
ವಾಷಿಂಗ್ಟನ್ ಡಿ.ಸಿ: ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ನಂತರ, 2008 ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಯುನೈಟೆಡ್ ಸ್ಟೇಟ್ಸ್ ಒಪ್ಪಿಕೊಂಡಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
26/11 ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾ ಪ್ರಸ್ತುತ ಅಮೇರಿಕಾ ಹೈ-ಸೆಕ್ಯುರಿಟಿ ಜೈಲಿನಲ್ಲಿದ್ದಾನೆ. ಈತನನ್ನು ವಿಚಾರಣೆಗಾಗಿ ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಭಾರತ ಸರಕಾರವು ಹಲವು ವರ್ಷಗಳಿಂದ ಅಮೇರಿಕಾವನ್ನು ಕೇಳಿಕೊಳ್ಳುತ್ತಿದೆ. ಆದರೆ ಅಮೇರಿಕಾದ ಕಾನೂನು ಪ್ರಕ್ರಿಯೆಗಳಿಂದ ಹಸ್ತಾಂತರ ನಡೆದಿರಲಿಲ್ಲ. ಜನವರಿ 21 ರಂದು, ಅಮೇರಿಕಾದ ಸುಪ್ರೀಂ ಕೋರ್ಟ್ ತಹವ್ವುರ್ ರಾಣಾನ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ದಾರಿ ಮಾಡಿಕೊಟ್ಟಿದೆ. ಇದೀಗ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಿದ್ದು, ಭಯೋತ್ಪಾದನೆಯ ಬಗ್ಗೆ ತನ್ನ ಶೂನ್ಯ ಸಹಿಷ್ಣುತೆಯ ಅಂಗವಾಗಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಕೊಂಡಿದ್ದಾರೆ.
“26/11 ಮುಂಬೈ ಭಯೋತ್ಪಾದನಾ ದಾಳಿಯ ಆರೋಪಿಯಾಗಿರುವ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ನಾವು ಭಾರತಕ್ಕೆ ಹಸ್ತಾಂತರಿಸುತ್ತಿದ್ದೇವೆ” ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
164 ಜನರ ಸಾವಿಗೆ ಕಾರಣವಾದ ಮುಂಬೈ ಮೇಲಿನ 26/11 ದಾಳಿಯಲ್ಲಿನ ಪಾತ್ರಕ್ಕಾಗಿ ಶಿಕ್ಷೆಗೊಳಗಾದ ಪಾಕಿಸ್ತಾನಿ ಮೂಲದ ಉದ್ಯಮಿ ತಹವ್ವುರ್ ಹುಸೇನ್ ರಾಣಾ ನನ್ನು ಈಗ ಭಾರತೀಯ ಏಜೆನ್ಸಿಗಳು ವಿಚಾರಣೆಗೆ ಒಳಪಡಿಸಲಿವೆ.
