
ಬೆಂಗಳೂರು: ಸೆಲಿಬ್ರೆಟಿಗಳ ಮಕ್ಕಳು ಸಿನಿಮಾ ಕ್ಷೇತ್ರಕ್ಕೆ ಕಾಲಿಡುವುದು ಸರ್ವೇಸಾಮಾನ್ಯ. ಇದಕ್ಕೆ ಅನೇಕ ನಿದರ್ಶನಗಳೂ ಕೂಡ ಇವೆ. ಇದೀಗ ಸಂಗೀತ
ನಿರ್ದೇಶಕನೋರ್ವರ ಮಗ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ಸ್ಯಾಂಡಲ್ ವುಡ್‌ಗೆ ಮತ್ತೊಂದು ಹೊಸ ಪ್ರತಿಭೆಯ ಅನಾವರಣ ಆಗುತ್ತಿದೆ.
ಹೌದು, ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಪುತ್ರ ಮಾಸ್ಟರ್ ಪವನ್ ಬಸ್ರೂರು ಕ್ಲಿಕ್ ಎನ್ನುವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಈ ಚಿತ್ರತಂಡ ಇದೀಗ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದೆ. ಶರಣ್ಯ ಫಿಲಂಸ್ ನಡಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಮಾಸ್ಟರ್ ಪವನ್ ಜೊತೆಯಲ್ಲಿ ಯುವ ನಟ ಕಾರ್ತಿಕ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ಶಶಿಕಿರಣ್ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ರಾಮನಗರ, ಬಿಡದಿ ಹಾಗೂ ಕುಂದಾಪುರದ ಸುತ್ತಮುತ್ತ ಈ ಸಿನಿಮಾವನ್ನು ಚಿತ್ರಕರಿಸಲಾಗಿದೆ.
ಇನ್ನು, ಸಿನಿಮಾದಲ್ಲಿ ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸುಮನ್ ಸೇರಿದಂತೆ ಅನೇಕರ ತಾರಾಬಳಗವಿದ್ದು, ಚಿತ್ರಕ್ಕೆ ಆಕಾಶ್ ಪರ್ವ-ವಿಶ್ವಾಸ್ ಕೌಶಿಕ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಶೀಘ್ರದಲ್ಲೇ ತೆರೆಮೇಲೆ ಬರಲಿದೆ.
