Home ಕರ್ನಾಟಕ ಕರಾವಳಿ ಯಕ್ಷಗಾನ, ಕಂಬಳವನ್ನು ಉಳಿಸುವ ಜವಾಬ್ದಾರಿ ನಮ್ಮದು: ಯು.ಟಿ. ಖಾದರ್

ಯಕ್ಷಗಾನ, ಕಂಬಳವನ್ನು ಉಳಿಸುವ ಜವಾಬ್ದಾರಿ ನಮ್ಮದು: ಯು.ಟಿ. ಖಾದರ್

0
ಯಕ್ಷಗಾನ, ಕಂಬಳವನ್ನು ಉಳಿಸುವ ಜವಾಬ್ದಾರಿ ನಮ್ಮದು: ಯು.ಟಿ. ಖಾದರ್

ಉಡುಪಿ: ಯಕ್ಷಗಾನ ಮತ್ತು ಕಂಬಳವು ಕರಾವಳಿಯ ಎರಡು ಕಣ್ಣುಗಳಿದ್ದಂತೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದರು.

ಭಾನುವಾರ ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಕ್ಷಗಾನ ಕಲೆಯ ಮಹತ್ವವನ್ನು ಮಕ್ಕಳ ಪೋಷಕರಿಗೆ ತಿಳಿಸಿಕೊಡುವ ಕೆಲಸವಾಗಬೇಕು. ಹಾಗೆ ಮಾಡಿದಲ್ಲಿ ಅವರು ತಮ್ಮ ಮಕ್ಕಳನ್ನು ಈ ಕ್ಷೇತ್ರಕ್ಕೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ. ಇಂದು ಪಾಶ್ಚಾತ್ಯ ಸಂಸ್ಕೃತಿ ಎಷ್ಟೇ ಬೆಳೆದರೂ ಕರಾವಳಿಯ ಸಂಸ್ಕೃತಿಯನ್ನು ಮೆಟ್ಟಿ ಹೋಗಲು ಸಾಧ್ಯವಿಲ್ಲ ಎಂದರು.

ಯಕ್ಷಗಾನ ಹಿಮ್ಮೇಳ ವಾದಕ ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಯನ್ನು ಇಲ್ಲಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ₹1 ಲಕ್ಷ ನಗದು ಒಳಗೊಂಡಿದೆ.

ಯಕ್ಷಗಾನ ತೆಂಕುತಿಟ್ಟು ಕಲಾವಿದರಾದ ಬೆಳ್ತಂಗಡಿಯ ಕೊಳ್ತಿಗೆ ನಾರಾಯಣ ಗೌಡ, ಕಾಸರಗೋಡಿನ ಸುಬ್ರಾಯ ಹೊಳ್ಳ, ಬಡಗುತಿಟ್ಟು ಕಲಾವಿದ ಕುಂದಾಪುರದ ಕೋಡಿ ವಿಶ್ವನಾಥ ಗಾಣಿಗ, ಪ್ರಸಾಧನ ಕಲಾವಿದ ಬಂಟ್ವಾಳದ ರಾಘವ ದಾಸ್, ಮೂಡಲಪಾಯ ಯಕ್ಷಗಾನ ಕಲಾವಿದ ತುಮಕೂರಿನ ಕಾಂತರಾಜು ಅವರಿಗೆ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ತಲಾ ₹50 ಸಾವಿರ ನಗದು ಒಳಗೊಂಡಿದೆ.

ತೆಂಕುತಿಟ್ಟು ಅರ್ಥಧಾರಿ ಕಾಸರಗೋಡಿನ ಅಡ್ಕ ಗೋಪಾಲಕೃಷ್ಣ ಭಟ್‌, ಹಾಸ್ಯಗಾರ ಕಾಸರಗೋಡಿನ ಮವ್ವಾರು ಬಾಲಕೃಷ್ಣ ಮಣಿಯಾಣಿ, ಬಣ್ಣದ ವೇಷಧಾರಿ ಮಂಗಳೂರಿನ ಉಮೇಶ್‌ ಕುಪ್ಪೆಪದವು, ಸ್ತ್ರೀ ವೇಷಧಾರಿ ಮಂಗಳೂರಿನ ಸುರೇಂದ್ರ ಮಲ್ಲಿ, ಬಡಗುತಿಟ್ಟು ಕಲಾವಿದ ಉಡುಪಿಯ ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ, ಸ್ತ್ರೀ ವೇಷಧಾರಿ ಶಿವಮೊಗ್ಗದ ಶಿವಾನಂದ ಗೀಜಗಾರು, ಸ್ತ್ರೀ ವೇಷಧಾರಿ ಹೊನ್ನಾವರದ ಮುಗ್ವಾ ಗಣೇಶ್‌ ನಾಯ್ಕ, ಭಾಗವತ ಮಂಗಳೂರಿನ ಅಂಡಾಲ ದೇವಿಪ್ರಸಾದ ಶೆಟ್ಟಿ, ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರಾದ ಚಿಕ್ಕಮಗಳೂರಿನ ಹಳುವಳ್ಳಿ ಜ್ಯೋತಿ, ಮೂಡಲಪಾಯ ಕಲಾವಿದ ಬೆಂಗಳೂರು ಗ್ರಾಮಾಂತರದ ಕೃಷ್ಣಪ್ಪ ಅವರಿಗೆ 2024ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು ₹25 ಸಾವಿರ ನಗದು ಒಳಗೊಂಡಿದೆ.

₹25 ಸಾವಿರ ನಗದು ಒಳಗೊಂಡಿರುವ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಯನ್ನು ತೆಂಕುತಿಟ್ಟು ಕಲಾವಿದ ಬಂಟ್ವಾಳದ ಕರ್ಗಲ್ಲು ವಿಶ್ವೇಶ್ವರ ಭಟ್ಟ ಅವರಿಗೆ ನೀಡಲಾಯಿತು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್, ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ನಿ.ಬೀ. ವಿಜಯ ಬಲ್ಲಾಳ್, ಮಣಿಪಾಲ ಮಾಹೆಯ ಸಹ ಕುಲಪತಿ ಡಾ.ನಾರಾಯಣ ಸಭಾಹಿತ್ ಉಪಸ್ಥಿತರಿದ್ದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಎನ್. ಸ್ವಾಗತಿಸಿದರು.

 

 

 

LEAVE A REPLY

Please enter your comment!
Please enter your name here