ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನಟನನ್ನು ಭೇಟಿಯಾಗಲು ಸೆಲಿಬ್ರೆಟಿಗಳು, ಅಭಿಮಾನಿಗಳು ಜೈಲಿನ ಬಳಿ ಬರುತ್ತಿದ್ದಾರೆ. ಆದರೆ ಪೊಲೀಸರು ಸೆಲಿಬ್ರೆಟಿಗಳನ್ನು ಹೊರತುಪಡಿಸಿ ಯಾರಿಗೂ ದರ್ಶನ್ ಭೆಟಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಈ ನಡುವೆ ನಟಿ ರಕ್ಷಿತಾ, ಪ್ರೇಮ್ ದಂಪತಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.
ನಟ ದರ್ಶನ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಟಿ ರಕ್ಷಿತಾ, ಈ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ನಿರ್ದೇಶಕ ಪ್ರೇಮ್ ಮಾತನಾಡಿ ಪ್ರಕರಣ ನ್ಯಾಯಲಯದಲ್ಲಿದೆ. ಈ ವೇಳೆ ನಾವು ಕೇಸ್ ಕುರಿತು ಮಾತನಾಡುವುದು ಸರಿಯಲ್ಲ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಹೇಳಿದ್ದಾರೆ.
ಇನ್ನು, ಜುಲೈ 4 ರವರೆಗೆ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ. ಈ ನಡುವೆ ದರ್ಶನ್‌ಗೆ ನೀಡಿರುವ ಖೈದಿ ನಂಬರ್ ಅನ್ನು ಕೆಲವರು ತಮ್ಮ ಲಕ್ಕಿ ನಂಬರ್ ಎಂದು ಅವರ ವಾಹನಕ್ಕೆ ರಿಜಿಸ್ಟರ್ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಅಲ್ಲದೇ ಕೆಲವು ಅಭಿಮಾನಿಗಳು ಜೈಲಿನ ಬಳಿ ಬಂದು ದರ್ಶನ್ ಅವರನ್ನು ಭೇಟಿ ಮಾಡಲು ಹಠ ಹಿಡಿಯುತ್ತಿರುವುದು ಪೊಲೀಸರಿಗೆ ಪಜೀತಿಯಾಗಿದೆ.
