Home ಅಂಕಣ ವಿದೇಶಗಳಲ್ಲಿ ಧರ್ಮಸಂಸ್ಥಾಪನೆ: ಪುತ್ತಿಗೆ ಶ್ರೀಗಳ ಸಾಧನೆ

ವಿದೇಶಗಳಲ್ಲಿ ಧರ್ಮಸಂಸ್ಥಾಪನೆ: ಪುತ್ತಿಗೆ ಶ್ರೀಗಳ ಸಾಧನೆ

ಸನಾತನ ಹಿಂದೂ ಧರ್ಮದ ಆಚರಣೆ ಭಾರತದಲ್ಲಿ ಎಷ್ಟು ನಡೆಯುತ್ತದೋ ಹಾಗೆಯೇ ಶ್ರದ್ಧಾಭಕ್ತಿಯ ಆಚರಣೆಗಳು ಇಂದು ಅಮೇರಿಕ, ಇಂಗ್ಲೆಂಡ್, ಕೆನಡ, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ಕಂಡುಬರುತ್ತಿವೆ. ಶುದ್ಧ ಕನ್ನಡದಲ್ಲಿ ಮಾತನಾಡುವ, ಸಂಸ್ಕೃತವನ್ನೂ ಕಲಿತಿರುವ ಮತ್ತು ಸಂಪೂರ್ಣ ಭಗವದ್ಗೀತೆಯನ್ನು ಕಂಠಸ್ಥಗೊಳಿಸಿಕೊಂಡಿರುವ ಸಾವಿರಾರು ಮಂದಿ ನಮಗಿಂದು ಅಲ್ಲಿ ಕಾಣಸಿಗುತ್ತಾರೆ. ಇದನ್ನು ಸುಮಾರು ಇಪ್ಪತ್ತೈದು ವರ್ಷಗಳಿಂದೀಚೆಗೆ ನಡೆದ ಅಭೂತಪೂರ್ವ ಧಾರ್ಮಿಕ ಕ್ರಾಂತಿ ಎನ್ನಬಹುದು. ಇದರ ಕಾರಣಕರ್ತರು ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು. ಹಾಗೆಯೇ ವಿದೇಶಗಳಲ್ಲಿ ಹದಿನೈದು ಬೃಹತ್ ಶಾಖೆಗಳನ್ನು ಹೊಂದಿರುವ ಕರ್ನಾಟಕದ ಹೆಮ್ಮೆಯ ಏಕೈಕ ಧಾರ್ಮಿಕ ಸಂಸ್ಥೆಯೆಂದರೆ ಅದು ಉಡುಪಿಯ ಶ್ರೀ ಪುತ್ತಿಗೆ ಮಠ..!

ಭಾರದಲ್ಲಿದ್ದುಕೊಂಡು ಇಲ್ಲಿಯೇ ವಿದ್ಯೆ, ಉದ್ಯೋಗಗಳನ್ನು ಸಂಪಾದಿಸಿ, ಒಳ್ಳೆಯ ಮನೆ ನಿರ್ಮಿಸಿ ಚಂದದ ಬದುಕೊಂದನ್ನು ಕಟ್ಟಿಕೊಳ್ಳಲು ನಾವು ಬಹಳ ಹೆಣಗಾಡಬೇಕಾಗುತ್ತದೆ. ಇನ್ನು ವಿದೇಶಗಳಿಗೆ, ಅದರಲ್ಲಿಯೂ ಅಮೇರಿಕಾದಂತಹ ಮುಂದುವರಿದ ದೇಶಗಳಿಗೆ ಹೋಗಿ ಅಲ್ಲಿಯೇ ನೆಲೆಸುವುದೆಂದರೆ ಸುಲಭದ ಮಾತೇನಲ್ಲ! ಅಲ್ಲಿನ ವೀಸಾ ಪಡೆಯುವುದು, ದೀರ್ಘಪ್ರಯಾಣ, ಉದ್ಯೋಗ ಹುಡುಕುವುದು, ದುಬಾರಿ ಖರ್ಚು ವೆಚ್ಚಗಳು ಇತ್ಯಾದಿ ಸಾಲು ಸಾಲು ಸವಾಲುಗಳು ಹೆಜ್ಜೆ ಹೆಜ್ಜೆಗೂ ಎದುರಾಗುತ್ತವೆ. ಆದರೂ ಹೊರದೇಶಕ್ಕೆ ಹೋಗಿ, ಸಾಧನೆ ಮಾಡಿ, ಅಲ್ಲಿಯೇ ಮನೆಮಾಡಿಕೊಂಡು ಇಂದು ನೆಮ್ಮೆದಿಯಿಂದ ಬದುಕುತ್ತಿರುವ ಪ್ರತಿಯೊಂದು ಭಾರತೀಯನ ಜೀವನದ ಹಿನ್ನೆಲೆಯಲ್ಲೂ ಅನೇಕ ಸಂಕಷ್ಟಗಳನ್ನು ಎದುರಿಸಿದ ಒಂದು ಅಪೂರ್ವ ಸಾಹಸ ಗಾಥೆಯಿರುತ್ತದೆ! ಹೊಸ ದೇಶ, ಹೊಸ ಭಾಷೆ, ಜನರು, ವಾತಾವರಣ, ಜೀವನಕ್ರಮ ಇತ್ಯಾದಿಗಳಿಗೆ ಹೊಂದಿಕೊಂಡು ಅಲ್ಲಿಯೂ ಯಶಸ್ಸನ್ನು ಸಾಧಿಸುದೆಂದರೆ ದೊಡ್ಡ ಸಾಧನೆಯೇ ಸರಿ.

ಅಂತದ್ದರಲ್ಲಿ ಹದಿಹರೆಯದಲ್ಲೇ ಸನ್ಯಾಸ ದೀಕ್ಷೆ ಪಡೆದ, ಯಾವ ಲೌಕಿಕ ಜೀವನಾನುಭವವೂ ಇಲ್ಲದ, ಕೇವಲ ಅಧ್ಯಾತ್ಮಿಕ ವಿದ್ಯೆಯಲ್ಲಷ್ಟೇ ಪಾರಂಗತತ್ವವನ್ನು ಪಡೆದ ಯುವ ಯತಿಗಳೋರ್ವರು ವಿದೇಶಗಳಿಗೆ ಹೋಗಿ, ಅಲ್ಲಿ ಧರ್ಮಜಾಗೃತಿಯನ್ನುಂಟು ಮಾಡುತ್ತಾರೆ, ಹತ್ತಾರು ಮಠಮಂದಿರಗಳನ್ನು ನಿರ್ಮಿಸುತ್ತಾರೆ ಎಂದರೆ ನಂಬಲು ಸಾಧ್ಯವೇ? ಅದರಲ್ಲೂ ಈ ಆಧುನಿಕ ಯುಗದಲ್ಲಿ, ಎಂಟುನೂರು ವರ್ಷಗಳ ಇತಿಹಾಸವಿರುವ ಒಂದು ದೊಡ್ಡ ಸಂಸ್ಥಾನದ ಪೀಠಾಧಿಪತಿಗಳೋರ್ವರು ತಮ್ಮ ಕಟ್ಟುನಿಟ್ಟಿನ ಧಾರ್ಮಿಕ ಅನುಷ್ಠಾನಗಳನ್ನಿಟ್ಟುಕೊಂಡೇ ಅಲ್ಲಿಗೆ ಹೋಗಿದ್ದು, ಎಲ್ಲೆಡೆಯಲ್ಲೂ ತಮ್ಮ ಕಠಿಣ ಯತಿ ಧರ್ಮವನ್ನು ಚಾಚೂ ತಪ್ಪದೆ ಅನುಸರಿಸಿಕೊಂಡು ಬಂದದ್ದು ಮತ್ತು ಇಂತಹ ಸನಾತನ ಆಚರಣೆಗಳನ್ನು ಸಂಕೋಚವಿಲ್ಲದೆ ಯಾರೂ ಎಲ್ಲಿಯೂ ನಡೆಸಿಕೊಂಡು ಬರಬಹುದು ಎಂದು ಆಧುನಿಕ ಜಗತ್ತಿಗೆ ತೋರಿಸಿಕೊಟ್ಟದ್ದೂ ಒಂದು ದೊಡ್ಡ ಸಾಧನೆಯಲ್ಲವೇ?

ಏಕೆಂದರೆ ಈಗಿನ ಕಾಲದಲ್ಲಿ ವಿದೇಶೀ ಆಕರ್ಷಣೆ ಮತ್ತು ಅವರ ಆಧುನಿಕ ಜೀವನ ಶೈಲಿಯ ಅನುಕರಣೆ ಭಾರತದಲ್ಲಿಯೇ ಅನೇಕ ಬದಲಾವಣೆಗಳನ್ನು ಉಂಟುಮಾಡಿದೆ. ಇಲ್ಲಿನೆ ಉಡುಗೆ ತೊಡುಗೆ, ಮಾತುಕತೆ ಮತ್ತು ಜೀವನಕ್ರಮಗಳಲ್ಲಿಯೇ ಬಹಳ ಮಾರ್ಪಾಡುಗಳಾಗಿವೆ. ಪರಂಪರಾಗತ ಆಚರಣೆಗಳು, ಶಾಸ್ತ್ರ ವಿದ್ಯೆಗಳು ಮತ್ತು ಬಹುತೇಕ ಪುರಾತನ ಧಾರ್ಮಿಕ ಅನುಷ್ಠಾನಗಳು ಗೊಡ್ಡು ಸಂಪ್ರದಾಯಗಳೆನಿಸಿಬಿಟ್ಟಿವೆ. ಆದರೂ ಅದನ್ನು ಕಷ್ಟಪಟ್ಟು ಉಳಿಸಿಕೊಂಡ ಕೆಲವಷ್ಟೇ ಉದಾಹರಣೆಗಳು ಭಾರತದಲ್ಲಿ ಅಲ್ಲಲ್ಲಿ ಕಂಡುಬರುತ್ತವೆ. ಆದರೆ ಅಮೇರಿಕಾದಂತಹ ಮುಂದುವರಿದ ದೇಶಕ್ಕೆ ಹೋಗಿ ಲೌಕಿಕ ವಿದ್ಯೆಯಲ್ಲಿ ಉನ್ನತ ಸಾಧನೆಯನ್ನು ಮೆರೆದು ಎಲ್ಲ ಸೌಕರ್ಯಗಳಿಂದ ಕೂಡಿದ ಐಷಾರಾಮಿ ಆಧುನಿಕ ಜೀವನವನ್ನು ಹೊಂದಿರುವ ಭಾರತೀಯರ ಬದುಕನ್ನು ಸಂಪೂರ್ಣವಾಗಿ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯತ್ತ ಪರಿವರ್ತಿಸಿದ್ದು ಪುತ್ತಿಗೆ ಶ್ರೀಗಳ ಅದ್ಭುತ ಸಾಧನೆ!

ಇನ್ನು ವಿದೇಶಕ್ಕೆ ಹೋದವರು ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುತ್ತಾರೆ. ಅಲ್ಲಿಯವರಂತೇ ಆಗಿ ಬಿಡುತ್ತಾರೆ ಎನ್ನುವುದಾಗಿ ಬಹಳ ಮಂದಿ ಹೇಳುತ್ತಾರೆ. ಅದಕ್ಕೆ ಕಾರಣವೂ ಇದೆ. ಅನ್ಯಮತೀಯ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತ ಆಗಿರುವವರು ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಹೆದರುತ್ತಾರೆ ಅಥವಾ ಸಹಜವಾಗಿಯೇ ಸಂಕೋಚಪಡುತ್ತಾರೆ. ಆದರೆ ಪುತ್ತಿಗೆ ಶ್ರೀಗಳಂತಹ ಧೀಮಂತ ಧಾರ್ಮಿಕ ನಾಯಕರು ಅಲ್ಲಿಗೆ ಕಾಲಿಟ್ಟರೆ ಅಲ್ಲಿನ ನಮ್ಮ ಸನಾತನ ಧರ್ಮಾ ಅನುಯಾಯಿಗಳಿಗೆ ತಮ್ಮ ಆಚರಣೆಗಳನ್ನು ಧೈರ್ಯದಿಂದ ಪಾಲಿಸಿಕೊಂಡು ಸೌಹಾರ್ದಯುತವಾಗಿ ಬದುಕಬಹುದು ಎನ್ನುವುದು ಸ್ಪಷ್ಟವಾಗಿದ್ದು ಪೂಜ್ಯ ಶ್ರೀಗಳ ಐತಿಹಾಸಿಕ ದುಬೈ, ಅಬುದಾಬಿ ಭೇಟಿಯ ನಂತರ!

ವಿಶ್ವಸಂಸ್ಥೆಯ ಧರ್ಮಶಾಂತಿ ಕಾರ್ಯಕ್ರಮದ ಅಂಗವಾಗಿ ದುಬೈಯಲ್ಲಿ ನಡೆದ ಧಾರ್ಮಿಕ ನಾಯಕರ ಸಮ್ಮೇಳನದಲ್ಲಿ ಭಾಗವಹಿಸುವಂತೆ ಪೂಜ್ಯ ಪುತ್ತಿಗೆ ಶ್ರೀಗಳಿಗೆ ಸ್ವತಃ ದುಬೈ ರಾಜನಿಂದಲೇ ಅಧಿಕೃತ ಆಹ್ವಾನ ಬಂತು. ಆ ಸಮಯದಲ್ಲಿ ಪೂಜ್ಯ ಶ್ರೀಗಳು ಅಲ್ಲಿನ ಅನೇಕ ಭಕ್ತರ ಮನೆಗಳಿಗೂ ಭೇಟಿ ನೀಡಿ ಪೂಜೆ, ಹೋಮಾದಿ ಕಾರ್ಯಕ್ರಮಗಳು ಮತ್ತು ಪ್ರವಚನಗಳನ್ನು ನಡೆಸಿಕೊಟ್ಟರು. ಅಲ್ಲಿಯ ತನಕ ತಮ್ಮ ಧಾರ್ಮಿಕ ಆಚರಣೆಗಳನ್ನು ಮನೆಯೊಳಗಿನ ನಾಲು ಗೋಡೆಗಳೊಳಗಷ್ಟೇ ಸೀಮಿತ ಗೊಳಿಸಿದ್ದ ಹಿಂದೂಗಳು, ಕಚ್ಚೆ ಪಂಚೆಗಳನ್ನುಟ್ಟುಕೊಂಡು ಪೂಜ್ಯ ಶ್ರೀಗಳನ್ನು ಅಲ್ಲಿನ ಬೀದಿಗಳಲ್ಲಿ ಚೆಂಡೆ, ಶಂಖ ಘಂಟೆಗಳ ನಾದದೊಂದಿಗೆ, ವೇದ ಘೋಷಗಳೊಂದಿಗೆ ಸ್ವಾಗತಿಸುವಷ್ಟು ಧೈರ್ಯ ತೋರಿಸಿದ್ದು ಒಂದು ಅಪೂರ್ವವಾದ ಸನ್ನಿವೇಶ. ಇದೇ ಚಿತ್ರಣಗಳು ಪೂಜ್ಯರ ಅಮೇರಿಕಾ, ಇಂಗ್ಲೆಂಡ್, ಸಿಂಗಾಪುರ, ನ್ಯೂಜಿಲ್ಯಾಂಡ್, ಕೆನಡಾ, ಒಮಾನ್, ಬಹರೈನ್, ಆಸ್ಟ್ರೇಲಿಯ ಮೊದಲಾದ ದೇಶಗಳಿಗೆ ಭೇಟಿಯಿತ್ತಾಗ ನೂರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಮತ್ತೆ ಮತ್ತೆ ಸಂಭವಿಸುತ್ತದೆ ಎನ್ನುವುದೊಂದು ಅಪೂರ್ವ ಸಾಧನೆಯಲ್ಲವೇ?

ಅಮೇರಿಕಾಕ್ಕೆ ಹೋದ ನಮ್ಮ ಮಕ್ಕಳು ಸಂಸ್ಕೃತಿ ಹೀನರಾಗುತ್ತಾರೆ ಎಂದು ಭಯಪಟ್ಟಿದ್ದ ಪೋಷಕರು ಇಂದು ಅತ್ಯಂತ ಸಮಾಧಾನ ಹೊಂದಿದ್ದಾರೆ. ಏಕೆಂದರೆ ನಮ್ಮ ಮಕ್ಕಳು, ಮೊಮ್ಮಕ್ಕಳು ಈಗ ನಮಗಿಂತಲೂ ಹೆಚ್ಚು ಧಾರ್ಮಿಕರಾಗಿದ್ದಾರೆ, ಹೆಚ್ಚು ಆಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ವ್ರತ ಅನುಷ್ಠಾನಗಳ ಆಚರಣೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ ಎಂದು ತಿಳಿದಾಗ ಯಾವ ತಂದೆ ತಾಯಿಗಳಿಗೆ ತಾನೇ ಹೆಮ್ಮೆಯೆನಿಸುವುದಿಲ್ಲ ? ಶ್ರೀಮಠದ ವಿದೇಶಗಳಲ್ಲಿರುವ ಅಷ್ಟೂ ಶಾಖೆಗಳು ಈ ನಿಟ್ಟಿನಲ್ಲಿ ಅವಿಶ್ರಾಂತವಾಗಿ ಕಾರ್ಯನಿರ್ವಸುವಂತೆ ಮಾರ್ಗದರ್ಶನ ನೀಡುತ್ತಿರುವ ಪೂಜ್ಯ ಪುತ್ತಿಗೆ ಶ್ರೀಗಳ ಸಾಧನೆಯನ್ನು ಇಂದು ಎಲ್ಲರೂ ಕೊಂಡಾಡುತ್ತಾರೆ.

ಸ್ವಾಮಿಗಳು ವಿದೇಶಕ್ಕೆ ಯಾಕೆ ಹೋಗಬೇಕು? ಧರ್ಮ ಜಾಗೃತಿಯನ್ನು ಇಲ್ಲೇ ಮಾಡಬಹುದಲ್ಲ? ಎಂದು ಕೆಲವರು ಪ್ರಶ್ನಿಸುತ್ತಾರೆ. ದುಡ್ಡುಮಾಡಲೆಂದೇ ಅಲ್ಲಿಗೆ ಹೋಗಿದ್ದಾರೆಂದು ಆರೋಪಿಸುವವರೂ ಇದ್ದಾರೆ. ಆದರೆ ಅದಕ್ಕೆ ಇಲ್ಲಿ ಬೇಕಾದಷ್ಟು ಮಠ ಮಂದಿರಗಳಿವೆ. ಧರ್ಮ ಗುರುಗಳೂ ಇದ್ದಾರೆ. ವಿದೇಶಗಳಲ್ಲಿ ಇಂತಹ ಸಾಧನೆಯನ್ನು ಮಾಡುವುದು ಸಾಮಾನ್ಯರಿಂದ ಸಾಧ್ಯವಿಲ್ಲ. ಅಲ್ಲಿನ ಭಕ್ತರ ತೀವ್ರ ಒತ್ತಾಯ ಮತ್ತು ವಿನಂತಿಯ ಮೇರೆಗೆ ಅಲ್ಲಿಗೆ ಪ್ರಯಾಣಿಸುವ ನಿರ್ಧಾರ ತಳೆದ ಶ್ರೀಗಳು ಅಲ್ಲಿರುವ ಲಕ್ಷಾಂತರ ಹಿಂದೂಗಳಲ್ಲಿ ಧರ್ಮಜಾಗ್ರತಿಯನ್ನು ಮೂಡಿಸುವ ಪಣತೊಟ್ಟ ಧೀಮಂತರು! ಅಲ್ಲಿನ ಸ್ಥಳೀಯ ಹಿಂದೂ ನಾಗರಿಕರ ನೇತೃತ್ವದಲ್ಲಿ ಅನೇಕ ಸಂಘಟನೆಗಳನ್ನು ರಚಿಸಿದ್ದಾರೆ. ಅಲ್ಲಿನ ಬ್ಯಾಂಕುಗಳಲ್ಲಿ ಹಲವಾರು ಮಿಲಿಯನ್ ಡಾಲರ್ ಗಳಷ್ಟು ಸಾಲ ಮಾಡಿ ಚರ್ಚುಗಳನ್ನು ಖರೀದಿಸಿ ಮಂದಿರಗಳನ್ನು ನಿರ್ಮಿಸಿದ್ದಾರೆ! ಕನ್ನಡ, ಸಂಸ್ಕೃತ, ಭಗವದ್ಗೀತೆ ಇತ್ಯಾದಿಗಳನ್ನು ಎಲ್ಲರಿಗೂ ಕಲಿಸಿಕೊಡುತ್ತಿದ್ದಾರೆ. ಹಿಂದೂಗಳೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಭೇದ ಭಾವಗಳಿಲ್ಲದ ಸಹಪಂಕ್ತಿ ಭೋಜನ ಅಲ್ಲಿ ನಿತ್ಯವೂ ನಡೆಯುತ್ತದೆ.

ಒಟ್ಟಿನಲ್ಲಿ ಯಾವುದೇ ಟೀಕೆಗಳಿಕೆ ಎದೆಗುಂದದೆ ತಮ್ಮ ಕಠಿನ ನಿಯಮಾನುಷ್ಠಾನಗಳ ಯತಿಧರ್ಮದಲ್ಲಿ ಸ್ವಲ್ಪವೂ ವ್ಯತ್ಯಾಸ ಮಾಡಿಕೊಳ್ಳದೆ ಪೂಜ್ಯ ಶ್ರೀಗಳು ತಮ್ಮ ಸಾಧನೆಯ ಜೈತ್ರಯಾತ್ರೆಯನ್ನು ಮುಂದುವರಿಸುತ್ತಲೇ ಇದ್ದಾರೆ. ನೂರಾರು ಮಂದಿ ವೈದಿಕ ವಿದ್ವಾಂಸರನ್ನು ತಯಾರಿಸಿ ಅವರಿಗೆ ವಿದೇಶಗಳಲ್ಲಿ ಉದ್ಯೋಗ ಅವಕಾಶಗಳನ್ನು ಕೊಡಿಸಿದ್ದಾರೆ.

ಕೇವಲ ಲೌಕಿಕ ವಿದ್ಯೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆದವರಷ್ಟೇ ವಿದೇಶಕ್ಕೆ ಹೋಗುತ್ತಾರೆ ಅಲ್ಲಿ ನೆಲೆಸುತ್ತಾರೆ ಎನ್ನುವುದೊಂದು ಸಾಮಾನ್ಯ ನಂಬಿಕೆಯಾಗಿತ್ತು. ಅಂತದ್ದರಲ್ಲಿ ಆಧ್ಯಾತ್ಮ ವಿದ್ಯಾಪಾರಂಗತರು, ಪರಂಪರಾಗತ ಅನುಷ್ಠಾನವಂತರು ಮತ್ತು ಶಿಖಾಧಾರಿಗಳೂ ಇಂದು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಇಟ್ಟುಕೊಂಡು ವಿದೇಶಗಳಲ್ಲಿ ಸಂಚರಿಸುತ್ತಾರೆ. ಅಲ್ಲಿಯೇ ನೆಲೆಸುತ್ತಾರೆ ಎಂದರೆ ಇದು ಪೂಜ್ಯ ಪುತ್ತಿಗೆ ಶ್ರೀಪಾದರು ಮಾಡಿದ ಧರ್ಮ ಕ್ರಾಂತಿಯಲ್ಲವೇ? ಅದ್ಭುತ ಸಾಧನೆಯಲ್ಲವೇ?

ಯೋಗೀಂದ್ರ ಭಟ್ ಉಳಿ
ಶ್ರೀಕೃಷ್ಣವೃಂದಾವನ, ನ್ಯೂಜೆರ್ಸಿ, USA .

 
Previous articleಬೆಳ್ತಂಗಡಿ: ಬಾಂಬ್ ಸ್ಫೋಟದಂತೆ ಕೇಳಿಸಿದ ಶಬ್ಧ; ಗ್ರೆನೈಡ್ ಸ್ಫೋಟಕ ತಯಾರಿ ಅನುಮಾನ..!
Next articleಮಂಡ್ಯದಲ್ಲಿ ಭಾಗವಧ್ವಜ ಕೆಳಗಿಳಿಸಿದ ಘಟನೆ ಖಂಡಿಸಿ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ