ಇಂದು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಎಲ್ಲೆಂದರಲ್ಲಿ ನೀರಿನ ಬಾಟೆಲ್ ಸೇರಿದಂತೆ ಪ್ಲಾಸ್ಟಿಕ್ ಕವರ್‌ಗಳು,ತಿಂಡಿ ಪ್ಯಾಕೆಟ್ ಇತ್ಯಾದಿಗಳನ್ನು ಎಸೆಯುದನ್ನು ಕಡಿಮೆ ಮಾಡಿಲ್ಲ. ಅದೇ ರೀತಿ ಪ್ರವಾಸಿಗರು ತೆರಳುವಂತಹ ಜಲಪಾತ, ಸಮುದ್ರ, ನದಿ ಇತ್ಯಾದಿ ಸ್ಥಳದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಇದು ಜಲಚರ ಜೀವಿಗಳ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುವ ಜೊತೆಗೆ ವಿವಿಧ ಜಲಧಾರೆಗಳ ಸೌಂದರ್ಯಕ್ಕೂ ಮಾರಕವಾಗಿದೆ. ಇದೀಗ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛಂದವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸಲು ಈ ಯುವಕರ ತಂಡವೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ.
ಭಿತ್ತಿಚಿತ್ರ ರಚನೆ
ವಿಷ್ಣುಮೂರ್ತಿ ಕ್ರಿಕೆಟರ್ಸ್ ವತಿಯಿಂದ ಮಾಳ,ಮೂಳ್ಳುರಿನ ಭಾಗದಲ್ಲಿರುವ ದೇವರಗುಂಡಿ ಜಲಪಾತದ ಬಳಿ ಸ್ವಇಚ್ಛೆಯಿಂದ ಸ್ವಚ್ಛತೆ ಕಾರ್ಯ ಕ್ರಮವನ್ನು ಯುವಕರು ಹಮ್ಮಿಕೊಂಡಿದ್ದು, ನದಿಯ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಗಾಜಿನ ಬಾಟಲ್ಗಳು ಇತ್ಯಾದಿ ಪ್ರತ್ಯೇಕಿಸಿ ಸ್ವಚ್ಚಗೊಳಿಸಿದ್ದಾರೆ. ಸ್ವಚ್ಛತಾ ಕಾರ್ಯಕ್ರಮದ ಜೊತೆಗೆ ಜಲಚರ ಜೀವಿಗಳ ಉಳಿವಿನ ಅರಿವಿಗೋಸ್ಕರ ಭಿತ್ತಿ ಚಿತ್ರ ರಚನೆ ಕೂಡ ಮಾಡಲಾಯಿತು. ಜಲಚರಗಳ ಸಂರಕ್ಷಣೆಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಲಚರ ಜೀವಿಗಳ ಸಂರಕ್ಷಣೆಗಾಗಿ ಅಲ್ಲಲ್ಲಿ ಸ್ಲೋಗನ್ ಗಳನ್ನು ಬರೆಯುವ ಮೂಲಕ ಪ್ರವಾಸಿಗರಿಗೆ ಅರಿವು ಮೂಡಿಸುವುದೇ ಇದರ ಉದ್ದೇಶ ಆಗಿದೆ.
ಬಂಡೆಕಲ್ಲುಗಳಲ್ಲಿ ಅರಳಿದ ವಿಭಿನ್ನ ಕಲೆ
ಮಾಳದ ಈ ದೇವರಗುಂಡಿ ಜಲಪಾತದ ಕಲ್ಲು ಬಂಡೆಗಳ ಮೇಲೆ ಸಂತೋಷ್ ಮಾಳ ಇವರು ರಚನೆ ಮಾಡಿದ ಮೀನು, ಏಡಿ, ಕಪ್ಪೆ ಚಿತ್ರಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಬಂಡೆಕಲ್ಲಿನ ಮೇಲೆ ನೈಜವಾಗಿ ಜಲಚರ ಜೀವಿಗಳು ನೆಲೆಯಾದಂತೆ ಅನುಭವ ನೀಡಲಿದೆ. ಜಲಚರ ಜೀವಿಗಳ ಉಳಿವಿಗಾಗಿ ಅರಿವನ್ನು ಮೂಡಿಸಲು ಈ ವಿಭಿನ್ನ ಪ್ರಯತ್ನವನ್ನು ಇವರು ಮಾಡಿದ್ದಾರೆ. ಇದಕ್ಕೆ ಮೂಡಬಿದ್ರೆ ವಲಯದ ಅರಣ್ಯಾಧಿಕಾರಿಗಳು ಸಾಥ್ ನೀಡಿದ್ದಾರೆ.
