
ಬೆಂಗಳೂರು: ಮಲೆನಾಡು ಭಾಗದಲ್ಲಿ ಕೆಎಫ್ಡಿ ಅಥವಾ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಉಚಿತ ಚಿಕಿತ್ಸೆಯನ್ನು ಎಪಿಎಲ್ ಕಾರ್ಡುದಾರರಿಗೂ ವಿಸ್ತರಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಮಲೆನಾಡು ಭಾಗಗಳಲ್ಲಿ ಹೆಚ್ಚು ಕಾಡುತ್ತಿರುವ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್ಡಿ) ನಿಯಂತ್ರಣಕ್ಕೆ ಸರ್ಕಾರ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ. ರೋಗದಿಂದ ಬಾಧಿತರಾದವರಿಗೆ ಚಿಕಿತ್ಸೆ ಉಚಿತವಾಗಿದ್ದು, ಈ ಯೋಜನೆಯನ್ನು ಎಪಿಎಲ್ ಕುಟುಂಬಗಳಿಗೂ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೆಎಫ್ಡಿ ಬಾಧಿತ ಎಪಿಎಲ್ ಕುಟುಂಬದ ಸದಸ್ಯರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ನೋಂದಾಯಿಸಿಕೊಂಡಿರುವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ. ಇದರಿಂದ ನೂರಾರು ಕುಟುಂಬಗಳಿಗೆ ಸಹಾಯವಾಗಲಿದೆ ಎಂದಿದ್ದಾರೆ.
ಈಗಾಗಲೇ ಮಂಗನ ಕಾಯಿಲೆ ವಿರುದ್ಧ ನಿರ್ಣಾಯಕ ಹೆಜ್ಜೆಯಿಟ್ಟಿರುವ ರಾಜ್ಯ ಸರ್ಕಾರ ಐಸಿಎಂಆರ್ ಜೊತೆಗೆ ಚರ್ಚೆ ನಡೆಸಿದ್ದು, ಪ್ರಯೋಗಗಳ ಬಳಿಕ 2026ರ ವೇಳೆಗೆ ಕೆಎಫ್ಡಿ ಲಸಿಕೆ ಸಿಗಲಿದೆ. ರಾಜ್ಯದ ಜನರ ಆರೋಗ್ಯ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
