Home ಕರ್ನಾಟಕ ಕರಾವಳಿ ಧಾರ್ಮಿಕ-ಸಾಮಾಜಿಕ ಸಾಮರಸ್ಯದಿಂದ ಸಮಾಜದ ಸ್ವಾಸ್ಥ್ಯ ವರ್ಧನೆ: ಪ್ರಸನ್ನ ಸೋಮೇಶ್ವರ ಬ್ರಹ್ಮಕಲಶೋತ್ಸವದಲ್ಲಿ ಎಡನೀರು ಶ್ರೀ ಅಭಿಮತ

ಧಾರ್ಮಿಕ-ಸಾಮಾಜಿಕ ಸಾಮರಸ್ಯದಿಂದ ಸಮಾಜದ ಸ್ವಾಸ್ಥ್ಯ ವರ್ಧನೆ: ಪ್ರಸನ್ನ ಸೋಮೇಶ್ವರ ಬ್ರಹ್ಮಕಲಶೋತ್ಸವದಲ್ಲಿ ಎಡನೀರು ಶ್ರೀ ಅಭಿಮತ

0
ಧಾರ್ಮಿಕ-ಸಾಮಾಜಿಕ ಸಾಮರಸ್ಯದಿಂದ ಸಮಾಜದ ಸ್ವಾಸ್ಥ್ಯ ವರ್ಧನೆ: ಪ್ರಸನ್ನ ಸೋಮೇಶ್ವರ ಬ್ರಹ್ಮಕಲಶೋತ್ಸವದಲ್ಲಿ ಎಡನೀರು ಶ್ರೀ ಅಭಿಮತ

ಉಡುಪಿ: ಇಲ್ಲಿನ ಪರೀಕ ಸೌಖ್ಯವನ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಗುರುವಾರದಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆದಿ ಶಂಕರಾಚಾರ್ಯ ಪರಂಪರೆಯ ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಮಾತನಾಡಿ, ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡಿದರೆ ಸಮಾಜದ ಸ್ವಾಸ್ಥ್ಯ ಉಳಿಸಲು ಸಾಧ್ಯ. ಭೌತಿಕ ಮತ್ತು ಪಾರಮಾರ್ಥಿಕ ಶಕ್ತಿ ಭಗವಂತ. ಪಂಥ ಮತ್ತು ದೇವರ ಹೆಸರಿನಲ್ಲಿ ಕಚ್ಚಾಡುತ್ತಿದ್ದ ಸಂದರ್ಭದಲ್ಲಿ ಅವತರಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯರು ಪಂಚಾಯತನ ಪೂಜಾ ಕ್ರಮದ ಮೂಲಕ ಆರಾಧನೆಯಲ್ಲಿ ಸಮಾನತೆಯನ್ನು ತಂದರು. ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಸಾಮರಸ್ಯ ಸ್ಥಾಪಿಸಿದರು. ದೇವಾಲಯಗಳು ಸಾಮರಸ್ಯದ ಕೇಂದ್ರಗಳಾಗಬೇಕು. ಅದು ಪರೀಕರಲ್ಲಿ ಸಾಕಾರಗೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಆಂಜನೇಯನ ಪ್ರೇರಣೆಯಿಂದ ನಾರಾಯಣರಾಯರಿಂದ ದಾನಪತ್ರ ಮೂಲಕ ಶ್ರೀಕ್ಷೇತ್ರಕ್ಕೆ ಬಂದ ಈ ಸ್ಥಳದಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ ಸೌಖ್ಯವನ ಆರಂಭಿಸಿ, ಆರೋಗ್ಯ ವರ್ಧನ ಕೇಂದ್ರವಾಗಿ ಮಾಡಲಾಗುತ್ತಿದೆ. ಮಾನವನ ಅಂಗಾಂಗಗಳಿಗೆ ಶಕ್ತಿ ನೀಡುವ ಕೆಲಸ ಮಾಡಲಾಗುತ್ತಿದೆ. ಉತ್ತಮ ಆರೋಗ್ಯದಿಂದ ಮಾತ್ರ ಸತ್ಕಾರ್ಯಗಳನ್ನು ಮಾಡಲು ಸಾಧ್ಯ. ಎಲ್ಲರೂ ಭಗವಂತನಲ್ಲಿ ಪ್ರಾರ್ಥಿಸುವ ದೀರ್ಘಾಯುಷ್ಯಕ್ಕೆ ಉತ್ತಮ ಆರೋಗ್ಯ ಇದ್ದರೆ ಮಾತ್ರ ಪ್ರಯೋಜನ. ಆರೋಗ್ಯ ಸರಿ ಇಲ್ಲದಿದ್ದಲ್ಲಿ ದೀರ್ಘಾಯುಷ್ಯ ಹೊರೆಯಾಗಲಿದೆ ಎಂದರು.

ಭಾವಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮಾತನಾಡಿ, ಮನುಷ್ಯನ ನೆಮ್ಮದಿಗೆ ಜಾತ್ರೆ, ಉತ್ಸವ ಆಯೋಜಿಸಲಾಗುತ್ತದೆ. ದೇವಾಲಯಗಳು ನೆಮ್ಮದಿ ನೀಡುವ ಕೇಂದ್ರಗಳಾಗಿದ್ದು, ಇಲ್ಲಿ ಭಿನ್ನತೆ ಬಂದಾಗ ಅಷ್ಟಬಂಧದಂಥ ಪ್ರಕ್ರಿಯೆಗಳ ಮೂಲಕ ಬ್ರಹ್ಮಕುಂಭಾಭಿಷೇಕ ನಡೆಸಲಾಗುತ್ತದೆ ಎಂದರು.

ಕ್ಷೇತ್ರದ ತಂತ್ರಿಗಳಾದ ಜಯರಾಮ ತಂತ್ರಿ, ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಾಜಿ ಸಂಸದ ವಿನಯ ಕುಮಾ‌ರ್ ಸೊರಕೆ, ಆತ್ರಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದರು.

ಧರ್ಮಸ್ಥಳ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳಾಡಿತ್ತಾಯ ಸ್ವಾಗತಿಸಿದರು, ಸುಬ್ರಹ್ಮಣ್ಯ ಪ್ರಸಾದ್‌ ಧರ್ಮಸ್ಥಳ ನಿರೂಪಿಸಿದರು.

ಸೌಖ್ಯವನ ವ್ಯವಸ್ಥಾಪಕ ಪ್ರವೀಣ ಕುಮಾ‌ರ್, ವೈದ್ಯಾಧಿಕಾರಿಗಳಾದ ಡಾ.ಗೋಪಾಲ ಪೂಜಾರಿ, ಡಾ. ಶೋಭಿತ್ ಶೆಟ್ಟಿ, ಡಾ.ಪೂಜಾ ಸಹಕರಿಸಿದರು.

ಕುದ್ರೋಳಿ ಗಣೇಶ್ ತಂಡದವರಿಂದ ಜಾದೂ ಪ್ರದರ್ಶನ ನಡೆಯಿತು.

 

 

LEAVE A REPLY

Please enter your comment!
Please enter your name here