
ಕಾಪು: ಮಾರಿಯಮ್ಮ ದೇವಿಯ ಪವಾಡದಿಂದಾಗಿ ಗುಡಿಯ ಸಮಗ್ರ ಜೀರ್ಣೋದ್ಧಾರ ಸಾಧ್ಯವಾಗಿದ್ದು, ದಶಕಗಳ ತಪಸ್ಸು,ಕಠಿಣ ಪರಿಶ್ರಮ ಮತ್ತು ಭಕ್ತ ಸಂದೋಹದ ಸೇವೆಯ ಫಲವಾಗಿ ಹೊಸ ಮಾರಿಗುಡಿ ನಿರ್ಮಾಣಗೊಂಡಿದೆ. ಅಮ್ಮನಿಂದ ಪಡೆದಿರುವುದನ್ನು ಅಮ್ಮನಿಗೇ ಸಮರ್ಪಿಸುವ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗುತ್ತಿದ್ದೇವೆ. ಮುಂದೆ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಮೂಲಕ ಅಮ್ಮನ ಆರಾಧನೆಗೆ ಮತ್ತಷ್ಟು ಶಕ್ತಿ ತುಂಬಿದಂತಾಗುತ್ತದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆ ಹೇಳಿದರು.
ಬುಧವಾರದಂದು ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ ಮಾತನಾಡಿ, ಕಾಪುವಿನ ಅಮ್ಮನ ಸನ್ನಿಧಾನದಲ್ಲಿ ನಡೆದಿರುವ ಜೀರ್ಣೋದ್ಧಾರ ಯೋಜನೆಗಳು ನಮ್ಮೆಲ್ಲರ ಪಾಲಿಗೆ ಸಿಕ್ಕಿರುವ ದೊಡ್ಡ ಸೌಭಾಗ್ಯ. ಐತಿಹಾಸಿಕ ನಿರ್ಮಾಣ ಯೋಜನೆಯು ಕಾಪುವಿನ ಚಿತ್ರಣವನ್ನು ಬದಲಿಸಿದೆ. ಮುಂದಿನ ದಿನಗಳಲ್ಲಿ ಹೊಸ ಮಾರಿಗುಡಿಯನ್ನು ಪ್ರತಿದಿನ ದೇವರ ದರ್ಶನಕ್ಕೆ ತೆರೆದಿಡಲು ಸಂಕಲ್ಪಿಸಲಾಗಿದೆ ಎಂದರು.
ನಟರಾಜ ಪರ್ಕಳ ಬರೆದಿರುವ ‘ನವದುರ್ಗಾ ಚರಿತಂ’ ಪುಸ್ತಕವನ್ನು ಸಮಿತಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕಚ್ಚಾರು ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ಗೋಕುಲ್‌ದಾಸ್, ಮಲ್ಲಾರು ರಾಣೆಯರ್ ಸಮಾಜ ಸೇವಾ ಸಂಘದ ಅಧ್ಯಕ್ಷ ನಾಗಾರ್ಜುನ ಕಾಪು ಶುಭಾಶಂಸನೆಗೈದರು.
ಬೆಂಗಳೂರು ಸಮಿತಿ ಅಧ್ಯಕ್ಷ ಉಪೇಂದ್ರ ಶೆಟ್ಟಿ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಚಂದ್ರಹಾಸ ಡಿ. ಶೆಟ್ಟಿ ಬಂಟ್ವಾಳ, ಉದ್ಯಮಿ ಯುವರಾಜ್ ಸಾಲ್ಯಾನ್ ಮಸ್ಕತ್ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಸ್ವಾಗತಿಸಿ, ಪ್ರಸ್ತಾವಿಸಿದರು. ವೇದಿಕೆ ಸಮಿತಿಯ ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಪಕಳ ವಂದಿಸಿದರು.
