ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನಟ ಜೈಲು ಸೇರಿದ ಮೂರನೇ ದಿನ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ದರ್ಶನ್ ಅವರನ್ನು ನೋಡಲು ಬಂದಿದ್ದಾರೆ.
ಕಪ್ಪು ಬಣ್ಣದ ಕಿಯಾ ಕಾರಿನಲ್ಲಿ ಬಂದಿದ್ದ ವಿಜಯಲಕ್ಷ್ಮಿ ಮಾಧ್ಯಮದವರನ್ನು ನೋಡುತ್ತಿದ್ದಂತೆ ವಾಪಸ್ ಆಗಿದ್ದಾರೆ. ಬಳಿಕ ಬೇರೊಂದು ಕಾರಿನಲ್ಲಿ ಬಂದು ದರ್ಶನ್ ಅವರನ್ನು ಭೇಟಿ ಆಗಿದ್ದಾರೆ. ಮಗ ಹಾಗೂ ಪತ್ನಿಯನ್ನು ನೋಡುತ್ತಿದ್ದಂತೆ ನಟ ದರ್ಶನ್ ಭಾವುಕರಾಗಿದ್ದಾರೆ ಎನ್ನಲಾಗಿದೆ. ಮಗನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದ್ದು, ಪತ್ನಿಯೊಂದಿಗೆ ಮಾತನಾಡುವಾಗಲೂ ಕೂಡ ದರ್ಶನ್ ಭಾವುಕರಾಗಿದ್ದಾರೆ ಎನ್ನಲಾಗಿದೆ.
ಇನ್ನು, ಗೆಳೆಯ ವಿನೋದ್ ಪ್ರಭಾಕರ್ ಅವರು ಕೂಡ ದರ್ಶನ್ ಅವರನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ. ದರ್ಶನ್ ಭೇಟಿ ಬಳಿಕ ಮಾಧ್ಯಮದವರ ಬಳಿ ಮಾತನಾಡಿದ ಅವರು, ಮೃತ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ. ದರ್ಶನ್ ಅವರು ಮೌನವಾಗಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಎಲ್ಲರಿಗೂ ನ್ಯಾಯ ಸಿಗಲಿ ಎಂದು ಹೇಳಿದ್ದಾರೆ.
