
ಬೆಂಗಳೂರು: ಬೆಂಗಳೂರು ಮೆಟ್ರೋ ದರ ಏರಿಕೆ ವಿರುದ್ದ ಸಾರ್ವಜನಿಕರ ಆಕ್ರೋಶದ ನಂತರ ಬೆಂಗಳೂರು ಮೆಟ್ರೋ ಪ್ರಯಾಣ ದರವನ್ನು ಶೇ.30ರಷ್ಟು ಕಡಿತಗೊಳಿಸಲಾಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಡುತ್ತಿದ್ದಾರೆ. ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಇತ್ತೀಗೆ ಏರಿಸಲಾಗಿದ್ದ ಮೆಟ್ರೋ ದರ ಏರಿಕೆಯನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಬಿ ಎಂ ಆರ್ ಸಿ ಎಲ್ ಹೇಳಿಕೆಯಲ್ಲಿ ತಿಳಿಸಿದ್ದು, ಶೇ. 30 ರಷ್ಟು ಕಡಿತವನ್ನು ತಕ್ಷಣವೇ ಜಾರಿಗೆ ತರಲಾಗುವುದು ಎಂದಿದೆ.
ವಿವರಗಳನ್ನು ನೀಡುತ್ತಾ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್, ಮಂಡಳಿಯು ಸಾರ್ವಜನಿಕ ಪ್ರತಿಕ್ರಿಯೆಯನ್ನು ಪರಿಶೀಲಿಸಿದೆ ಮತ್ತು ನಿರ್ದಿಷ್ಟ ಹಂತಗಳಲ್ಲಿ ಪ್ರಯಾಣ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಈ ವಿಷಯವನ್ನು ಪರಿಶೀಲಿಸಲು BMRCL ಮತ್ತು ಮಂಡಳಿಯು ಸಭೆ ನಡೆಸಿದ್ದು, ದರ ನಿಗದಿ ಸಮಿತಿಯ ಒಟ್ಟಾರೆ ಸಲಹೆಗಳನ್ನು ಪರಿಶೀಲಿಸಲಾಗಿದೆ. ಈ ಸಲಹೆಗಳನ್ನು ಆಧರಿಸಿ, ವಿವಿಧ ಹಂತಗಳಲ್ಲಿ ಅಸಹಜವಾಗಿ ಏರಿಕೆಯಾಗಿರುವ ಕೆಲವು ಬೆಲೆಗಳಿಗೆ ತಿದ್ದುಪಡಿ ಮಾಡಲು ಮಂಡಳಿಯು ನಿರ್ಧರಿಸಿದೆ ಎಂದಿದ್ದಾರೆ.
ಕಳೆದ ವಾರವಷ್ಟೇ ಬೆಂಗಳೂರು ಮೆಟ್ರೋ ಗರಿಷ್ಠ ದರವನ್ನು 60 ರೂ.ನಿಂದ 90 ರೂ.ಗೆ ಹೆಚ್ಚಿಸಲಾಗಿದ್ದು, ಕನಿಷ್ಠ ಬ್ಯಾಲೆನ್ಸ್ ಅನ್ನು 50 ರೂ.ನಿಂದ 90 ರೂ.ಗೆ ಹೆಚ್ಚಿಸಲಾಗಿತ್ತು. ಇದೀಗ ಶೇ. ಶೇ.30ರಷ್ಟು ಕಡಿತ ಮಾಡಲಾಗಿದೆ.
ಹೊಸ ದರಗಳು ಇಂತಿವೆ:
0-2 ಕಿಲೋಮೀಟರ್ ನಡುವಿನ ಪ್ರಯಾಣದ ದರ 10 ರೂ. 2 ರಿಂದ 4 ಕಿಮೀ – ರೂ 20, 4 ರಿಂದ 6 ಕಿಮೀ – ರೂ 30, 6 ರಿಂದ 8 ಕಿಮೀ – ರೂ 40, 8 ರಿಂದ 10 ಕಿಮೀ – ರೂ 50, 10 ರಿಂದ 12 ಕಿಮೀ – ರೂ 60, 15 ರಿಂದ 20 ಕಿಮೀ – ರೂ 70, 20 ರಿಂದ 25 ಕಿಮೀ – ರೂ 80, 25 ರಿಂದ 30 ಕಿಮೀ ಮತ್ತು ಅದಕ್ಕಿಂತ ಹೆಚ್ಚಿನ ದೂರಕ್ಕೆ ರೂ 90.
