ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪೊಲೀಸ್ ವಶದಲ್ಲಿದ್ದಾರೆ. ದರ್ಶನ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಕೊಲೆ ಆರೋಪ ಹೊತ್ತಿರುವ ದರ್ಶನ್ ಪ್ರಕರಣದ ಎ2 ಅಪರಾಧಿಯಾಗಿದ್ದಾರೆ. ಈ ವಿಚಾರದ ಬಗ್ಗೆ ಅನೇಕ ನಟ ನಟಿಯರು ಪ್ರತಿಕ್ರಿಯೆಯನ್ನೂ ಕೂಡ ನೀಡಿದ್ದಾರೆ. ಇದೀಗ ಇನ್ನೋರ್ವ ನಟಿ ಅನುಷಾ ರೈ ಅವರು ಪ್ರತಿಕ್ರಿಯಿಸಿದ್ದು, ದರ್ಶನ್ ಅವರು ಆರೋಪಿಯಷ್ಟೇ, ಅಪರಾಧಿಯಲ್ಲ. ಮುಂದೆ ಕಾದು ನೋಡೋಣ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, “ಅಭಿಮಾನಿಗಳು ನನಗೆ ವರ್ಷದ 365 ದಿನವೂ ಊಟ ಹಾಕ್ತಾರೆ. ಆದ್ರೆ ನಾನು ಹುಟ್ಟುಹಬ್ಬದ ಒಂದು ದಿನ ಮಾತ್ರ ಅವರಿಗೆ ಊಟ ಹಾಕ್ತೀನಿ ಎಂದವರು ದರ್ಶನ್.. ಮೈಮೇಲೆ ನನ್ನ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳಬೇಡಿ ಸಿನಿಮಾ ನೋಡಿ ಸಾಕು, ನಿಮ್ಮ ಅಪ್ಪ ಅಮ್ಮನ ಹೆಸರು ಹಾಕಿಸಿಕೊಳ್ಳಿ ಎನ್ನುತ್ತಾ ತಾವೇ ಎದೆಯ ಮೇಲೆ ನನ್ನ ಸೆಲೆಬ್ರಿಟೀಸ್ ಎಂದು ಹಚ್ಚೆ ಹಾಕಿಸಿಕೊಂಡ ಅಭಿಮಾನಿಗಳ ದಾಸ. .ನಾನು ಕಾರಲ್ಲಿ ಸ್ಪೀಡಾಗಿ ಹೋಗೊವಾಗ ಹಿಂದೆ ಬರಬೇಡಿ, ಅಕಸ್ಮಾತ್ ಆಕ್ಸಿಡೆಂಟ್ ಆಗಿ ಹೆಚ್ಚು ಕಮ್ಮಿ ಆದ್ರೆ ನಿಮ್ಮ ಕುಟುಂಬದ ಗತಿ ಏನು?? ಎಂದು ಅಭಿಮಾನಿಗಳಿಗೆ ಪ್ರೀತಿಯಿಂದ ಕಾಳಜಿಯಿಂದ ಬುದ್ಧಿವಾದ ಹೇಳಿದ್ದ ಈ ಮೈಸೂರಿನ ಆರಡಿಯ ತೂಗುದೀಪ. ಇಂತಹ ವ್ಯಕ್ತಿಯಿಂದ ಇಂತಹ ತಪ್ಪಾಯಿತೆಂದರೆ ನಂಬಲಸಾಧ್ಯ.
“ಅದೇನೆ ಆದರೂ ಕಾನೂನು ಇದೆ. ಅದು ನೋಡಿಕೊಳ್ಳುತ್ತೆ. ತಪ್ಪು ಮಾಡಿಲ್ಲವಾದರೆ ಅವರ ದಾನಧರ್ಮಗಳೇ ಅವರನ್ನ ಕಾಪಾಡುತ್ತೆ. ಕಾನೂನಿನ ಮುಂದೆ ನಾವೆಲ್ಲರೂ ಚಿಕ್ಕವರೆ. ಸದ್ಯಕ್ಕಿನ್ನು ಆರೋಪಿಯಷ್ಟೆ ಅಪರಾಧಿಯಾಗಿಲ್ಲ…ಮುಂದೆ ಕಾದು ನೋಡೋಣ. ಇನ್ನು ಈ ಅನಾಹುತಕ್ಕೆ ಬಲಿಯಾದ ರೇಣುಕಾಸ್ವಾಮಿಗೂ ಅವರ ಕುಟುಂಬಕ್ಕೂ ಆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ. ಅವರು ಮಾಡಿದ್ದು ಸಹ ತಪ್ಪೇ ಆದರೂ ಈ ರೀತಿಯ ಶಿಕ್ಷೆ ಸರಿಯಲ್ಲ. ಕಾನೂನಿನ ಪ್ರಕಾರವೇ ರೇಣುಕಾಸ್ವಾಮಿಗೆ ಶಿಕ್ಷೆ ಕೊಡಿಸುವ ಬದಲು ಯಾರೋ ಜೀವ ತೆಗೆದಿದ್ದು ಅಕ್ಷಮ್ಯ ಅಪರಾಧ. ತಂದೆಯಾಗುವ ಮೊದಲೇ ಕಣ್ ಮುಚ್ಚಿದ ರೇಣುಕಾಸ್ವಾಮಿ ಮತ್ತೆ ಮಗುವಾಗಿ ಹೆಂಡತಿಯ ಹೊಟ್ಟೆಯಲ್ಲಿ ಹುಟ್ಟಲಿ ಅನ್ನೋದೆ ನಮ್ಮ ಹಾರೈಕೆ….ಕ್ಷಮಿಸಿ
ಈ ಪ್ರಕರಣದಲ್ಲಿ ದರ್ಶನ್ ಕುಟುಂಬಕ್ಕೆ ಶಾಪ ಹಾಕಿದರೆ ಪ್ರಯೋಜನವೇನು ?? ನನ್ನ ತಂದೆ ಒಬ್ಬ ದೊಡ್ಡ ಸ್ಟಾರ್ ಅನ್ನೋದು ಸಹ ಗೊತ್ತಿಲ್ಲದ ಆ ಹಾಲುಗಲ್ಲದ ಮುದ್ದು ಹುಡುಗ ವಿನೀಶ್ ನೋಡಿದರೆ ಸಂಕಟವಾಗದಿರುವುದೆ? ಫಾದರ್ಸ್ ಡೇ ದಿನ ತಂದೆಯನ್ನು ನೆನೆದು ವಿನೀಶ್ ಹಾಕಿದ ಪೋಸ್ಟ್ ಗೆ ಮನಕಲಕದೆ ಇರುವುದೇ ? ಜೊತೆಗೆ ದರ್ಶನ್ ಜೀವನಕ್ಕೆ 22 ವರ್ಷದಿಂದ ವಿಜಯವೂ ಆಗಿ ಲಕ್ಷ್ಮಿಯೂ ಆಗಿರುವ ವಿಜಯಲಕ್ಷ್ಮಿ ಯವರನ್ನು ತಪ್ಪಿತಸ್ಥರಂತೆ ಕಾಣೋದು ಸರಿಯೇ?? ಇಂತಹ ಸಂದರ್ಭದಲ್ಲಿ ಅವರಿಬ್ಬರಿಗೂ ಧೈರ್ಯ ಹೇಳಬೇಕೇ ಹೊರತು ಹೀಯಾಳಿಸುವುದು ಬೇಡʼʼಎಂದು ಬರೆದುಕೊಂಡಿದ್ದಾರೆ. ಇದೀಗ ನಟಿಯ ಈ ಪೋಸ್ಟ್ ವೈರಲ್ ಆಗಿದೆ.
