
ಮಂಗಳೂರು: ಶಿರಾಡಿ ಮತ್ತು ಚಾರ್ಮಾಡಿ ಘಾಟ್ ಹೆದ್ದಾರಿಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ಜೂನ್ ವೇಳೆಗೆ ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಅವರು ಮಂಗಳವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫೆಬ್ರವರಿ 21 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಸಭೆ ನಡೆಸಲಾಗುವುದು, ಸಭೆಯಲ್ಲಿ ದಕ್ಷಿಣ ಕನ್ನಡದಲ್ಲಿ ಬಾಕಿ ಇರುವ ರಸ್ತೆ ಕಾಮಗಾರಿಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇತುವೆಗಳ ಪರಿಶೀಲನೆ ನಡೆಸಲಾಗಿದ್ದು, ಸೇತುವೆಗಳ ದುರಸ್ತಿ ಹಾಗೂ ಹೊಸ ಸೇತುವೆಗಳ ನಿರ್ಮಾಣಕ್ಕೆ ಸಂಬಂಧಿಸಿ ಅನುದಾನ ಬಿಡುಗಡೆಗೊಳಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಸೇರಿದಂತೆ ಮರಳುಗಾರಿಕೆ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಮರಳುಗಾರಿಕೆ ವಿಚಾರ ಜಠಿಲವಾಗಿದೆ. ಸೇತುವೆಗಳ ಕೆಳಗೂ ಮರಳುಗಾರಿಕೆ ನಡೆಸುವ ಮೂಲಕ ಅವ್ಯಾಹತ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ವ್ಯಕ್ತವಾಗಿವೆ. ಈ ಬಗ್ಗೆ ಕಂದಾಯ, ಲೋಕೋಪಯೋಗಿ ಇಲಾಖೆ, ಗಣಿ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಮಂಗಳೂರಿನಲ್ಲಿ ಇನ್ನೊಂದು ಸರ್ಕ್ಯೂಟ್ ಹೌಸ್ ನಿರ್ಮಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಸಚಿವರಿಗೆ ಮನವಿ ಸಲ್ಲಿಸಿದರು.
ಕದ್ರಿಯಲ್ಲಿರುವ ಹೊಸ ಸರ್ಕ್ಯೂಟ್ ಹೌಸ್ ನಲ್ಲಿ ವಿಐಪಿಗಳು ಯಾವಾಗಲೂ ಬರುತ್ತಿರುತ್ತಾರೆ. ಹಾಗಾಗಿ ಅಲ್ಲಿ ಹಳೆ ಬಂಗಲೆಯನ್ನು ದುರಸ್ತಿಪಡಿಸಬೇಕು. ಹೊಸ ಬಂಗಲೆಯನ್ನು ಪ್ರಧಾನಿ ಅಥವಾ ರಾಷ್ಟ್ರಪತಿ ಮೊದಲಾದ ಗಣ್ಯರಿಗಾಗಿ ಮೀಸಲಿಡಬೇಕು ಎಂದು ಶಾಸಕರು ಆಗ್ರಹಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.
ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಚಾರ್ಮಾಡಿ ಘಾಟ್ ಹೆದ್ದಾರಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಗುತ್ತಿಗೆದಾರರು ಇನ್ನೂ ಕೆಲಸವನ್ನು ಪೂರ್ಣಗೊಳಿಸಿಲ್ಲ ಎಂದು ಹೇಳಿದರು. ಬೇರೆ ಗುತ್ತಿಗೆದಾರರಿಗೆ ಟೆಂಡರ್ ಹಸ್ತಾಂತರಿಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಳೆಗಾಲ ಆರಂಭಕ್ಕೂ ಮುನ್ನ ಪರ್ಯಾಯ ಟೆಂಡರ್ ಕರೆದು ಕಾಮಗಾರಿಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
