ ಎಂದು ಸಭೆಗೆ ವಿವರಿಸಿದರು.
ಈ ವೇಳೆ ವಲಯ ಎರಡರ ರಿಕ್ಷಾ ಚಾಲಕರು ಮಾತನಾಡಿ, ಯೂನಿಯನ್‌ಗಳಿಂದಾಗಿ ರಿಕ್ಷಾ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ಏಳು ಯೂನಿಯನ್‌ಗಳಿವೆ, ಇವುಗಳಿಂದಾಗಿ ಬೇರೆ ಕಡೆಯ ರಿಕ್ಷಾಗಳನ್ನು ನಿಲ್ದಾಣಕ್ಕೆ ಬರಲು ಬಿಡುತ್ತಿಲ್ಲ, ಸಿಎನ್‌ಜಿ ಆಟೊಗಳು ಇಂಧನ ಹಾಕಿಸಲು ಉಡುಪಿ ನಗರಕ್ಕೆ ಬರಲೇಬೇಕಾದ ಅನಿವಾರ್ಯತೆ ಇದೆ ಎಂದು ಸಮಸ್ಯೆ ತೋಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ನಗರಸಭೆ ವ್ಯಾಪ್ತಿಯ ರಿಕ್ಷಾ ನಿಲ್ದಾಣಗಳ ವಿಚಾರವಾಗಿ ನಿಯಮಾವಳಿಗಳನ್ನು ರಚಿಸಲಿದ್ದೇವೆ. ಜೊತೆಗೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲೂ ಚಿಂತನೆ ನಡೆಸಿದ್ದೇವೆ. ನಗರಕ್ಕೆ ಇನ್ನೂ ಹೆಚ್ಚು ರಿಕ್ಷಾಗಳ ಅಗತ್ಯವಿದೆಯೇ ಮತ್ತು ಅವುಗಳಿಗೆ ಪರವಾನಗಿ ನೀಡಬೇಕಾ ಎನ್ನುವ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸುತ್ತೇವೆ. ಈಗಿರುವ ರಿಕ್ಷಾ ಚಾಲಕರು ಮತ್ತು ಮಾಲಕರು ಸುಗಮವಾಗಿ ವ್ಯವಹಾರ ನಡೆಸಲು ಪೂರಕವಾದ ನಿರ್ಣಯಗಳನ್ನು ಕೈಗೊಳ್ಳಲಿದ್ದೇವೆ. ವಾರದೊಳಗೆ ಈ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದರು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.
