
ಕಾಪು: ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ.25ರಿಂದ ಮಾ.5 ರವರೆಗೆ ನೆರವೇರಲಿದ್ದು, ಆ ಪ್ರಯುಕ್ತ ಭಾನುವಾರದಂದು ಉಡುಪಿ ಜಿಲ್ಲೆಯಿಂದ ಉತ್ತರ ವಾಹಿನಿ ಹೊರಕಾಣಿಕೆ ಮೆರವಣಿಗೆ ದೇವಳವನ್ನು ತಲುಪಿತು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಮ್.ಎನ್. ರಾಜೇಂದ್ರ ಕುಮಾರ್ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಬ್ರಹ್ಮಾವರ, ಕಾರ್ಕಳ, ಕಾಪು ತಾಲೂಕಿನಾಧ್ಯಂತ ಸಮರ್ಪಿಸಲ್ಪಡುವ ಹಸಿರು ಹೊರೆಕಾಣಿಕೆ ಪಾಂಗಾಳ ಸೇತುವೆ ಬಳಿಯಿಂದ ಹೊರಟ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ ಮೂಲಕ ಕಾಪು ಪೇಟೆಯಿಂದ ಹೊಸ ಮಾರಿಗುಡಿ ತಲುಪಿತು.
ದಕ್ಷಿಣ ಹಾಗೂ ಉತ್ತರ ವಾಹಿನಿ ಕಡೆಯಿಂದ ಎರಡು ದಿನಗಳ ಕಾಲ ನಡೆದ ಹೊರೆ ಕಾಣಿಕೆ ಸಮರ್ಪಣೆಯಲ್ಲಿ ಅಕ್ಕಿ, ಬೆಲ್ಲ, ಬೇಳೆ, ವಿವಿಧ ರೀತಿಯ ತರಕಾರಿಗಳು ಸಹಿತ ಇನ್ನಿತರ ದವಸ ಧಾನ್ಯಗಳು 500ಕ್ಕೂ ಅಧಿಕ ಹೊರೆಕಾಣಿಕೆ ವಾಹನಗಳಲ್ಲಿ ಹರಿದು ಬಂತು.
ಶನಿವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಿಂದ ದಕ್ಷಿಣ ವಾಹಿನಿ ಹೊರೆಕಾಣಿಕೆ ಸಮರ್ಪಣೆ ನಡೆದಿದ್ದರೆ, ಭನುವಾರದಂದು ಉಡುಪಿ ಜಿಲ್ಲೆಯಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಮೆರವಣಿಗೆಯಲ್ಲಿ ಕೇಸರಿ ಪೇಟ ತೊಟ್ಟ ಪುರುಷರು ಮತ್ತು ಮಹಿಳೆಯರು, ನವೋದಯ ಸ್ವಸಹಾಯ ಗುಂಪು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಮತ್ತು ಮಹಿಳೆಯರು ಮತ್ತು ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕುಣಿತ ಭಜನೆ, ಮಹಿಳೆಯರ ಡೊಳ್ಳು ಕುಣಿತ, ಪುರುಷರು, ಮಹಿಳೆಯರು ಹಾಗೂ ಮಕ್ಕಳ ಭಜನಾ ತಂಡ, ಡೋಲು ವಾದನ, ತಾಲೀಮು, ಕೊಂಬು, ಬಿರುದಾವಳಿ, ಕೀಲು ಕುದುರೆ, ವಿವಿಧ ರೀತಿಯ ಟ್ಯಾಬ್ಲೋ, ಡೋಲು, ಹುಲಿ ವೇಷ ಕುಣಿತ, ವೀರಗಾಸೆ ನೃತ್ಯ, ಚೆಂಡೆ ಸಹಿತ ವಿವಿಧ ವೇಷಗಳು ಮೆರವಣಿಗೆಯಲ್ಲಿ ರಂಗು ತಂದಿತು.
ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಸಾಯಿ ಈಶ್ವರ್ ಗುರೂಜಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ. ರಘಪತಿ ಭಟ್, ಪುಣೆ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ, ಪ್ರಮುಖರಾದ ಹರಿಯಪ್ಪ ಕೋಟ್ಯಾನ್, ಸುಗ್ಗಿ ಸುಧಾಕರ ಶೆಟ್ಟಿ, ರೋಷನ್ ಕುಮಾರ್ ಶೆಟ್ಟಿ, ಸಂದೀಪ್ ಶೆಟ್ಟಿ ಮುಂಬಯಿ, ಮಾಧವ ಪಾಲನ್, ಭಗವಾನ್ ದಾಸ್ ಶೆಟ್ಟಿಗಾರ್ ಯೋಗೀಶ್ ವಿ. ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಡಾ.ಸುನೀತಾ ಶೆಟ್ಟಿ, ಮೋಹನ ಬಂಗೇರ, ಶಾಂತಲತಾ ಶೆಟ್ಟಿ, ಹರೀಶ್ ನಾಯಕ್ ಕಾಪು, ಶ್ರೀಕರ ಶೆಟ್ಟಿ ಕಲ್ಯ, ಅರುಣ್ ಶೆಟ್ಟಿ ಪಾದೂರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಪರ್ಯಾಯ ಪುತ್ತಿಗೆ ಮಠದಿಂದ ವಿಶೇಷ ಹೊರೆ ಕಾಣಿಕೆ:
ಕಾಪು ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ವಿಶೇಷ ಹೊರೆ ಕಾಣಿಕೆಯನ್ನು ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಠದ ದೀವಾನರಾದ ನಾಗರಾಜ ಆಚಾರ್ಯ, ರವೀಂದ್ರ ಆಚಾರ್ಯ, ಮಠದ ಕೊಟ್ಟಾರಿಗಳಾದ ನಾಗರಾಜ ತಂತ್ರಿ,ಸತ್ಯ ನಾರಾಯಣ ಭಟ್ ಉಪಸ್ಥಿತರಿದ್ದರು.
