
ಮಂಗಳೂರು: ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮದಡಿ ಮಹಾನಗರ ಪಾಲಿಕೆಯ ವತಿಯಿಂದ ಪಟ್ಲ ಫೌಂಡೇಶನ್ ಗೆ ₹10 ಲಕ್ಷ ಪ್ರೋತ್ಸಾಹ ಧನ ನೀಡಲಾಯಿತು.
ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2024–25ನೇ ಸಾಲಿನ ಪಾಲಿಕೆ ಬಜೆಟ್‌ನಲ್ಲಿ ಅನುದಾನ ಘೋಷಿಸಲಾಗಿತ್ತು. ಅದರನ್ವಯ ಸರ್ಕಾರಿ ಶಾಲೆಗಳಲ್ಲಿ ಯಕ್ಷಗಾನವನ್ನು ಉಚಿತವಾಗಿ ಕಲಿಸುವ ಪಟ್ಲ ಫೌಂಡೇಶನ್‌ನ ‘ಯಕ್ಷಗಾನಂ ವಿಶ್ವಗಾನಂ’ ಯೋಜನೆಗೆ ₹10 ಲಕ್ಷ ಮೊತ್ತದ ಪ್ರೋತ್ಸಾಹ ಧನದ ಚೆಕ್ ಅನ್ನು ಮೇಯರ್ ಮನೋಜ್ ಕುಮಾರ್ ಅವರು ಪಟ್ಲ ಫೌಂಡೇಶನ್ ಕೇಂದ್ರೀಯ ಸಮಿತಿಯ ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ಅವರಿಗೆ ಹಸ್ತಾಂತರಿಸಿದರು.
ಪಾಲಿಕೆಯ ಉಪಮೇಯರ್ ಭಾನುಮತಿ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿಪಕ್ಷ ನಾಯಕ ಅನಿಲ್ ಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷರಾದ ಮನೋಹರ್ ಶೆಟ್ಟಿ, ಸುಮಿತ್ರಾ ಕರಿಯ, ಸರಿತಾ ಶಶಿಧರ್, ವೀಣಾ ಮಂಗಳ, ಸದಸ್ಯ ಶಶಿಧರ ಹೆಗ್ಡೆ ಇದ್ದರು.
