
ಪ್ರಯಾಗರಾಜ್: 45 ದಿನಗಳಿಂದ ಸತತವಾಗಿ ಆಯೋಜಿಸಲಾದ ಮಹಾಕುಂಭಮೇಳಕ್ಕೆ ಮಹಾಶಿವರಾತ್ರಿಯಂದು ಅಧಿಕೃತವಾಗಿ ತೆರೆ ಎಳೆದಿದ್ದು, ಇದೀಗ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ತಮ್ಮ ಮಂತ್ರಿ ಮಂಡಲದ ಜೊತೆ ಸ್ವಚ್ಛತಾ ಕಾರ್ಯ ನಡೆಸಿ ಮಾದರಿಯಾಗಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿಗಳಾದ ಬ್ರಜೇಶ್ ಪಾಠಕ್ ಮತ್ತು ಕೆಪಿ ಮೌರ್ಯ ಹಾಗೂ ಇತರ ಕ್ಯಾಬಿನೆಟ್ ಮಂತ್ರಿಗಳು ಅರೈಲ್ ಘಾಟ್‌ನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇದಕ್ಕೂ ಮುನ್ನ ಅರೈಲ್ ಘಾಟ್-ಸಂಗಮದಲ್ಲಿ ಪೂಜೆಯನ್ನು ನಡೆಸಿದ್ದಾರೆ.
45 ದಿನಗಳ ಕಾಲ ನಡೆದ ಧಾರ್ಮಿಕ ಸಂಗಮವನ್ನು ಯಶಸ್ವಿಗೊಳಿಸಿದ ಭಕ್ತರು ಮತ್ತು ದಾನಿಗಳಿಗೆ ಮುಖ್ಯಮಂತ್ರಿ ಯೋಗಿ ಕೃತಜ್ಞತೆ ಸಲ್ಲಿಸಿ, “ನಿಮ್ಮ ಸಾಮೂಹಿಕ ಪ್ರಯತ್ನಗಳ ಫಲವಾಗಿ ಮಹಾ ಕುಂಭ 2025 ತನ್ನ ದೈವಿಕ ಭವ್ಯತೆಯನ್ನು ಕಾಪಾಡಿಕೊಂಡು ಭದ್ರತೆ, ಸ್ವಚ್ಛತೆ ಮತ್ತು ನಿರ್ವಹಣೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ” ಎಂದಿದ್ದಾರೆ.
ಕುಂಭಮೇಳದ ವೈಭವವನ್ನು ನೆನಪಿಸಿಕೊಂಡ ಯೋಗಿ, ಮಹಾಕುಂಭದ ದಾಖಲೆಯ ಯಶಸ್ಸಿಗೆ ಪ್ರಧಾನಿ ಮೋದಿ ಕಾರಣ ಎಂದಿದ್ದು ಕಳೆದ 45 ದಿನಗಳಲ್ಲಿ 66 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ಮಹಾಕುಂಭವನ್ನು “ಏಕತೆಯ ಮಹಾ ಯಜ್ಞ” ಎಂದು ಬಣ್ಣಿಸಿದ ಪ್ರಧಾನಿ ಮೋದಿ ಅವರ ಬ್ಲಾಗ್‌ಗೆ ಪ್ರತಿಕ್ರಿಯೆಯಾಗಿ ಯೋಗಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ.
