
ಬೆಂಗಳೂರು: ಮರಾಠಿ ಭಾಷೆ ಮಾತನಾಡದ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ಬೆನ್ನಲ್ಲೇ ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಈ ನಡುವಲ್ಲೇ ಉಭಯ ರಾಜ್ಯಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.
ಏತನ್ಮಧ್ಯೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸ್ ಕಂಡಕ್ಟರ್ ಮಹದೇವಪ್ಪ ಹುಕ್ಕೇರಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, ನಮ್ಮ ಬಸ್ಸಿಗೆ ಅವರು ಮಸಿ ಬಳಿಯುವುದು, ಅವರ ಬಸ್ಸಿಗೆ ನಾವು ಮಸಿ ಬಳಿಯುವುದರಲ್ಲಿ ಅರ್ಥವಿಲ್ಲ. ಮಹಾರಾಷ್ಟ್ರದವರು ಇಲ್ಲಿ ಬರಬೇಕು, ನಮ್ಮವರು ಅಲ್ಲಿಗೆ ಹೋಗಬೇಕು. ಮಹಾರಾಷ್ಟ್ರ ಸರ್ಕಾರ ಕೂಡಾ ತಪ್ಪು ಮಾಡಿದವರನ್ನು ಬೆಂಬಲಿಸಬಾರದು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರಕ್ಕೆ ಹೋಗುವ ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಬಸ್‌ಗಳ ಸಂಚಾರವೂ ಸ್ಥಗಿತಗೊಂಡಿದೆ. ಅವಶ್ಯಕತೆ ಬಿದ್ದರೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದಿದ್ದಾರೆ.
ಬಸ್‌ಗಳಿಗೆ ಕಪ್ಪು ಬಣ್ಣ ಬಳಿಯುವಂತಹ ವರ್ತನೆ ಎರಡೂ ರಾಜ್ಯಗಳಿಗೆ ನಷ್ಟ ಮತ್ತು ಜನರಿಗೆ ಅನಾನುಕೂಲವನ್ನುಂಟು ಮಾಡುತ್ತವೆ. ಶಿವಸೇನೆಯು ಸಣ್ಣ ವಿಷಯಗಳಿಗೆ ಮಹಾರಾಷ್ಟ್ರದ ಜನರನ್ನು ಪ್ರಚೋದಿಸುವುದನ್ನು ನಿಲ್ಲಿಸಿ, ಶಾಂತಿ ಮತ್ತು ಸಾಮರಸ್ಯವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದ್ದಾರೆ.
