ಇಂದು ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ಅದೇ ರೀತಿ ದಿನೇ ದಿನೇ ಅಪಘಾತಗಳ ಪ್ರಮಾಣ ಕೂಡ ಜಾಸ್ತಿಯಾಗುತ್ತಿದೆ. ರಸ್ತೆ ಸುರಕ್ಷತೆ ಬಗ್ಗೆ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ನಿರಂತರವಾಗಿ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ವಾಹನ ಸವಾರರು ನಿಯಮ ಪಾಲನೆ ಮಾಡುತ್ತಿಲ್ಲ ಟ್ರಾಫಿಕ್ ನಿಯಮ ಪಾಲನೆ ಅತೀ ಅಗತ್ಯವಾಗಿದ್ದು ಸಿಗ್ನಲ್ ಜಂಪ್, ರಾಂಗ್ ಸೈಡ್ ಡ್ರೈವ್, ಅತೀ ವೇಗ, ವ್ಹೀಲಿಂಗ್ ಸೇರಿದಂತೆ ಒಂದೊಂದು ನಿಯಮ ಉಲ್ಲಂಘನೆಗೂ ಒಂದೊಂದು ರೀತಿಯ ದಂಡ ವಿಧಿಸಲಾಗುತ್ತದೆ.
ಇಂದು ಟ್ರಾಫಿಕ್ ಪೊಲೀಸರು ಕೂಡ ಕಟ್ಟು ನಿಟ್ಟಾದ ನಿಯಮಗಳನ್ನು ಜಾರಿಗೆ ತರುತ್ತಾ ಇದ್ದು, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರನ್ನು ಶಿಕ್ಷಿಸಲೆಂದೇ ಎಲ್ಲಾ ಸಿಗ್ನಲ್ ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿರುವ ಮೂಲಕ ಟ್ರಾಫಿಕ್ ಪೊಲೀಸರು ವಾಹನ ಸವಾರರ ಮೇಲೆ ಕಣ್ಣಿಟ್ಟಿದ್ದಾರೆ. ಹಾಗೆಯೇ ಇದೀಗ ಸಾರಿಗೆ ಇಲಾಖೆಯಿಂದ ಮಕ್ಕಳ ಹಿತದೃಷ್ಟಿಯಿಂದ ಬೈಕ್ ಸವಾರಿಯ ವೇಳೆ 9 ತಿಂಗಳ ಮೇಲ್ಪಟ್ಟ ಹಾಗೂ 4 ವರ್ಷದ ಮಕ್ಕಳಿಗೆ ಶಿಶು ಕವಚ ಕಡ್ಡಾಯಗೊಳಿಸಿದೆ.
ಕಡ್ಡಾಯ ಪಾಲನೆ
9 ತಿಂಗಳು ಮೇಲ್ಪಟ್ಟ ಹಾಗೂ 4 ವರ್ಷದ ಒಳಗಿನ ಎಲ್ಲ ಮಕ್ಕಳು ಶಿಶು ಕವಚ ಹಾಕಲೇಬೇಕು. ಮಕ್ಕಳ ಹಿತ ದೃಷ್ಟಿಯಿಂದ ಈ ನಿಯಮ ಜಾರಿ ಮಾಡಿದೆ. ಇದಕ್ಕಾಗಿ ಕೇಂದ್ರ ಮೋಟಾರು ವಾಹನ ನಿಯಮಾವಳಿ 1989ರ ನಿಯಮ 138 (7) ಅನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳು ಸೇಫ್ಟಿ ಹಾರ್ನಸ್ ಧಾರಣೆ ಮಾಡುವುದು ಕಡ್ಡಾಯ ಎಂದಿದೆ.
ಹಾಗಾಗಿ ಮಕ್ಕಳನ್ನು ಬೈಕ್ಗಳಲ್ಲಿ ಕರೆದುಕೊಂಡು ಹೋಗುವಾಗ ಶಿಶು ಕವಚವನ್ನು ಕಡ್ಡಾಯವಾಗಿ ಹಾಕಬೇಕು. ಇಲ್ಲದಿದ್ದಲ್ಲಿ ಐನೂರರಿಂದ ಒಂದು ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
ಜುಲೈ ಮೊದಲ ವಾರದಿಂದಲೇ ಪೋಷಕರು ಮತ್ತು ಶಾಲೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದ್ದು ಎರಡನೆಯ ವಾರದಿಂದ ವಾಹನ ತಪಾಸಣೆ ಮಾಡಿ ದಂಡ ಹಾಕಲು ಶುರು ಮಾಡುತ್ತೇವೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತರು ತಿಳಿಸಿದ್ದಾರೆ.
2022ರ ಫೆಬ್ರವರಿ 2ರಂದೇ ಕೇಂದ್ರ ಸರ್ಕಾರ ಈ ಬಗ್ಗೆ ಅಧಿಸೂಚನೆ ಕೂಡ ಹೊರಡಿಸಿತ್ತು. ಆದರೆ ಇದು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಯೋಜನೆ ಜಾರಿಯಾಗಿರಲಿಲ್ಲ. ಇದೀಗ ಈ ವಿಚಾರ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದು ಈ ನಿಯಮ ಪಾಲನೆ ಕಡ್ಡಾಯ ಎಂದಿದೆ.
