
ಜೈಪುರ: ಮರಳುಗಾಡಿನ ನಾಡು ರಾಜಸ್ಥಾನದ ಚುರು ಎಂಬ ಗ್ರಾಮವು ಸಂಪೂರ್ಣ ಹಿಮಾವೃತವಾಗಿದ್ದು ಸೋಜಿಗ ಹುಟ್ಟಿಸಿದೆ. ಬೇಸಗೆಯಲ್ಲಿ 50 ಡಿಗ್ರಿ ಸೆಲ್ಸಿಯಸ್ ಗೆ ಏರುವ ತಾಪಮಾನದ ಮಧ್ಯೆ ರಾಜಸ್ಥಾನದ ಚುರು ಮತ್ತು ಸರ್ದರ್ಶಹರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಾಗಿದೆ. ಆಲಿಕಲ್ಲುಗಳಿಂದ ಆವೃತವಾದ ಬೀದಿಗಳ ಚಿತ್ರಗಳು ಮತ್ತು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಶನಿವಾರದಂದು ಭೂಪ್ರದೇಶ, ಮನೆ ಮತ್ತು ಬೀದಿಗಳು ಬಿಳಿಯ ಹಿಮದಿಂದ ಮುಚ್ಚಿಕೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಇದು ಕಾಶ್ಮೀರವಲ್ಲ, ರಾಜಸ್ಥಾನ ಎಂದಿದ್ದಾರೆ.
ವಾರಾಂತ್ಯದಲ್ಲಿ ಹಠಾತ್ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಪೀಡಿತ ಪ್ರದೇಶಗಳಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹವಾಮಾನ್ಯ ವೈಪರೀತ್ಯದಿಂದಾಗಿ ಶ್ರೀಗಂಗಾನಗರ, ಚುರು, ಕೊಟ್‌ಪುಟ್ಲಿ-ಬೆಹ್ರೋರ್, ಬಿಕಾನೇರ್ ಮತ್ತು ಅಲ್ವಾರ್, ಶೇಖಾವತಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳೆ ನಷ್ಟವಾಗಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ.
ಜೈಪುರದ ಹವಾಮಾನ ಕೇಂದ್ರವು ಜೈಪುರ ಮತ್ತು ಭರತ್‌ಪುರ ವಿಭಾಗಗಳ ಹಲವು ಜಿಲ್ಲೆಗಳಲ್ಲಿ ಶನಿವಾರ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ನೀಡಿದೆ. ಮಾರ್ಚ್‌ನಿಂದ ರಾಜ್ಯವು ತೀವ್ರವಾದ ಬಿಸಿಲನ್ನು ಅನುಭವಿಸಲಿದೆ ಎಂದು ಇಲಾಖೆ ಉಲ್ಲೇಖಿಸಿದೆ.
