
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆ ಬಹಳ ಚುರುಕುಗೊಂಡಿದೆ. ಮೋಹಕ ತಾರೆ ನಟಿ ರಮ್ಯಾ ಜಸ್ಟೀಸ್ ಫಾರ್ ರೇಣುಕಾಸ್ವಾಮಿ ಎನ್ನುವ ಹ್ಯಾಷ್ ಟ್ಯಾಗ್ ಹಾಕಿ ಪೋಸ್ಟ್ ಮಾಡುವುದರ ಜೊತೆಗೆ ಸುದ್ದಿವಾಹಿನಿಯೊಂದರಲ್ಲಿ ನಟ ದರ್ಶನ್ ಫ್ಯಾನ್ ವಿರುದ್ಧ ಗರಂ ಆಗಿದ್ದರು. ಇದೀಗ ಮೊದಲ ಬಾರಿಗೆ ಈ ವಿಚಾರವಾಗಿ ನಟ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಳಿ, ಬದುಕಬೇಕಿದ್ದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ಸತ್ಯ ಹೊರತರಲು ಮಾಧ್ಯಮಗಳು, ಪೊಲೀಸರು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ರೇಣುಕಾಸ್ವಾಮಿ ಪತ್ನಿ, ಅವರಿಗೆ ಹುಟ್ಟಬೇಕಿರುವ ಮಗು ಹಾಗೂ ಅವರ ಇಡೀ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಸೆಲಿಬ್ರಿಟಿಗಳು ದೇವರಲ್ಲ, ಅವರು ತಪ್ಪೇ ಮಾಡಲ್ಲ ಎನ್ನುವ ನಂಬಿಕೆ ಬೇಡ. ಜನರಿಗೆ ಕಾನೂನಿನ ಮೇಲೆ ನಂಬಿಕೆ ಬರುವಂತಹ ಕೆಲಸ ಆಗಬೇಕು ಎಂದಿದ್ದಾರೆ.
ಇನ್ನು, ಚಿತ್ರರಂಗದಿಂದ ದರ್ಶನ್ ಅವರನ್ನು ಬ್ಯಾನ್ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಮೊದಲು ತಪ್ಪಿತಸ್ಥರು ಯಾರು ಎನ್ನುವ ಸತ್ಯಾಸತ್ಯತೆ ಹೊರಬರಲಿ. ಬ್ಯಾನ್ಮಾಡುವ ಮೊದಲು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಕೆಲಸ ಆಗಬೇಕು ಎಂದಿದ್ದಾರೆ. ಗೆಳಯ ಆಗಲಿ, ಯಾರೇ ಆಗಲಿ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಬಾರದು. ಈ ಬಗ್ಗೆ ತನಿಖೆಯಾಗಿ ಸತ್ಯ ಬಹಳ ಬೇಗ ಹೊರಬರಲಿ ಎಂದಿದ್ದಾರೆ.
