ಭಾನುವಾರದಂದು ದುಬೈನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಕೊನೆಯ ಗುಂಪು-ಹಂತದ ಪಂದ್ಯದಲ್ಲಿ ಶುಭಮನ್ ಗಿಲ್ ಅವರು ತಮ್ಮ ಏಕದಿನ ಪಂದ್ಯಾಟಗಳ ನಾಯಕತ್ವದ ಜವಾಬ್ದಾರಿಗೆ ಪಾದಾರ್ಪಣೆ ಮಾಡಬಹುದು. ಗಾಯಗೊಂಡಿರುವ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಸಲುವಾಗಿ ಭಾರತೀಯ ಕ್ರಿಕೆಟ್ ಮಂಡಳಿ ಈ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವರದಿಗಳ ಪ್ರಕಾರ, ಗಾಯಗೊಂಡಿರುವ ರೋಹಿತ್ ಶರ್ಮಾ ಬದಲಿಗೆ ರಿಷಬ್ ಪಂತ್ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ. ಕಳೆದ ಭಾನುವಾರ (ಫೆಬ್ರವರಿ 23) ಭಾರತದ ಗುಂಪಿ ಎ ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ಇನ್ನಿಂಗ್ಸ್‌ನ ಆರಂಭಿಕ ಭಾಗದಲ್ಲಿ ಚೆಂಡನ್ನು ಬೆನ್ನಟ್ಟುವ ಸಂದರ್ಭದಲ್ಲಿ ರೋಹಿತ್ ತಮ್ಮ ಮಂಡಿರಜ್ಜಿಗೆ ಗಾಯಮಾಡಿಕೊಂಡಿದ್ದರು. 26ನೇ ಓವರ್‌ನ ಕೊನೆಯಲ್ಲಿ ಮೈದಾನವನ್ನು ತೊರೆಯುವ ಮೊದಲು ಗಾಯದಿಂದಾಗಿ ಬಸವಳಿದಂತೆ ತೋರುತ್ತಿದ್ದರು.
ನಿಯೋಜಿತ ಉಪನಾಯಕ ಗಿಲ್, ಸ್ವಲ್ಪ ಸಮಯದವರೆಗೆ ಭಾರತವನ್ನು ಮುನ್ನಡೆಸಿದ್ದರು. ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ರೋಹಿತ್ ಕೆಲವು ಓವರ್‌ಗಳ ನಂತರ ಮೈದಾನಕ್ಕೆ ಮರಳಿದರೂ ತಮ್ಮ 100% ಸಾಮರ್ಥ್ಯವನ್ನು ತೋರ್ಪಡಿಸಲಿಲ್ಲ. ಬುಧವಾರ ದುಬೈನಲ್ಲಿ ನಡೆದ ಭಾರತದ ಮೊದಲ ತರಬೇತಿಯಲ್ಲಿ ರೋಹಿತ್ ಬ್ಯಾಟಿಂಗ್ ಕೂಡಾ ಮಾಡಲಿಲ್ಲ.
ನ್ಯೂಜಿಲೆಂಡ್ ಮತ್ತು ಭಾರತವು ಈಗಾಗಲೇ ಸೆಮಿ-ಫೈನಲ್ ಅನ್ನು ಪ್ರವೇಶಿಸಿವೆ. ಈಗ ಎ ಗುಂಪಿನಲ್ಲಿ ಯಾವ ತಂಡವು ವಿಜೇತರಾಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
