Home ಕರ್ನಾಟಕ ಕರಾವಳಿ ಶಿವಪಾಡಿ ವೈಭವ ಸಮಾರೋಪ: ಕೃಷಿ, ಆರೋಗ್ಯ, ಆಹಾರ ಮೇಳಕ್ಕೆ ಭರ್ಜರಿ ಸ್ಪಂದನೆ

ಶಿವಪಾಡಿ ವೈಭವ ಸಮಾರೋಪ: ಕೃಷಿ, ಆರೋಗ್ಯ, ಆಹಾರ ಮೇಳಕ್ಕೆ ಭರ್ಜರಿ ಸ್ಪಂದನೆ

0
ಶಿವಪಾಡಿ ವೈಭವ ಸಮಾರೋಪ: ಕೃಷಿ, ಆರೋಗ್ಯ, ಆಹಾರ ಮೇಳಕ್ಕೆ ಭರ್ಜರಿ ಸ್ಪಂದನೆ

ಉಡುಪಿ: ಭಾರತವು ವಿಶ್ವದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಜತೆಗೆ ಜಗತ್ತಿನ ಸುಸಂಸ್ಕೃತ ದೇಶವಾಗಿ ಮೇಳೈಸಬೇಕು. ಇದಕ್ಕಾಗಿ ಸಾಮಾಜಿಕ ಸಾಮರಸ್ಯ, ಪರಿಸರ ಜಾಗೃತಿ, ಸ್ವದೇಶಿ ಚಿಂತನೆ, ನಾಗರಿಕ ಶಿಷ್ಟಾಚಾರ ಪಾಲನೆ ಹಾಗೂ ಕೌಟುಂಬಿಕ ಸಂಸ್ಕಾರ ಅತಿ ಅಗತ್ಯ. ಶಿವನಂತೆ ಎಲ್ಲರೂ ಜಾಗೃತ ಸ್ಥಿತಿಯಲ್ಲಿದ್ದು ರಾಷ್ಟ್ರಕ್ಕೆ ಸಮರ್ಪಿತ ಬದುಕು ಬದುಕಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ| ಜಯಪ್ರಕಾಶ್‌ ಹೇಳಿದರು.

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಮತ್ತು ಶಿವಪಾಡಿ ವೈಭವ ಆಚರಣ ಸಮಿತಿಯಿಂದ ಆಯೋಜಿಸಿದ್ದ ಶಿವಪಾಡಿ ವೈಭವದ ಸಮಾರೋಪದ ಸಭಾ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವಿ. ಸುನಿಲ್‌ ಕುಮಾರ್‌, ದೇವಸ್ಥಾನಗಳು ಧಾರ್ಮಿಕ ಶ್ರದ್ಧಾ ಕೇಂದ್ರದ ಜತೆಗೆ ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆ ಬೆಳೆಸುವ ಕೇಂದ್ರವಾಗುತ್ತಿವೆ. ದೇಶದಲ್ಲಿ ಹೊಸ ಪರಿವರ್ತನೆಯ ಕಾಲಘಟ್ಟ ಇದಾಗಿದೆ. ದೇಶದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕಾರ್ಯವನ್ನು ಮಠ- ಮಂದಿರಗಳು ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಪಾಡಿ ವೈಭವ ಆಚರಣೆ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್‌, ಶಿವಪಾಡಿ ವೈಭವಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದೆ. ಆರಂಭದಲ್ಲಿ ಯಕ್ಷಗಾನ ಮಾತ್ರ ಮಾಡುವ ಇರಾದೆ ಇತ್ತಾದರೂ ಅನಂತರ ಅದು ವೈಭವದ ರೂಪ ಪಡೆಯಿತು. ಮುಂದೆ ಪ್ರತಿ ವರ್ಷವೂ ಶಿವಪಾಡಿ ವೈಭವ ಮಾಡಬಹುದಾದ ವಿಶ್ವಾಸ ಈಗ ಸಿಕ್ಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ, ಮಾಹೆ ವಿವಿ ಸಿಒಒ ಡಾ| ರವಿರಾಜ್‌ ಎನ್‌.ಎಸ್‌., ಉದ್ಯಮಿ ಪ್ರಸಾದ್‌ರಾಜ್‌ ಕಾಂಚನ್‌, ನಗರಸಭೆ ವಿಪಕ್ಷ ನಾಯಕ ರಮೇಶ್‌ ಕಾಂಚನ್‌ ಮೊದಲಾದವರು ಶಿವಪಾಡಿ ವೈಭವದ ಆಯೋಜನೆಯನ್ನು ಶ್ಲಾಘಿಸಿದರು.

ಸುಪ್ರೀಂ ಕೋರ್ಟ್‌ ವಕೀಲ ಶೇಖರ್‌ ದೇವಸ್ಯ, ವಿಧಾನ ಪರಿಷತ್‌ ಮಾಜಿ ಸದಸ್ಯ ದಯಾನಂದ ರೆಡ್ಡಿ ಹಾಗೂ ಕೃಷಿ ಸಾಧಕರಾದ ವಿಜಯಕುಮಾರ್‌ ಶೆಟ್ಟಿ ಕಾಲ್ದೊಡು, ಪದ್ಮನಾಭ ಅಡಿಗ ನೇರಳಕಟ್ಟೆ, ರಾಮಚಂದ್ರ ಅಲ್ಸೆ ಬೆಳ್ವೆ, ಹರಿಕೃಷ್ಣ ಹಂದೆ ಕೋಟತಟ್ಟು, ಶ್ರೀನಿವಾಸ ಭಟ್‌ ಇರ್ವತ್ತೂರು, ಶ್ರೀನಿವಾಸ ಮಜೂರು, ವಾಲ್ಟರ್‌ ಫುರ್ಟಾಡೋ ಕೆಳಾರ್ಕಳಬೆಟ್ಟು ಇವರನ್ನು ಸಮ್ಮಾನಿಸಲಾಯಿತು.

ಸಾರಸ್ವತ ಬ್ಯಾಂಕ್‌ ಉಡುಪಿ ಶಾಖಾ ವ್ಯವಸ್ಥಾಪಕ ಅಶೋಕ್‌ ಶಿರಾಲಿ, ಆರೆಸ್ಸೆಸ್‌ ಜಿಲ್ಲಾ ಮಾಜಿ ಸಂಘಚಾಲಕ ಶಂಭುಶೆಟ್ಟಿ, ಗುತ್ತಿಗೆದಾರ ಕಾರ್ತಿಕ್‌ ಆರ್‌. ನಾಯಕ್‌, ನಗರಸಭೆ ಸದಸ್ಯ ಶ್ರೀಶ ಕೊಡವೂರು, ವಕೀಲ ಕಳತ್ತೂರು ಉಮೇಶ್‌ ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತೇಸರ ಶುಭಕರ ಸಾಮಂತ್‌, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಶಾಶ್ವತ ಟ್ರಸ್ಟಿ ದಿನೇಶ್‌ ಸಾಮಂತ್‌, ಆಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕುಕ್ಕೆಹಳ್ಳಿ, ಸಂಘಟನ ಕಾರ್ಯದರ್ಶಿ ನಾಗರಾಜ ಕಾಮತ್‌ ಮೊದಲಾದವರಿದ್ದರು.

ಆಡಳಿತ ಮೊಕ್ತೇಸರ ಮಹೇಶ್‌ ಠಾಕೂರ್‌ ಪ್ರಸ್ತಾವಿಸಿ, ಶಿವಪಾಡಿ ವೈಭವದಲ್ಲಿ 200ಕ್ಕೂ ಅಧಿಕ ಸ್ಟಾಲ್‌ಗ‌ಳಿದ್ದವು. ಆರೋಗ್ಯ ಮೇಳದಲ್ಲಿ 2,000 ಅಧಿಕ ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಸಾಧಕ ಕೃಷಿಕರನ್ನು ಸಮ್ಮಾನಿಸಿದ್ದೇವೆ. ಹೊಸ ಮಾದರಿಯ ಕೃಷಿಗೆ ಸಂಬಂಧಿಸಿದ ವಿವಿಧ ಗೋಷ್ಠಿಗಳು ನಡೆದಿವೆ. ಜಿಲ್ಲೆ, ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದಾರೆ ಎಂದರು.

ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಎಸ್‌. ದಿನೇಶ್‌ ಪ್ರಭು ವಂದಿಸಿ, ರಾಜೇಶ್‌ ಕೆ.ಸಿ. ಕುಂದಾಪುರ ನಿರೂಪಿಸಿದರು.

 

 

 

LEAVE A REPLY

Please enter your comment!
Please enter your name here