ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ಸೇರಿ ನಾಲ್ವರನ್ನು ಇಂದಿನವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇಂದು ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಜುಲೈ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.
ಸತತ ಮೂರು ಬಾರಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ನಟ ದರ್ಶನ್, ವಿನಯ್, ಪ್ರದೋಶ್ ಧನರಾಜ್ ಇಂದು ಜೈಲು ಸೇರಿದ್ದಾರೆ. ಜುಲೈ 4ರವರೆಗೆ ಕೋರ್ಟ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆ ಹಿನ್ನೆಲೆ: ಚಿತ್ರದುರ್ಗದ ರೇಣುಕಾಸ್ವಾಮಿ ದರ್ಶನ್ ಗೆಳತಿ ಪವಿತ್ರಾ ಅವರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದರು ಎನ್ನುವ ಕಾರಣಕ್ಕೆ ಆತನನ್ನು ಬೆಂಗಳೂರಿಗೆ ಕರೆಸಿ ಶೆಡ್ ಒಂದರಲ್ಲಿ ಕೂಡಿ ಹಾಕಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಕೊಲೆಗೈದು ಮೋರಿಗೆ ಎಸೆದಿದ್ದಾರೆ ಎನ್ನಲಾಗಿದೆ. ಬೀದಿ ನಾಯಿಗಳು ಶವವನ್ನು ಚರಂಡಿಯಿಂದ ಎಳೆದುಕೊಂಡು ಹೋಗುತ್ತಿರುವುದನ್ನು ಕಂಡ ನಿವಾಸಿಗಳು ಕೊಲೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ಬಳಿಕ ನಟ ದರ್ಶನ್, ಪವಿತ್ರಾ ಗೌಡ ಮತ್ತು ದರ್ಶನ್ ಸಹಚರರನ್ನು ಬಂಧಿಸಲಾಗಿತ್ತು. ಇದೀಗ ಎಲ್ಲಾ ಆರೋಪಿಗಳು ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ.
