ಕರ್ನಾಟಕದ ಮಟ್ಟಿಗೆ ಬಿಜೆಪಿ ಅಂದರೆ ಯಡಿಯೂರಪ್ಪ, ಯಡಿಯೂರಪ್ಪ ಅಂದರೆ ಬಿಜೆಪಿ ಎಂಬ ಸ್ಥಾಪಿತ ಮನಸ್ಥಿತಿಯೊಂದು ಕರ್ನಾಟಕದ ಮತದಾರರಲ್ಲಿದೆ. ರಾಜ್ಯದ ಹೊರಗೆ ನಿಂತು ಕರ್ನಾಟಕದ ಬಿಜೆಪಿಯ ಬಗ್ಗೆ ಮಾತಾಡುವಾಗ ಯಡಿಯೂರಪ್ಪರ ಹೆಸರೇ ಮೊದಲು ಬರುವುದು. ಬಿಜೆಪಿ, ರಾಷ್ಟ್ರೀಯ ಪಕ್ಷವಾದರೂ ಕರ್ನಾಟಕದ ಮಟ್ಟಿಗೆ ಅದು ಯಡಿಯೂರಪ್ಪರ ಸಾರಥ್ಯದಲ್ಲೇ ಬೆಳೆದಿದೆ ಎಂದರೆ ತಪ್ಪಂತೂ ಖಂಡಿತವಾಗಿಯೂ ಅಲ್ಲ. ರಾಜಕೀಯ ಬದುಕಿನ ನಿಜದ ಅರ್ಥದಲ್ಲಿ ಏಳುಬೀಳುಗಳನ್ನು ಕಂಡ ಯಡಿಯೂರಪ್ಪ ರಾಜಕೀಯದಲ್ಲಿ ಹೀರೋ ಆಗಿಯೂ ಮೆರೆದಿದ್ದಿದೆ. ನಾಯಕನಾಗಿಯೂ ಮುನ್ನಡೆದಿದ್ದಿದೆ. ಹೊರನೋಟಕ್ಕೆ ಖಳನಾಗಿಯೂ ಕಂಡಿದ್ದಿದೆ. ತನ್ನ ಸಮುದಾಯದ ಮುಖಂಡನಾಗಿಯೂ ಪ್ರತಿನಿಧಿಯಾಗಿಯೂ ಯಡಿಯೂರಪ್ಪ ರಾಜಕೀಯದಲ್ಲಿ ಮಾಸ್ ಲೀಡರ್ ಆಗಿ ಹಂತ ಹಂತವಾಗಿ ಉತ್ಕರ್ಷವನ್ನು ಶ್ರೇಯೋನ್ನತಿಯನ್ನು ಕಾಣುತ್ತಲೇ ಬಂದರು. ಜಾತಿ ಅವರನ್ನು ಬೆಳೆಸಿತು. ಅವರು ತಾನು ಬೆಳೆಯುತ್ತಲೇ ಪಕ್ಷವನ್ನು ಬೆಳೆಸಿದರು. ಲಿಂಗಾಯಿತ ಸಮುದಾಯದ ಒಳ ಸಂಘರ್ಷಗಳಿಗೆ ಮುಖಾಮುಖಿಯಾದರೂ ಯಡಿಯೂರಪ್ಪ ನೀರು ತಾಗಿಯೂ ತಾಗದಂತೆ ಇರುವ ಕಮಲವಾಗಿ ಜಾತಿಗೆ ಬಲವಾಗಿ ಒದಗಿಬಿಟ್ಟರು. ಆ ಮೂಲಕ ಪಕ್ಷಕ್ಕೂ ಬೆಂಬಲವಾದರು. ಈ ಸುದೀರ್ಘವಾದ ರಾಜಕೀಯ ಜೀವನದಲ್ಲಿ ಸಾಂದರ್ಭಿಕವಾಗಿ ಬಗ್ಗಿದರು, ಬಾಗಿದರು; ಬಳುಕಿದರು. ಉರುಳುವ ಸಂದರ್ಭ ಬಂದಾಗ ಸೆಟೆದರು. ಮುಖ್ಯಮಂತ್ರಿ ಸ್ಥಾನದಿಂದ ಒತ್ತಡಪೂರ್ವಕವಾಗಿ ಇಳಿಸಿದಾಗ ಒಲ್ಲದ ಮನಸ್ಸಿನಿಂದಲೇ ಕಣ್ಣೀರಿಡುತ್ತ ಇಳಿದರು. ಈಗ ಮಗನಿಗೆ ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಹೈಕಮಾಂಡ್ ಎದುರು ಸೆಟೆದರು. ಹೀಗೆ ಸೆಟೆದು ನಿಂತಿದ್ದರ ಪರಿಣಾಮ ಈಗ ಇಂಥ ಒಂದು ಬೆಳವಣಿಗೆ ಆಗಿದೆ. ಯಾರೇನೇ ಅಂದರೂ ಯಡಿಯೂರಪ್ಪರ ಒತ್ತಡವಿಲ್ಲದೆ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರಲು ಸಾಧ್ಯವೇ ಇರಲಿಲ್ಲ ಎಂಬುದು ಪಬ್ಲಿಕ್ ಸೀಕ್ರೆಟ್ಟು! ಹಾಗಂತ ಇದು ಕುಟುಂಬ ರಾಜಕೀಯವಲ್ಲವೇ ಅಂತ ಕೇಳಿದರೆ, ನೂರಕ್ಕೆ ನೂರು ಹೌದೇ ಹೌದು. ಆದರೆ, ಮಲ್ಲಿಕಾರ್ಜುನ ಖರ್ಗೆಯವರ ಮಗ ಅಪ್ಪನ ಹೆಸರಲ್ಲಿ ರಾಜಕೀಯದಲ್ಲಿ ಬೆಳೆಯುತ್ತಿರುವುದಕ್ಕೂ, ಮುತ್ತಜ್ಜ, ಅಜ್ಜ, ಅಜ್ಜಿ, ಅಪ್ಪ, ಅಮ್ಮನ ಹೆಸರಲ್ಲಿ ರಾಹುಲ್ ಗಾಂಧಿ ಪ್ರಸಿದ್ಧಿಗೆ ಬಂದಿರುವುದಕ್ಕೂ, ಅಪ್ಪನ ಹೆಸರಲ್ಲಿ ಅಖಿಲೇಷ್ ಯಾದವ್ ಬೆಳೆದಿರುವುದಕ್ಕೂ, ಅಪ್ಪನ ಚಾರ್ಮಿನಲ್ಲಿ ಸ್ಟಾಲಿನ್ ಮುಖ್ಯಮಂತ್ರಿಯಾಗಿರುವುದಕ್ಕೂ, ಈಗ ಅಪ್ಪನ ಗರಡಿಯಿಂದಲೇ ವಿಜಯೇಂದ್ರ ಮುನ್ನೆಲೆಗೆ ಬರುವುದಕ್ಕೂ ಯಾವ ಅಂತರವೂ ಇಲ್ಲ, ವ್ಯತ್ಯಾಸವೂ ಇಲ್ಲ. ಆದರೆ, ತುಲನಾತ್ಮಕವಾಗಿ ಹೇಳುವುದಾದರೆ ಅರ್ಹತೆಯ ಪ್ರಶ್ನೆ ಮಾತ್ರ ಕೊನೆಯ ಸತ್ಯವಾಗಿ ಉಳಿಯುತ್ತದೆ!
ದೀರ್ಘಕಾಲ ದೇಶವನ್ನಾಳಿದ ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರೀಯ ನೇತಾರ (ಈಗ ಅಧ್ಯಕ್ಷರು) ಎನಿಸಿಕೊಂಡ ಖರ್ಗೆಯವರ ಮಗನಾಗಿ ಪ್ರಿಯಾಂಕ್ ಖರ್ಗೆಯ ಚಾರ್ಮಿಗಿಂತ, ರಾಹುಲ ಗಾಂಧಿ ಚಾರ್ಮಿಗಿಂತ ವಿಜಯೇಂದ್ರರ ಚಾರ್ಮ್ ಬೇರೆಯದೇ ಆದ ಸ್ವರೂಪದಲ್ಲಿದೆ. ಕೊಂಚ ವಿ-ಭಿನ್ನವೂ ಆಗಿದೆ. ಯಾಕೆಂದರೆ, ಹುಟ್ಟಾ ಪಡೆಯುವ ಪಿತೃ ಯಾಜಮಾನಿಕೆಯ ಪ್ರಭಾವದಲ್ಲಿ ವಿಜಯೇಂದ್ರರು ಮುನ್ನೆಲೆಗೆ ಬಂದಿದ್ದರೂ ಸ್ವಲ್ಪಮಟ್ಟಿಗಾದರೂ ಪಕ್ಷದಲ್ಲಿ ಪ್ರತ್ಯೇಕವಾದ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡವರು ಎಂಬುದು ಅರ್ಧ ಸತ್ಯ! ಆದರೆ, ವಯಸ್ಸಿನ ಹಿರಿತನದಲ್ಲಿ, ಸೇವಾ ಹಿರಿತನದಲ್ಲಿ ಅರ್ಹತೆಯುಳ್ಳವರು ಹಲವರು ಪಕ್ಷದಲ್ಲಿ ಇದ್ದೇ ಇದ್ದರು ಎಂಬುದು ವಿಜಯೇಂದ್ರರು ಯಾವತ್ತೂ ರಿಯಲೈಸ್ ಮಾಡಿಕೊಳ್ಳಲೇಬೇಕಾದ ಸತ್ಯ. ಅಷ್ಟರಮಟ್ಟಿಗೆ ವಿಜಯೇಂದ್ರರ ವಿಧೇಯತೆ ಆ ಹಿರಿಯರೆಲ್ಲರಲ್ಲೂ ಢಾಳಾಗಿರಬೇಕು. ವಿನಮ್ರವಾಗಿರಬೇಕು. ಪಕ್ಷದಲ್ಲಿರುವ ಹಿರಿಯರನ್ನು, ಅನುಭವಿಗಳನ್ನು ಎಂಥಾ ಸಂದರ್ಭದಲ್ಲೂ ಬಿಟ್ಟುಕೊಡದೆ ಜೊತೆಯಲ್ಲೇ ಕರೆದುಕೊಂಡು ಹೋಗುವ ಗುರುತರವಾದ ಹೊಣೆಗಾರಿಕೆಯನ್ನು ನಿಭಾಯಿಸುವುದು ಅಂದುಕೊಂಡಷ್ಟು ಸುಲಭವೂ ಅಲ್ಲ, ಸಹಜವೂ ಅಲ್ಲವೆಂಬುದು ವಿಜಯೇಂದ್ರರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಯಡಿಯೂರಪ್ಪರ ಗರಡಿಯಲ್ಲಿ ಬೇಕಾದಷ್ಟು ಪಳಗಿದ ವಿಜಯೇಂದ್ರರಿಗೆ ಅಧಿಕಾರ ರಾಜಕೀಯದ ಪಟ್ಟುಗಳು ಅವರಿಂದಲೇ ಕರಗತವಾಗಿದ್ದರೂ ಸಾಂದರ್ಭಿಕವಾಗಿ ಅದರ ಅನುಷ್ಠಾನವೇ ಮುಖ್ಯವಾಗಿರುತ್ತದೆ. ಇಂಥ ಅನುಷ್ಠಾನ ಪಕ್ಷದ ಭವಿಷ್ಯದ ದಿಕ್ಸೂಚಿಯಾಗಿರುತ್ತದೆ. ಆ ಹೊಣೆಗಾರಿಕೆಯನ್ನು ನಿರ್ವಹಿಸುವುದು ಸಣ್ಣ ಸಂಗತಿಯೇನಲ್ಲ. ಎಲ್ಲರೂ ಅಧಿಕಾರ, ಸ್ಥಾನಮಾನದ ಮೂಸೆಯಲ್ಲೇ ರಾಜಕೀಯದಲ್ಲಿರುವವರು. ಅಂಥವರ ಮಧ್ಯೆ ನಾಯಕತ್ವದಲ್ಲಿ ಏಗುವುದು ಸರಿಹೊತ್ತಿನ ರಾಜಕೀಯದಲ್ಲಿ ಬಹುದೊಡ್ಡ ಸಾಹಸವೇ ಸರಿ! ಅಂಥ ಸಾಹಸಕ್ಕೆ ಇಳಿಯುವುದು ವಿಜಯೇಂದ್ರರಿಗೆ ಒಬ್ಬಂಟಿಯಾಗಿ ಸಾಧ್ಯವಿಲ್ಲ! ಕೇವಲ ತನ್ನ ಜಾತಿಯ ಬಲವನ್ನು ಮಾತ್ರ ನಂಬಿಕೊಳ್ಳುವುದು, ಅದಕ್ಕೇ ಆತುಕೊಳ್ಳುವುದು ಪಕ್ಷದ ಭವಿಷ್ಯದ ಅಸ್ತಿತ್ವದ ದೃಷ್ಟಿಯಿಂದ ಹಿತವಲ್ಲ ಎಂಬುದನ್ನು ವಿಜಯೇಂದ್ರರು ಅರ್ಥ ಮಾಡಿಕೊಳ್ಳಬೇಕಿದೆ.
ಯಾಕೆಂದರೆ, ವಿಜಯೇಂದ್ರ ಏರಿದ ಪಟ್ಟದಾಸೆ ಕೆಲವು ನಾಯಕರಲ್ಲಿತ್ತು. ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಿದವರೂ ಇದ್ದರು. ಹೈಕಮಾಂಡ್ ಮಟ್ಟದಲ್ಲಿ ಇದು ಇಷ್ಟು ದಿನಗಳ ಕಾಲ ಚರ್ಚೆಯೂ ಆಗಿ ಈಗ ಪಟ್ಟ ಮಗನಿಗೆ ದೊರಕಿಸುವಲ್ಲಿ ಕೊನೆಗೂ ಸಂಘರ್ಷವನ್ನು ಗೆದ್ದವರು ಯಡಿಯೂರಪ್ಪರೇ! ಈ ವಿಚಾರವೇ ಪಬ್ಲಿಕ್ ಸೀಕ್ರೆಟ್ಟು! ಅದರಲ್ಲೂ ಕಾಂಗ್ರೆಸ್ಸಿನ ಒಳ ಬಂಡಾಯಕ್ಕೆ ತುಪ್ಪ ಸುರಿದಂತೆ ಈ ಆಯ್ಕೆಯಾಗಿದೆ. ಅಲ್ಲೂ ಲೋಕಸಭಾ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಸರ್ಕಾರವನ್ನೂ ಪಕ್ಷವನ್ನೂ ನಡೆಸಬೇಕಾಗಿದೆ. ಆದರೆ, ಅವರಿಗಿಂತ ದೊಡ್ದ ಜವಾಬ್ದಾರಿ ಬಿಜೆಪಿಗಿದೆ. ಹೈಕಮಾಂಡಿನ ಸಾಂದರ್ಭಿಕ ನಿಲುವುಗಳಿಗೆ ಬದ್ಧವಾಗಿರುವುದು, ದೊಡ್ದ ಬಹುಮತದಲ್ಲಿ ಗೆದ್ದ ಕಾಂಗ್ರೆಸ್ಸನ್ನು ಲೋಕಸಭಾ ಚುನಾವಣೆಯಲ್ಲಿ ಎದುರಿಸುವುದು, ಲೋಕಸಭಾ ಟಿಕೆಟ್ ಹಂಚಿಕೆ, ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸೀಟನ್ನು ಗೆಲ್ಲುವುದು, ಸರ್ಕಾರದ ಕಾರ್ಯವೈಖರಿಯ ಲೋಪಗಳನ್ನು, ನ್ಯೂನತೆಗಳನ್ನು, ಅಸಮರ್ಪಕ ನಡೆಯನ್ನು ಸಾಂಘಿಕವಾದ ನೆಲೆಯಲ್ಲಿ ಜನತೆಯ ಮುಂದೆ ತೆರೆದಿಡುವುದು, ಮತ್ತು ಅದರಲ್ಲಿ ಯಶಸ್ವಿಯಾಗುವುದು, ಪಕ್ಷವನ್ನು ತಳಮಟ್ಟದಿಂದ ಭದ್ರಪಡಿಸುವುದು, ಹತಾಶೆಗೊಳಗಾದ, ಭ್ರಮನಿರಸನಗೊಂಡ, ಜಿಡ್ಡುಗಟ್ಟಿದ್ದ ಕಾರ್ಯಕರ್ತರ ಮನಸ್ಸನ್ನು ಮತ್ತೆ ಉತ್ಸಾಹಗೊಳಿಸಿ ಸನ್ನದ್ಧಗೊಳಿಸುವುದು, ಸಂಘ ಪರಿವಾರದೊಂದಿಗೆ ಸೌಹಾರ್ದತೆ, ವ್ಯಕ್ತಿನಿಷ್ಠೆ, ರಾಷ್ಟ್ರೀಯತೆಯ ಸಿದ್ಧಾಂತ, ಪಕ್ಷನಿಷ್ಠೆ ಇಂಥ ಸಂಘರ್ಷಗಳನ್ನು ಹೆಜ್ಜೆಹೆಜ್ಜೆಗೂ ಸಾಲು ಸಾಲು ಸವಾಲುಗಳನ್ನು ಹೆಗಲಮೇಲೆ ಹೊತ್ತುಕೊಂಡೇ ಎದುರಿಸುತ್ತ, ಗೆಲುವನ್ನು ಸಾಧಿಸುವುದಕ್ಕೆ ಈ ಕಾಲ ಪೂರಕವಾಗಿ ಒದಗಿಲ್ಲ, ಒದಗುವಂತೆ ಮಾಡಿಕೊಳ್ಳುವಲ್ಲಿ ನೇಪಥ್ಯದಲ್ಲಿರುವ ತಂದೆಯನ್ನು ಮುಂದುಮಾಡಿಕೊಂಡು ಹೊರಟರೆ ಎಲ್ಲ ದೃಷ್ಟಿಯಿಂದಲೂ ಆರೋಗ್ಯಯುತವಲ್ಲ ಎಂಬುದನ್ನೂ ರಿಯಲೈಸ್ ಮಾಡಿಕೊಳ್ಳುತ್ತಲೇ ವಿಜಯೇಂದ್ರ ಉಪಕ್ರಮಿಸಬೇಕಿದೆ. ಇಂಥ ಸಂದಿಗ್ಧತೆಯ ಪರಿಸ್ಥಿತಿಯಲ್ಲಿ ಅಧಿಕಾರ ಹಿಡಿದ ವಿಜಯೇಂದ್ರರಿಗೆ ತಂದೆಯ ರಾಜಕೀಯ ಪಟ್ಟುಗಳು ಸರಿಹೊತ್ತಿನ ಅಧಿಕಾರ ರಾಜಕೀಯದೊಳಗಿನ ರಾಜಕೀಯ ಪ್ರಜ್ಞೆಯನ್ನು ಎಷ್ಟು ಬೇಗ ಅರಿವಾಗುತ್ತದೋ ಅಷ್ಟು ಪಕ್ಷಕ್ಕೆ ಭವಿಷ್ಯದಲ್ಲಿ ಭದ್ರನೆಲೆ ಸಿಕ್ಕೀತು! ಇಂಥ ಸಂದಿಗ್ಧ ಪರಿಸ್ಥಿತಿಯ ನಿವಾರಣೆಗೆ ಹಿರಿಯರನ್ನು ಒಳಗೊಳ್ಳಿಸುವಲ್ಲಿ ವಿಜಯೇಂದ್ರರ ಬೌದ್ಧಿಕ ತಾಕತ್ತಿನ ಸವಾಲಿದೆ. ಆ ಮೂಲಕ ಸದೃಢವಾಗಿ ಪಕ್ಷ ಕಟ್ಟುವಲ್ಲಿ ಆರೋಗ್ಯಯುತ ವಾತಾವರಣದ ಹುಟ್ಟಿಗೆ ಕಾರಣವಾಗುವಂತೆ ದುಡಿಯಬೇಕಿದೆ. ಕೇವಲ ತಂದೆಯ ನಾಮವೊಂದೇ ಸಾಲುವುದಿಲ್ಲ ಎಂಬುದನ್ನು ವಿಜಯೇಂದ್ರರು ಅರಿಕೆ ಮಾಡಿಕೊಂಡು ಪಕ್ಷಕ್ಕಾಗಿ ಎಲ್ಲರನ್ನೂ ಸಂಘಟಿಸಬೇಕಿದೆ. ಮಾತು ಕಡಿಮೆ ಮಾಡಿ, ಬೇಕಾದಲ್ಲಿ ಬೇಕಾದಷ್ಟು ಮಾತಾಡುವಷ್ಟು ಯುಕ್ತಿಯನ್ನು ಬಳಸಬೇಕಿದೆ.
ಸಂಸಾರಿಯಾದವನು ಸಂನ್ಯಾಸಿಯಾಗಿ ಬದುಕಲು ಸಾಧ್ಯವಿಲ್ಲ. ಯಡಿಯೂರಪ್ಪರ ಬಗ್ಗೆ ಹುಟ್ಟಿಕೊಂಡಿರುವ ಅಸಮಾಧಾನಕ್ಕೆ ಪಕ್ಷದಲ್ಲೇ ಲಾಗಾಯ್ತಿನಿಂದಲೂ ಹುಯಿಲಿದೆ. ಹಾಗಂತ ಯಡಿಯೂರಪ್ಪ ಭ್ರಷ್ಟಾಚಾರವನ್ನು ಮಾಡಿಲ್ಲವೇ? ಹಗರಣಗಳೇ ಅಮರಿಕೊಂಡು ಜೈಲಿಗೂ ಹೋಗಿಬಂದವರವರು. ಪರಿಣಾಮವಾಗಿ, ಚರಿತ್ರೆಯ ಹಲವು ನಾಯಕರು ಅನುಭವಿಸಿದ ಏಕಾಂಗಿತನವನ್ನು ಈ ಇಳಿ ವಯಸ್ಸಲ್ಲಿ ಹೇಳಿಕೊಳ್ಳಲು ತನಗೆ ಸಮತೂಕದ ಯಾರೂ ಇಲ್ಲದೆ ಏಕಾಂಗಿಯಾದರು. ಕರ್ನಾಟಕದ ರಾಜಕಾರಣದಲ್ಲೇ ದುರಂತ ನಾಯಕರಾದರೋ ಅಂತ ಕೆಲವೊಮ್ಮೆ ಅನಿಸಿದ್ದೂ ಸುಳ್ಳಲ್ಲ! ಅವರ ರಾಜಕೀಯ ಬದುಕು ಈ ಬಗೆಯಲ್ಲೂ ವರ್ಣಮಯವಾಯಿತು! ಆದರೆ, ಈಗ ಹೈಕಮಾಂಡ್ ಅವರ ಮಾತಿಗೆ ಒಪ್ಪಿದೆ. ಅವರ ಮಗನಿಗೇ ರಾಜ್ಯಾಧ್ಯಕ್ಷ ಪದವಿಯನ್ನೂ ಕೊಟ್ಟಿದೆ. ಅಲ್ಲಿಗೆ ಹೈಕಮಾಂಡಿನೊಂದಿಗಿನ ಮನಸ್ತಾಪ ಮುಗಿಯಿತೆಂದೇ ಅರ್ಥ. ಇನ್ನೇನಿದ್ದರೂ ಪಕ್ಷಸಂಘಟನೆಗಾಗಿ ಮಗನ ಸಾರಥ್ಯಕ್ಕೆ ಬಲ ತುಂಬುವುದು. ಇದನ್ನು ಯಡಿಯೂರಪ್ಪ ಮಾಡಿಯೇ ಮಾಡುತ್ತಾರೆ! ಎಲ್ಲರನ್ನೂ ಒಳಗೊಳ್ಳಿಸುವ ಕಲೆ ಅವರಿಗೆ ಅನುಭವಜನ್ಯ! ಯಾಕೆಂದರೆ, ಎಂಥೆಂಥಾ ವಿಷಮ ಪರಿಸ್ಥಿತಿಯನ್ನೂ, ವೈರುದ್ಧ್ಯವನ್ನೂ ಬಂಡಾಯವನ್ನೂ ಅವರು ಕಂಡವರು!
ಎಲ್ಲ ಪಕ್ಷದಲ್ಲೂ ಹೈ ಕಮಾಂಡಿದೆ, ಹೈ ಡಿಮಾಂಡಿದೆ. ಸರ್ವಾಧಿಕಾರದ ಛಾಯೆಯಿದೆ. ವಂಶಪಾರಂಪರ್ಯದ ವಾಸನೆಯಿದೆ. ಸ್ವಜನ ಪಕ್ಷಪಾತವಿದೆ. ಗುಂಪುಗಾರಿಕೆಯಿದೆ. ಅಧಿಕಾರದಲ್ಲಿದ್ದಾಗ ಯಡಿಯೂರಪ್ಪನವರೂ ಇವೆಲ್ಲವನ್ನೂ ಅನುಭವಿಸಿ, ತನ್ನೊಳಗೂ ಉಪಕ್ರಮಿಸಿಯೇ ಬಂದವರು ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸ್ವಯಂ ಶಕ್ತಿಯಿಂದ ಬಿಜೆಪಿಯ ಇಮೇಜನ್ನು ಹೆಚ್ಚಿಸಿದ ಯಡಿಯೂರಪ್ಪನವರ ಒಪ್ಪಿಗೆಯಿಲ್ಲದೆ ಯಾವ ನಾಯಕನೂ ಯಡಿಯೂರಪ್ಪನವರ ಪರ್ಯಾಯವಾಗಲು ಸಾಧ್ಯವೇ ಇಲ್ಲ ಎಂಬುದು ಶಾಶ್ವತ ಸತ್ಯ! ಆದರೆ, ಒಂದಂತೂ ಸತ್ಯ: ಹೊರಪ್ರಪಂಚಕ್ಕೆ ಯಾರೇನೇ ಆದರ್ಶವನ್ನು ಅಭಿವ್ಯಕ್ತಿಸಿದರೂ ಕೊನೆಗೂ ಉಳಿಯುವುದು ಜಾತಿ ರಾಜಕಾರಣವೇ! ಜೊತೆಗೆ ಕುಟುಂಬ ರಾಜಕೀಯದ ದಟ್ಟವಾಸನೆ. ಆಂತರ್ಯದಲ್ಲಿ ಅನಿಸಿದ ಒಂದು ಮಾತನ್ನು ಹೇಳಿಬಿಡುತ್ತೇನೆ: ರೈತರ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ರೈತರ ಋಣ ತೀರಿಸಲು ಪ್ರಯತ್ನಿಸಿ ನಿಜಾರ್ಥದಲ್ಲಿ ಮಣ್ಣಿನ ಮಗನೆನಿಸಲು ಪ್ರಯತ್ನಿಸಿದರು ಎಂಬುದಂತೂ ಸತ್ಯ. ಯಾವ ಕಟ್ಟುಪಾಡಿಗೂ ಬಗ್ಗದ ಯಾವ ನಿಯಮಕ್ಕೂ ಜಗ್ಗದ ಆನೆ ನಡೆದದ್ದೇ ದಾರಿ ಎಂಬ ಸ್ವಭಾವದ ಯಡಿಯೂರಪ್ಪ ತಮ್ಮಷ್ಟಕ್ಕೆ ಬೆಳೆದಿದ್ದರೆ ಉದಾರ ಹಿಂದೂವಾಗಬಹುದಿತ್ತು! ಈಗ ತಾನು ಸವೆದ ದಾರಿಯಲ್ಲಿ ಮಗನನ್ನು ಸವೆಸುವ ಗುರುತರವಾದ ಜವಾಬ್ದಾರಿಯನ್ನು ಹೊತ್ತ ಯಡಿಯೂರಪ್ಪನವರು ನೇಪಥ್ಯದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಮತ್ತೆ ತನ್ನ ಹಳೆಯ ವರ್ಚಸ್ಸನ್ನು ಮೆರೆಯಬೇಕಿದೆ ಪಕ್ಷವನ್ನು ಗೆಲ್ಲಿಸಲು, ಹಳೆಯ ವರ್ಚಸ್ಸನ್ನು ಮೆರೆಸಲು! ಪಕ್ಷವನ್ನು ಗೆಲ್ಲಿಸುವುದು ಎಂದರೆ ಮಗನನ್ನು ಗೆಲ್ಲಿಸುವುದು ಅಂತಲೇ ಅರ್ಥ! ಬಿಜೆಪಿಯೆಂದರೆ ಯಡಿಯೂರಪ್ಪ, ಯಡಿಯೂರಪ್ಪ ಅಂದರೆ ಬಿಜೆಪಿ ಎಂಬುದನ್ನು ಈ ಹೊತ್ತಿನಲ್ಲೂ ಗಟ್ಟಿಗೊಳಿಸಲು! ಆದರೆ, ಅತ್ಯಂತಿಕ ಸತ್ಯದ ಮಾತೇನೆಂದರೆ, ಭವಿಷ್ಯದಲ್ಲಿ ಕರ್ನಾಟಕದ ಮಟ್ಟಿಗೆ ಬಿಜೆಪಿಯೆಂದರೆ, ಯಡಿಯೂರಪ್ಪ ಲೆಜೆಂಡಾಗಿ ನೆನಪಾಗಬೇಕೇ ಹೊರತು, ಯಡಿಯೂರಪ್ಪನವರೇ ಬಿಜೆಪಿ ಆಗಬಾರದು. ಪಕ್ಷಕ್ಕೆ ಅದು ಒಳ್ಳೆಯದಲ್ಲವೇ ಅಲ್ಲ!
ಕೊನೆಯ ಮಾತು: ಎದೆಯೆತ್ತರಕ್ಕೆ ಬೆಳೆದ ಮಗನಿಗೆ ತಾನು ಬೆಳೆದು ಬಂದ ದಾರಿಯಲ್ಲಿ ತನ್ನಂತೆಯೇ ಬೆಳೆಯಲು ದಾರಿಯನ್ನೇ ಸುಗಮಗೊಳಿಸಿಕೊಟ್ಟ ಪಿತೃತ್ವವನ್ನು ಕಂಡ ಸಂತೃಪ್ತಿಯ ಭಾವ ಯಡಿಯೂರಪ್ಪನವರನ್ನು ಆವರಿಸಿದ್ದಂತೂ ಸುಳ್ಳಲ್ಲ!
ಟಿ.ದೇವಿದಾಸ್
