
ಉಡುಪಿ: ಅನಧಿಕೃತ ನಿವೇಶನ ಮತ್ತು ಮನೆಗಳಿಗೆ ಮುಂದಿನ ಮೂರು ತಿಂಗಳೊಳಗೆ ‘ಬಿ’ಖಾತಾ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಯಾವುದೇ ಅನಧಿಕೃತ ಬಡಾವಣೆಗಳಿಗೆ ಅವಕಾಶಗಳಿಲ್ಲ. ಹಾಗೆ ಮಾಡಿದರೆ ಕಾನೂನು ಪ್ರಕಾರ ದಂಡನೆ ವಿಧಿಸಲು ಅವಕಾಶವಿದೆ ಎಂದರು.
2024ರ ಸೆಪ್ಟೆಂಬರ್ 10ರೊಳಗೆ ಅನಧಿಕೃತವಾಗಿ ರಚನೆಯಾಗಿರುವ ಎಲ್ಲಾ ನಿವೇಶನ, ಮನೆಗಳಿಗೆ ‘ಬಿ’ ಖಾತಾ ನೀಡಲಾಗುವುದು. ಇದನ್ನು ನಮ್ಮ ಜಿಲ್ಲೆಯ ನಗರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಂದೋಲನದ ರೀತಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಕಚೇರಿಗಳಿಗೆ ತೆರಳಿ ಸೂಕ್ತ ದಾಖಲೆಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬೇಕು. ಈ ಸಲ ಎರಡು ಪಟ್ಟು ತೆರಿಗೆ ಕಟ್ಟಬೇಕಾಗುತ್ತದೆ. ಮುಂದಿನ ವರ್ಷಗಳಲ್ಲಿ ಸಾಮಾನ್ಯ ರೀತಿಯಲ್ಲಿ ತೆರಿಗೆ ಕಟ್ಟಿದರೆ ಸಾಕಾಗುತ್ತದೆ ಎಂದರು.
