
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಬಿಸಿಲ ಝಳ ಹೆಚ್ಚಾಗುತ್ತಿದೆ. ಇದಿನ್ನೂ ಫೆಬ್ರವರಿ ತಿಂಗಳೇ ಮುಗಿದಿಲ್ಲ, ಅದಾಗಲೇ ಬೇಸಗೆಯ ಬಿಸಿ ಚುರುಗುಟ್ಟುವಂತಿದೆ. ಬಿಸಿಲ ಬೇಗೆಗೆ ಹೊರಗೆ ಕಾಲಿಡುವುದೇ ಬೇಡ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಬಿಸಿಲ ಝಳ ಇನ್ನೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮುಂದಿನ ಐದು ದಿನ ತಾಪಮಾನದಲ್ಲಿ ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಯಲುಸೀಮೆ , ಉತ್ತರ ಕರ್ನಾಟಕ ಮಾತ್ರವಲ್ಲದೆ ಬೆಂಗಳೂರಲ್ಲೂ ಬಿಸಿಲಿನ ಬೇಗೆ ಹೆಚ್ಚಾಗಿದೆ. ಮಾರ್ಚ್ನಿಂದ ಬೇಸಿಗೆ ಆರಂಭಗೊಳ್ಳಲಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿಲು ಹಾಗೂ ಸೆಕೆ ಇರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಬಹುತೇಕ ಜಿಲ್ಲೆಗಳಲ್ಲಿ ಫೆಬ್ರವರಿ ಮೊದಲ ವಾರವೇ 32ರಿಂದ 37 ಡಿಗ್ರಿಯವರೆಗೂ ತಾಪಮಾನ ದಾಖಲಾಗುತ್ತಿದ್ದು ಮಾರ್ಚ್ ತಿಂಗಳಲ್ಲಿ ಇದು ಇನ್ನೂ ಏರಿಕೆಯಾಗುವ ಸಂಭವವಿದೆ. ಕರಾವಳಿ ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನ 33-34°C, ಉತ್ತರ ಒಳನಾಡಿನ ಕರ್ನಾಟಕದ ಪ್ರದೇಶಗಳಲ್ಲಿ 34 ರಿಂದ 37°C, ಆಗುಂಬೆ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು, ಚಿಂತಾಮಣಿ ಮತ್ತು ಮಡಿಕೇರಿಗಳಲ್ಲಿ 31-33°C ಮತ್ತು ದಕ್ಷಿಣ ಒಳನಾಡಿನ ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಮತ್ತು ಶಿವಮೊಗ್ಗಗಳಲ್ಲಿ 34-37°C ನಷ್ಟು ದಾಖಲಾಗಿದೆ.
ಮುಂದಿನ ಐದು ದಿನಗಳ ಕಾಲ ಕರಾವಳಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೆ, ಉತ್ತರ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಲಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-4°C ಮತ್ತು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ 2-3°C ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3°C ರಷ್ಟು ಹೆಚ್ಚಾಗುವ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ 1-2°C ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
