
ಮಣಿಪಾಲ: ಇಲ್ಲಿನ ಶಿವಪಾಡಿ ದೇವಳದ ಅಭಿವೃದ್ಧಿ ಟ್ರಸ್ಟ್ ಹಾಗೂ ಶಿವಪಾಡಿ ವೈಭವ ಆಚರಣಾ ಸಮಿತಿಯ ವತಿಯಿಂದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶಿವರಾತ್ರಿಯ ಅಂಗವಾಗಿ ಫೆ. 22 ರಿಂದ 26ರವರೆಗೆ ಐದು ದಿನಗಳ ಕಾಲ ‘ಶಿವಪಾಡಿ ವೈಭವ’ ಕಾರ್ಯಕ್ರಮ ನಡೆಯಲಿದ್ದು, ಯಕ್ಷಗಾನ, ಕೃಷಿ, ಆರೋಗ್ಯ, ಆಹಾರ ಮೇಳಗಳು ನಡೆಯಲಿವೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಕಾರ್ಯಮ್ರವನ್ನು ಫೆ. 22ರಂದು ಸಾಯಂಕಾಲ 4 ಗಂಟೆಗೆ ಧರ್ಮಸ್ಥಳದ ಧಮಾರ್ಧಿಕಾರಿ ಡಿ. ವಿರೇಂದ್ರ ಹೆಗ್ಗಡೆ ಇವರು ಉದ್ಘಾಟಿಸಲಿದ್ದಾರೆ. ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕೃಷಿ ಮೇಳ : 22ರಿಂದ 26ರವರೆಗೆ ಪ್ರತಿದಿನ ನಡೆಯುವ ಕೃಷಿ ಮೇಳದಲ್ಲಿ ಕೃಷಿ ಗೋಷ್ಠಿ, ವಸ್ತು ಪ್ರದರ್ಶನ ಹಾಗೂ 250ಕ್ಕೂ ಹೆಚ್ಚು ಕೃಷಿ ಮಳಿಗೆಗಳನ್ನು ತೆರೆಯಲಾಗುವುದು. ಮೇಳದಲ್ಲಿ 50 ಮಂದಿ ಕೃಷಿ ಸಾಧಕರನ್ನು ಸನ್ಮಾನಿಸಲಾಗುವುದು.
ಆಹಾರ ಮೇಳ : ಆಹಾರ ಮೇಳದಲ್ಲಿ 250ಕ್ಕೂ ಅಧಿಕ ಶುದ್ಧ ದೇಸಿ ಶಾಖಾಹಾರಿ ಖಾದ್ಯ, ತಿಂಡಿ- ತಿನಿಸುಗಳ ಮಳಿಗೆಗಳು ಇರಲಿವೆ.
ಮನೋರಂಜನಾ ಮೇಳ: ಮಕ್ಕಳು ಹಾಗೂ ಹಿರಿಯರಿಗಾಗಿ ಮನೋರಂಜನಾ ಮೇಳವೂ ಇರಲಿದ್ದು ಅಮ್ಯೂಸ್ಮೆಂಟ್ ಪಾರ್ಕ್ ಗಮನ ಸೆಳೆಯಲಿದೆ.
ಆರೋಗ್ಯ ಮೇಳ: ಪ್ರತಿದಿನವೂ ಹೆಸರಾಂತ ಆಸ್ಪತ್ರೆಗಳು ಹಾಗೂ ಆರೋಗ್ಯ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಮೇಳ ನಡೆಯಲಿದ್ದು, ನೇತ್ರ ಉಚಿತ ತಪಾಸಣೆ, ಕನ್ನಡಕ ವಿತರಣೆ, ಉಚಿತ ಯೋಗ ತರಬೇತಿ ಇರಲಿದೆ.
ಯಕ್ಷ ಮೇಳ: ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಪ್ರದರ್ಶನ ಇರಲಿದೆ. ಪ್ರತಿರಾತ್ರಿ ವಿವಿಧ ಮೇಳಗಳಿಂದ ಬಯಲಾಟ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮ: ದೇವಳದಲ್ಲಿ ಧಾರ್ಮಿಕ ವೈಭವವೂ ಇರಲಿದ್ದು ನಾರೀಕೇಳ ಗಣಯಾಗ, ಮೂಡುಗಣಪತಿ ಸೇವೆ, ದುರ್ಗಾ ಹೋಮ ಶಿವಪಂಚಾಕ್ಷರಿ ಮಹಾಮಂತ್ರ ಹೋಮ, ನಾಗ ದೇವರಿಗೆ ಪವಮಾನ ಕಲಶ, ಮಹಾಶಿವರಾತ್ರಿ ದಿನ ಬೆಳಗ್ಗೆಯಿಂದ ಪಂಚಾಮೃತ ಅಭಿಷೇಕ ಪುರಸ್ಪರ ಅಷ್ಟೋತ್ತರ ಸಹಸ್ರ ಬಿಲ್ವಾರ್ಚನೆ, ಮಹಾರಂಗಪೂಜೆ ನಡೆಯಲಿದೆ.
ಸಮಾರೋಪ ಸಮಾರಂಭ: ಫೆ.26 ರಂದು ಸಾಯಂಕಾಲ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಗೃಹಸಚಿವ ಜಿ.ಪರಮೇಶ್ವರ್ ಭಾಗವಹಿಸಲಿದ್ದಾರೆ ಎಂದು ರಘುಪತಿ ಭಟ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದೇವಳದ ಆಡಳಿತ ಮೊಕ್ತೇಸರ ಮಹೇಶ್ ಠಾಕೂರ್, ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಟ್ರಸ್ಟಿಗಳಾದ ಸತೀಶ್ ಪಾಟೀಲ್, ಶುಭಕರ್ ಸಾಮಂತ್, ಪ್ರಕಾಶ್ ಪ್ರಭು, ಅಶೋಕ್ ಸಾಮಂತ್, ಸಾಂಸ್ಕೃತಿಕ ಕಾರ್ಯದರ್ಶಿ ನಾಗರಾಜ್ ಕಾಮತ್, ಆರೋಗ್ಯ ಮೇಳದ ಉಸ್ತುವಾರಿ ಡಾ.ರೇಷ್ಮಾ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಂಜುನಾಥ್, ಶಿವಪಾಡಿ ವೈಭವ ಆಚರಣಾ ಸಮಿತಿಯ ಪ್ರ.ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ದೇವಳದ ಅಭಿವೃದ್ಧಿ ಟ್ರಸ್ಟ್ನ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ಉಪಸ್ಥಿತರಿದ್ದರು.
