
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದ್ದು, ಸದ್ಯ ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೀಗ ಈ ಕುರಿತು ಸ್ಯಾಂಡಲ್ ವುಡ್ ನಟಿ ಮೋಹಕ ತಾರೆ ನಟಿ ರಮ್ಯಾ ಅವರು ಪ್ರತಿಕ್ರಿಯೆ ನೀಡಿದ್ದು, ಯಾರೂ ಕಾನೂನನ್ನೂ ಕೈಗೆತ್ತಿಕೊಳ್ಳಬಾರದು, ಕಾನೂನಿನ ಮುಂದೆ ಎಲ್ಲರೂ ಸಮಾನರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದಿದ್ದಾರೆ.
ಹೌದು, ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀಘ್ರವಾಗಿ ಬರೆದುಕೊಂಡಿರುವ ಅವರು, ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶ ಕಳುಹಿಸಿರುವ ಕಾರಣಕ್ಕೆ ಕೊಲೆಯಾಗಿದೆ ಎನ್ನುವುದಾದರೆ. ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಎನ್ನುವ ಆಯ್ಕೆಯನ್ನು ಯಾಕೆ ಕೊಟ್ಟಿರುತ್ತಾರೆ, ಸದುದ್ದೇಶದಿಂದಲೇ ಅದನ್ನು ಕೊಟಿರುತ್ತಾರೆ. ಟ್ರೋಲ್‌ಗಳು ಅತಿರೇಖಕ್ಕೆ ಹೋದಾಗ ದೂರನ್ನು ನೀಡಬಹುದು, ನನ್ನ ಬಗ್ಗೆ, ಇತರ ನಟರ ಬಗ್ಗೆಯೂ ಕೂಡ ಅತಿ ಕೆಟ್ಟ ಭಾಷೆಯನ್ನು ಬಳಸಿ ಟ್ರೋಲ್ ಮಾಡಿದ್ದಾರೆ. ಬೇರೆಯವರ ಹೆಂಡತಿ ಮಕ್ಕಳೂ ಸಹ ಇದರ ಹೊರತಾಗಿಲ್ಲ. ಇಂತಹ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತೀದ್ದೇವೆ. ಒಂದಿಷ್ಟು ಟ್ರೋಲಿಗರ ವಿರುದ್ಧ ನಾನೇ ಕೇಸ್ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು, ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸ ಯಾರೂ ಮಾಡಬಾರದು. ಯಾರನ್ನೂ ಕೊಲ್ಲಬಾರದು, ನೀವು ಕಾನೂನಿನ ಮೇಲೆ ನಿಜವಾಗಿಯೂ ನಂಬಿಕೆ ಇಟ್ಟೀದ್ದೇ ಆದಲ್ಲಿ, ಒಂದು ದೂರು ದಾಖಲಿಸಿದರೆ ಸಾಕು. ಯಾವುದೇ ರಾಜಕೀಯ ಒತ್ತಡಕ್ಕೆ ಸಿಲುಕದೇ ಪೊಲೀಸರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
