Home ಅಂಕಣ ಚಿರಂತನವಾದ ಹಿಂದೂ ಅಸ್ಮಿತೆಯಾಗಿ ಶ್ರೀರಾಮಮಂದಿರ

ಚಿರಂತನವಾದ ಹಿಂದೂ ಅಸ್ಮಿತೆಯಾಗಿ ಶ್ರೀರಾಮಮಂದಿರ

ಯಕ್ಷಗಾನದ ಹಿರಿಯ ಅರ್ಥಧಾರಿಯೂ ಪಾತ್ರಧಾರಿಯೂ ಆದ ಶ್ರೀ ಕುಂಬ್ಳೆ ಸುಂದರರಾವ್ ಅವರನ್ನು “ರಾಮ ಮಂದಿರವನ್ನು  ಅಯೋಧ್ಯೆಯಲ್ಲೇ ಯಾಕೆ ಕಟ್ಟಬೇಕು?“ ಅಂತ ಒಮ್ಮೆ ಯಾರೋ ಕೇಳಿದರಂತೆ. “ಲಂಗೋಟಿಯನ್ನು ಅಲ್ಲೇ ಯಾಕೆ ಕಟ್ಟಿಕೊಳ್ಳುತ್ತಾರೆ, ಕೊರಳಿಗೆ ಯಾಕೆ ಕಟ್ಟಿಕೊಳ್ಳುವುದಿಲ್ಲ“ ಎಂದು ಕುಂಬ್ಳೆಯವರು ಆ ಪ್ರಶ್ನೆಗೆ ಉತ್ತರಿಸಿದರು ಎಂಬ ಅಂತೆ ಕಂತೆಯೆಂಬ ವದಂತಿ ಜನರ ಬಾಯಲ್ಲಿತ್ತು. ಕುಂಬ್ಳೆಯವರು ಹೀಗೆ ಹೇಳಲು ಸಾಧ್ಯವೇ ಇಲ್ಲ ಎಂದೆನಿಸಿ ಕುಂಬ್ಳೆಯವರಲ್ಲೇ ಈ ವಿಚಾರವನ್ನು ನಾನು ಒಮ್ಮೆ ಕೇಳಿದೆ. ನನ್ನ ಮಾತನ್ನು ಕೇಳುತ್ತಿದ್ದಂತೆಯೇ ಕುಂಬ್ಳೆಯವರು ಮುಸಿ ಮುಸಿ ನಕ್ಕರು. “ಹಾಗೆ ಹೇಳಲು ಕುಂಬ್ಳೆಗೇನು ಬುದ್ಧಿಭ್ರಮಣೆಯೇ“ ಎಂದು ಮರುಕ್ಷಣವೇ ಪ್ರಶ್ನಿಸಿದರು. ಅಂತೂ ನಾನಂದುಕೊಂಡ ಹಾಗೆ ಈ ಸಂಗತಿ ಸತ್ಯಕ್ಕೆ ದೂರವೆಂದು ಅವರಿಂದಲೇ ಗೊತ್ತಾದ ಮೇಲೂ, ’ಮತ್ತೆ ಯಾಕೆ ಜನರ ಬಾಯಲ್ಲಿ ಇಂಥದ್ದೊಂದು ವದಂತಿಯಿದೆ?’ ಅಂತ ಕೇಳಿದೆ. “ಯಾರೋ ಕಮ್ಯುನಿಷ್ಟರು ಹರಡಿಸಿದ ಸುಳ್ಳು ಪ್ರಚಾರವಿರಬೇಕು“ ಎಂದು ಕುಂಬ್ಳೆಯವರು ದೊಡ್ಡ ನಗುವಿನಲ್ಲಿ ಹೇಳಿದರು. ಒಬ್ಬ ಹಿರಿಯ ವಿದ್ವಾಂಸನನ್ನು ಹೀಗೂ ಅಪಪ್ರಚಾರ ಮಾಡುತ್ತಾರೆಯೇ ಎಂದೆನಿಸಿ, ಆಗ ನಾನು ಜೋರಾಗಿ ನಕ್ಕಿದ್ದು, ಅವರೂ ನನ್ನ ಮಾತಿಗೆ ನಕ್ಕಿದ್ದೂ ಇನ್ನೂ ನೆನಪಿದೆ. ಆದರೆ, ನೆನಪಿಡಬೇಕಾದ ಸಂಗತಿಯೇನೆಂದರೆ,  ಅಯೋಧ್ಯೆಯಲ್ಲೇ ಕುಂಬ್ಳೆಯವರು ಉಪನ್ಯಾಸ ಮಾಡಿದವರು. ಅಯೋಧ್ಯೆಯ ಕುರಿತಾಗಿ ಹೇಳಲು ಅವರಲ್ಲಿ ಸಾಕಷ್ಟು ವಿಷಯಗಳಿವೆ.

ಧರ್ಮವೆಂಬುದು ಮಾನವನ ಅಂತರಂಗದ ವಿಕಾಸಕ್ಕೆ ಸಂಬಂಧಿಸಿದ್ದು. ಆತ್ಮದ ಅರಳುವಿಕೆಗೆ ಪ್ರೇರಕವಾದುದು. ಮನೋಭಾವನೆಗಳನ್ನು ಪರಿಶುದ್ಧಗೊಳಿಸುವ ಸಾಧನವದು. ವ್ಯಕ್ತಿತ್ವದ ವಿಕಾಸವಾಗುವುದು ಧರ್ಮದಿಂದಲೇ. ಎಲ್ಲರನ್ನೂ ಎಲ್ಲವನ್ನೂ ಒಳಗೊಳಿಸಿಕೊಳ್ಳುವ ಔದಾರ್ಯವನ್ನು ಧರ್ಮವು ಉದ್ದೀಪಿಸುತ್ತದೆ. ಎಲ್ಲರನ್ನೂ ಏಕತ್ರಗೊಳಿಸಿ ಸರ್ವಹಿತವನ್ನು ಬಯಸುವುದು ಧರ್ಮದ ಮೂಲಸ್ವರೂಪ. ನಿಜವಾದ ಧರ್ಮವು ತಾಯೀಭಾವವನ್ನು ಹೊಂದಿರುತ್ತದೆ. ನಿರೀಶ್ವರವಾದಿಗಳನ್ನೂ ತನ್ನೊಡನೆ ಬದುಕುವುದಕ್ಕೆ ಧರ್ಮ ಎಡೆಮಾಡಿಕೊಡುತ್ತದೆ. ಅಂದರೆ ಎಲ್ಲದರಲ್ಲೂ ಮುಕ್ತತೆಯನ್ನು ಬಯಸುವ ಬಯಲಿನ ಸ್ವರೂಪವೇ ಧರ್ಮ. ಧರ್ಮ ಮನುಷ್ಯನಿಗೆ ಆಫೀಮು ಆಗಬಾರದು. ಹಾಗಾಗಿಬಿಟ್ಟರೆ ಅದು ಮತಾಂಧತೆಯ ಸ್ವರೂಪದಲ್ಲಿ ಅಭಿವ್ಯಕ್ತವಾಗುತ್ತದೆ. ಭೂತದ ನೆನಪೂ ಕೂಡ ನಿಜ ಧಾರ್ಮಿಕ ಮನಸ್ಸಿಗೆ ಇರುವುದಿಲ್ಲ ಎನ್ನುವವರಿದ್ದಾರೆ. ಮಾನಸಿಕ ಪಾವಿತ್ರ್ಯವೇ ಧರ್ಮದ ಮೂಲಸೆಲೆ. ಯಾವಾಗ ಧರ್ಮವು ಮತೀಯ ವಿನ್ಯಾಸದಲ್ಲಿ ಅಭಿವ್ಯಕ್ತಗೊಳ್ಳುತ್ತದೋ ಆಗ ಹೃದಯವಂತಿಕೆ ಸಾಯುತ್ತದೆ. ಧರ್ಮದ ಹೊರ ಆಚರಣೆ ಮತೀಯ ವಿನ್ಯಾಸದ್ದು. ಅಂಥ ಮತೀಯ ಮನೋಭೂಮಿಕೆಯಲ್ಲಿ ಧರ್ಮವೆಂಬುದು ಮಾದಕದ್ರವ್ಯದಂತೆ ಮತ್ತನ್ನು ತರಿಸುತ್ತದೆ. ಸಂಪ್ರದಾಯಕ್ಕೆ ವೈಚಾರಿಕತೆಯ ಕಾಠಿಣ್ಯವೆಂಬುದು ಪರಮಶತ್ರು. ಇದರಿಂದಾಗಿ ಅನ್ಯಮತದ ಸ್ವೀಕಾರವೆಂಬುದು ಸಂಪ್ರದಾಯಕ್ಕೆ ವಿರೋಧವಾಗಿ  ಸೌಹಾರ್ದತೆಯೆಂಬುದು ಕಗ್ಗಂಟಾಗುತ್ತದೆ. ಮತದ ಈ ಕುರುಡು ಆರಾಧನೆ ಮನುಷ್ಯನಲ್ಲಿ ಜೀವವಿರೋಧಿ ನಿಲುವನ್ನು ಬೆಳೆಸುತ್ತದೆ. ಹೆಣ್ಣು, ಹೊನ್ನು, ಮಣ್ಣಿನ ಅತ್ಯಾಸೆಯಿಂದ ಹುಟ್ಟುವ ಕೇಡಿಗಿಂತಲೂ ಮತ-ಧರ್ಮಗಳ ಸಂಘರ್ಷ ಹುಟ್ಟಿಸುವ ಭೀತಿ ಭಯಾನಕ. ಮತೀಯ ಪ್ರಜ್ಞೆ ಗಾಢವಾಗುತ್ತಾ ಹೋದ ಹಾಗೆ ಅದು ಸಾಂಸ್ಥಿಕ ಸ್ವರೂಪವನ್ನು ಪಡೆಯುತ್ತದೆ. ವಸುಧೈವ ಕುಟುಂಬಕಮ್ ಎಂಬ ವಿಶಾಲಪ್ರಜ್ಞೆ ನಾಶವಾಗುತ್ತಾ ಅನ್ಯಮತೀಯ ಶ್ರೇಷ್ಠ ವಿಚಾರಗಳು ಯಾವುದು ಒಳಬರದಂತಾಗಿ ಜಿಡ್ಡುಗಟ್ಟುತ್ತದೆ. ಇದೊಂದು ಕೂಪಮಂಡೂಕ ಮನೋಭಾವದ ಸಂಕುಚಿತದ ಸ್ವರೂಪದ ಸ್ಥಿತಿ. ತನ್ನದನ್ನು ಬಿಟ್ಟು ಯಾವುದನ್ನೂ ಒಪ್ಪಲಾರದ, ಸ್ವೀಕರಿಸಲಾಗದ ಸ್ಥಿತಿಯನ್ನು ತಲುಪಿದಾಗಲೇ ಮತೀಯ ವಿನ್ಯಾಸಗಳು ಪರಸ್ಪರ ಸಂಘರ್ಷಕ್ಕೆಡೆ ಮಾಡುತ್ತದೆ. ಮನುಷ್ಯನ ಮನಸ್ಸು ಕ್ರಮೇಣ ಶುಷ್ಕವಾಗುತ್ತಾ ಹೋಗುತ್ತದೆ.

ಹಿಂದೂ ಎಂಬ ಜೀವನ ಪದ್ಧತಿಯು ವೈಚಾರಿಕ ಶುಷ್ಕತನವೆಂಬುದನ್ನು ಎಂದೂ ಸೋಂಕಿಸಿಕೊಳ್ಳದೆ ಅನರ್ಘ್ಯತೆಯನ್ನು ಕಾಪಿಟ್ಟುಕೊಂಡೇ ಬಂದಿದೆ. ಇದರಲ್ಲಿ ಕಲ್ಪನೆಗಳಿಲ್ಲ. ಎಲ್ಲವೂ ವೈಚಾರಿಕವಾದ ನಿಲುವನ್ನು ಹೊಂದಿದೆ. ’ಹಿಂದೂ’ ರಾಷ್ಟ್ರವಾಚಕವೇ ಹೊರತು ಧರ್ಮ ಅಥವಾ ಮತವಾಚಕವಲ್ಲ. ಇದೊಂದು ಜೀವನ ಮಾರ್ಗ. ಭಾರತೀಯ ಚಿಂತನಶೀಲ ಮನಸ್ಸುಗಳು ಒಂದುಗೂಡಿರುವ ಬಹುವ್ಯಾಪಕತೆಯುಳ್ಳ ಉತ್ತಮ ವ್ಯವಸ್ಥೆಯೇ ಹಿಂದೂ. ಕೇವಲ ನಂಬಿಕೆಗಷ್ಟೇ ಅಥವಾ ಬಾಹ್ಯಾಚರಣೆಗಷ್ಟೇ ಸೀಮಿತವಾದ ಧರ್ಮಸ್ವರೂಪವನ್ನಾಗಲೀ ಮತಸ್ವರೂಪವನ್ನಾಗಲೀ ಇದು ಹೊಂದಿಲ್ಲ. ಯಾವ ನಿರ್ಬಂಧಗಳಿಗೂ ಸೀಮಿತವಾಗದ ಹಿಂದೂ ಮನಸ್ಸು ವೈಚಾರಿಕತೆಗೆ ಪ್ರಾಶಸ್ತ್ಯ ಕೊಟ್ಟಿದೆ. ಉಪನಿಷತ್ತುಗಳ ಮೂಲಕಾಳಜಿಯೇ ಅನ್ವೇಷಣೆ ಮತ್ತು ದರ್ಶನ. ಇದಕ್ಕಾಗಿ ಉಪನಿಷತ್ಕಾರರು ಏನನ್ನೂ ತ್ಯಜಿಸಲು ಸಿದ್ಧರಿದ್ದರು. ಯಾರನ್ನೂ ಯಾವುದನ್ನೂ ಬಹಿಷ್ಕರಿಸದ ಹಿಂದೂ ಜೀವನಮಾರ್ಗಕ್ಕೆ ಮೊದಲಿಂದಲೂ ರೋಧ ವಿರೋಧ ಪ್ರತಿರೋಧಗಳಿವೆ. ಟೀಕೆಗಳಿವೆ, ನಿಂದನೆಗಳಿವೆ, ಕುಹಕಗಳಿವೆ. ಯಾವ ಜನ್ಮದಲ್ಲಿ ಹಿಂದೂಗಳು ಮಾಡಿದ ಕರ್ಮದ ಲೇಪವೋ ಏನೋ ಎಂದು ಹೇಳುತ್ತಾ ಕುಂಬ್ಳೆಯವರು ನತದೃಷ್ಟ ಹಿಂದೂ, ಬಂಧು ಎನ್ನುತ್ತಾರೆ. ನಮ್ಮ ಸಾತ್ವಿಕತನವೇ ನಮ್ಮನ್ನು ದುರ್ಬಲಗೊಳಿಸಿ ತ್ರಿಶಂಕು ಸ್ಥಿತಿಯಲ್ಲಿರಿಸಿದೆ. ಬಹುತ್ತ್ವವನ್ನು ಎಲ್ಲ ಮೂಲಗಳಿಂದಲೂ ಸ್ವೀಕರಿಸುತ್ತಾ ವಿಶ್ವದ ಅದ್ಭುತವೆಂಬಂತೆ ಬೆಳೆದ ದೇಶವಿದು.

ರಾಮಾಯಣ ಮಹಾಭಾರತಗಳು ನಮ್ಮ ಪೂರ್ವಜರು ಬದುಕಿನಲ್ಲಿ ಇಟ್ಟುಕೊಂಡ ಸಮಷ್ಟಿಯ ಚಿಂತನೆಯನ್ನು ಸಾರುತ್ತವೆ. ಆ ಕಾಲದ ನಗರಗಳು ಇಂದು ತೀರ್ಥಕ್ಷೇತ್ರಗಳಾಗಿ ಬಹುಸಂಖ್ಯಾತ ಭಾರತೀಯರಿಗೆ ಪೂಜನೀಯವಾಗಿ ಆರಾಧಿಸಲ್ಪಡುತ್ತಿವೆ. ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಆವಂತಿಕಾ| ಪುರೀ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾ|| ಈ ಸಪ್ತಪುರಿಗಳು ಭಾರತದ ಯಾವಜ್ಜೀವ ಪುನರುತ್ಥಾನದ ಅಸ್ಮಿತೆಯ ಜ್ವಲಂತ ಸಾಕ್ಷಿಗಳು. ದೇಗುಲಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳ ಜೀವಸೆಲೆಗಳು. ದೇಶದ ಚಾರಿತ್ರ್ಯದ ಹೆಗ್ಗುರುತುಗಳು. ಈ ನಗರಗಳು ದಶದಿಕ್ಕಿಗೂ ತಮ್ಮ ವೈಭವವನ್ನು ಬೆಳಗಿದೆ. ಕೇಡಿಗರ ಕಣ್ಣುಕೋರೈಸಿದೆ; ಹಿಂದೆಯೂ. ಈಗ್ಗೆಯೂ. ಮುಂದೆಯೂ ಕೂಡ. ಈಗ ಮತ್ತದೇ ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನಿಗಾಗಿ ಮಂದಿರವನ್ನು ಕಟ್ಟಬೇಕೆಂಬ ಯಾವತ್ಕಾಲದ ತುಡಿತ ಅಸಂಖ್ಯ ಹಿಂದೂಗಳಲ್ಲಿ ಹುಟ್ಟಿ ಬೆಳೆದು ಈಗ ಸಾಕಾರಗೊಳ್ಳುತ್ತಿದೆ. ಅಯೋಧ್ಯೆ ಭಾರತದ ಹೃದಯವೆನಿಸಿದ ತೀರ್ಥಕ್ಷೇತ್ರ. ಅಸಂಖ್ಯಾತ ಹಿಂದೂಗಳ ಆರಾಧನಾ ಸ್ಥಳ. ಜನ್ಮದಲ್ಲಿ ಒಮ್ಮೆಯಾದರೂ ಅಯೋಧ್ಯೆಯನ್ನಾಳಿದ ಶ್ರೀರಾಮಚಂದ್ರ ಪ್ರಭುವಿನ ಹೆಸರು ಹೇಳದ, ಕೇಳದ ಭಾರತೀಯನಿಲ್ಲ. ಹಿಂದೂಗಳ ಸಮಷ್ಟಿಯ ಬದುಕಿನ ಚಿಂತನೆಯಲ್ಲಿ ಶ್ರೀರಾಮನ ಜೀವನ ಮೌಲ್ಯಗಳಿವೆ. ಇಂಥ ಮಹಾನ್ ಮರ್ಯಾದಾ ಪುರುಷೋತ್ತಮನ ಮಂದಿರವನ್ನು ಹಾಳುಗೆಡವಿದ, ಮತ್ತೆ ಕಟ್ಟುವುದಕ್ಕೆ ಅಡ್ಡಿಪಡಿಸುವವರನ್ನೆಲ್ಲ ಪಕ್ಕಕ್ಕೆ ಸರಿಸಿ ಅತೀ ಶೀಘ್ರವೋ ಎಂಬಂತೆ ಭಾರತದ ಅಸ್ಮಿತೆಯಾದ ಶ್ರೀರಾಮಮಂದಿರವನ್ನು ಕಟ್ಟಬೇಕು ಎಂಬ ಹಿಂದೂ ಭಾವನೆಗಳಿಗೆ ಈಗ ಸಂಭ್ರಮವೋ ಸಂಭ್ರಮ. ರಾಮಮಂದಿರವನ್ನು ಏಕೆ ಕಟ್ಟಬೇಕು ಎನ್ನುವುದಕ್ಕೆ ಉತ್ತರವು ಏಕೆ ಕಟ್ಟಬಾರದೆಂಬುದರಲ್ಲೇ ಇದೆ. ಭಗವಾನ್ ನಂಥ ಎಡವಟ್ಟಿನ ಬುದ್ಧಿಯವರಿಗೆ ಚರಿತ್ರೆ, ಪುರಾಣದಲ್ಲಿ ನೇತ್ಯಾತ್ಮಕವಾದ ಅಂಶಗಳೇ ಕಣ್ಣಿಗೆ ರಾಚುತ್ತವೆ. ಹಳದಿ ರೋಗಪೀಡಿತರಿಗೆ ಹಳದಿಯಲ್ಲದೆ ಇನ್ನೇನು ಕಂಡೀತು? ಅದರಲ್ಲೂ ಭಗವಾನ್, ಮತ್ತು ಅವರಂಥವರ ಕಣ್ಣಿಗೆ ಹಿಂದೂಧರ್ಮದಲ್ಲಿ ಮಾತ್ರ ನ್ಯೂನತೆ, ಲೋಪಗಳು ರಾಚುತ್ತವೆ. ಉಳಿದ ಮತಧರ್ಮಗಳಲ್ಲಿ ಕಾಣಿಸುವುದಿಲ್ಲ. ಇದಕ್ಕೆ ಕಾರಣ, ಒಂದು: ಸೀಮಿತವಾದ ಅವರ ಅಧ್ಯಯನದ ವ್ಯಾಪ್ತಿ, ಇನ್ನೊಂದು, ಅನರ್ಥಪೂರ್ಣವಾದ, ಪೂರ್ವಗ್ರಹಪೀಡಿತ ಮನಸು. ಮತ್ತೊಂದು: ವಿಪುಲವಾದ ಸ್ವಾಧ್ಯಾಯದ ಕೊರತೆ. ರಾಮಮಂದಿರವೆಂದು ಹೇಳಿಕೊಂಡೇ ರಾಮನಿಗೆ ಮಂದಿರ ಏಕೆ ಬೇಡವೆನ್ನುವಷ್ಟು ಮೂರ್ಖತನದ ಪ್ರದರ್ಶಿಸುವ ಇವರ ಹೆಸರು ಕೂಡ ಭಗವಾನ್ ಅಂತಲೇ ಇರುವುದು ವಿಪರ್ಯಾಸ!. ರಾಮಮಂದಿರವನ್ನು ವಿರೋಧಿಸುವ ಮೊದಲು ಇವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕು. ರಾಮನನ್ನು ಭಗವಾನ್ ಎಂದೇ ಕರೆಯುವವರು ಹಿಂದೂಗಳು. ಒಬ್ಬ ಹಿಂದೂವಾಗಿ, ಭಗವಾನ್ ಎಂದು ಹೆಸರಿಟ್ಟುಕೊಂಡ ಇವರಿಗೆ ಶ್ರೀರಾಮನೇ ಸದ್ಭುದ್ಧಿಯನ್ನು ಕೊಟ್ಟು ಕಾಪಾಡಬೇಕಿದೆ. ನಾರಾಯಣನು ನರನಾಗಿ ಬಂದು ನಾರಾಯಣತ್ವದ ಪದವಿಗೇರಿದ ಶ್ರೀರಾಮಚಂದ್ರನೆಂದರೆ ಕೇವಲ ವ್ಯಕ್ತಿಯಲ್ಲ. ಅವರಿವರೆನ್ನದೆ ಶ್ರೀರಾಮ ಜನರ ಸಂಕಷ್ಟಗಳಿಗೊಲಿದವ. ರಾಮಾಯಣದಲ್ಲಿನ ಅನೇಕ ದುರಂತಗಳಿಗೆ ಮಂಗಳ ಹಾಡಿದ ಮಂಗಳಮೂರ್ತಿಯಾದ ಪ್ರಭು ಶ್ರೀರಾಮಚಂದ್ರನನ್ನು ಅವಾಚ್ಯವಾಗಿ ನಿಂದಿಸುವುದು, ಸಂಬೋಧಿಸುವುದು ವಿದ್ಯಾವಂತರೆನಿಸಿಕೊಂಡವರ ಮೇರೆಮೀರಿದ ಅನಾಗರಿಕತೆಯೇ ಸೈ! ಬುದ್ಧಿಭ್ರಮಣೆಯೇ ದಿಟ!

ಈ ಪುಣ್ಯಭೂಮಿಯನ್ನು ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸೀ’ ಎಂದವನಿಗೆ ಈ ನೆಲದಲ್ಲಿ ಮಂದಿರವನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಮಹತ್ತಾದ ಅಳುಕಿತ್ತು. ಹಿಂದೆ ಇದ್ದ ರಾಮಮಂದಿರದ ಸಲುವಾಗಿಯೇ ಈವರೆಗೆ ಎಪ್ಪತ್ತಾರು ಬಾರಿ ಆಕ್ರಮಣಗಳಾಗಿವೆ. ಬಾಬರ್, ಹುಮಾಯೂನ್‌, ಅಕ್ಬರ್, ಔರಂಗಜೇಬ್, ಷಹದತ್ ಅಲಿ ಆಕ್ರಮಣ ಮಾಡಿದ ಮುಸ್ಲಿಂ ದೊರೆಗಳು. ಮೂರು ಲಕ್ಷಕ್ಕೂ ಅಧಿಕಸಂಖ್ಯೆಯಲ್ಲಿ ಹಿಂದೂಗಳು ಮಂದಿರದ ಉಳಿವಿಗಾಗಿ ಸೆಣೆಸಿದ್ದಾರೆ. ಮೊನ್ನೆಮೊನ್ನೆಯವರೆಗೂ ಅಸಂಖ್ಯ ಹಿಂದೂಗಳು ಸೆಣೆಸುತ್ತಲೇ ಇದ್ದರು. ಮುಸ್ಲಿಂ ದೊರೆಗಳ ಅಮಾನುಷ ವರ್ತನೆಯ ವಿರುದ್ಧ ಸಿಡಿದೆದ್ದ ರಾಜಾ ರಣವಿಜಯ್ ಸಿಂಗ್, ಮೆಹತಾಬ್ ಸಿಂಗ್, ಸಂಗ್ರಾಮ ಸಿಂಗ್ ಪ್ರಾಣತೆರಬೇಕಾದ ದುಃಸ್ಥಿತಿಯೊದಗಿ ಬಂದದ್ದು ಚರಿತ್ರೆಯಲ್ಲಿದೆ. ೧೫೨೬ ರಲ್ಲಿ ಬಾಬರ್ ಇದರ ಮೇಲೆ ಆಕ್ರಮಣ ಮಾಡಿ ಎಪ್ಪತ್ತು ಸಾವಿರ ಹಿಂದೂಗಳ ಮಾರಣಹೋಮ ನಡೆಸಿದ. ಅಂತೂ ಮಂದಿರವನ್ನು ಕೆಡವಿ ಹಿಂದೂಗಳ ರಕ್ತದಲ್ಲಿ ಮಸೀದಿಗೆ ಅಡಿಪಾಯ ಹಾಕಿಸಿಯೇ ಬಿಟ್ಟ ಎಂದು ಹೆನಸಿಲಿಯರ್ ಹೇಳುತ್ತಾನೆ. ಮುಸ್ಲಿಂ ದೊರೆಗಳು ಮಂದಿರವನ್ನಷ್ಟೇ ಕೆಡವದೆ ಸಮಗ್ರ ಹಿಂದೂ ಸಂಸ್ಕೃತಿಯ ಮೇಲೆ ಗದಾಪ್ರಹಾರ ಮಾಡಿದರು. ಯಾರು ಏನೇ ಮಾಡಿದರೂ ಶತಸಹಸ್ರ ವರ್ಷಗಳಿಂದ ಹಿಂದೂ ಸಂಸ್ಕೃತಿ ಜೀವಂತವಾಗುಳಿದಿದೆ. ಹಾಳುಗೆಡವಿದವರು ಹಾಳಾಗಿಹೋದರು. ಹಿಂದೂಗಳ ಆತ್ಮಶಕ್ತಿ ಅವರನ್ನು ನಿರ್ನಾಮಗೊಳಿಸಿಬಿಟ್ಟಿತು. ಆದರೆ, ರಾಮಮಂದಿರದ ಕನಸು ಅದಮ್ಯವಾಗೇ ಉಳಿದಿತ್ತು. ಈಗ ಸಾಕಾರಗೊಳ್ಳುತ್ತಿದೆ. ಆ ಮುಹೂರ್ತದ ಕ್ಷಣಕ್ಕಾಗಿ ದೇಶವಿದೇಶದ ಹಿಂದೂಗಳು ಕಾಯುತ್ತಿದ್ದಾರೆ. ಅಯೋಧ್ಯೆ ವಿಶ್ವದ ಆಕರ್ಷಣೆಯಾಗಿ ಬದಲಾಗಿದೆ.

ಹಿಂದೂ ಬಹುಸಂಖ್ಯಾತರು ಕೋಮುವಾದಿಗಳಾದರೆ ಹಿಂದೂ ಧರ್ಮವು ಇತರ ಸೆಮೆಟಿಕ್ ಧರ್ಮಗಳಿಗಿಂತ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆಯಿದೆ- ಎಂದು ಅಲ್ಪಸಂಖ್ಯಾತರನ್ನು ತುಷ್ಟೀಕರಣದ ಮೂಲಕ, ಅವರಿಗೆ ಪ್ರತ್ಯೇಕವಾದ ಸೌಲಭ್ಯಗಲನ್ನು ಸೌಕರ್ಯಗಳನ್ನು ಸವಲತ್ತುಗಳನ್ನು ಶಾಸನರೀತ್ಯಾ ನೀಡುತ್ತಾ ನೆಹರೂ ಉದಾರವಾದೀ ಸೆಕ್ಯುಲರಿಸಂ ನೀತಿಯನ್ನು ಅನುಸರಿಸಿದರು. ಇಂದಿರಾಗಾಂಧಿಯಾದಿಯಾಗಿ ಮನಮೋಹನ ಸಿಂಗರವರೆಗೆ ಇದು ನಡೆಯಿತು. ಇದನ್ನೇ ಅಲ್ಪಸಂಖ್ಯಾತರು ಎನ್ನಿಸಿಕೊಂಡವರು ಹೇಗೆ ದುರುಪಯೋಗ ಮಾಡಿಕೊಂಡರೆಂಬುದನ್ನು ಸ್ವಾತಂತ್ರ್ಯಾನಂತರದಲ್ಲಿ ನೋಡುತ್ತ ಬಂದಿದ್ದೇವೆ. ಬಾಬರಿ ಮಸೀದಿಯನ್ನು ಕಟ್ಟಿರುವ ಈಗಿನ ಜಾಗ ಮುಸ್ಲಿಂಮರ ಪ್ರಾರ್ಥನಾ ಸ್ಥಳವೇನಲ್ಲ. ಅವರು ಮೊದಲಿನಿಂದಲೂ ದೇವರನ್ನು ಆರಾಧಿಸಿಕೊಂಡು ಬಂದ ಐತಿಹ್ಯಗಳು ಅಲ್ಲಿಲ್ಲ. ಆದರೆ, ಬಹುಸಂಖ್ಯಾತ ಹಿಂದೂಗಳ ತೀರ್ಥಕ್ಷೇತ್ರವೂ, ಆರಾಧನಾ ಮೂರ್ತಿಯೂ ಇದ್ದ ಆ ಸ್ಥಳಕ್ಕಾಗಿ ಬಹುಸಂಖ್ಯಾತ ಹಿಂದೂಗಳು ಮುಸ್ಲಿಮರಂತೆ ಯಾವತ್ತೂ ಅಪಾಯಕಾರಿಯಾಗಿ ವರ್ತಿಸಿಲ್ಲ. ನೆಹರೂ ಅಂದುಕೊಂಡಂತೆ ಬಹುಸಂಖ್ಯಾತ ಹಿಂದೂಗಳು ಅಪಾಯಕಾರಿಯಾಗುವ ಸಾಧ್ಯತೆಯಿದ್ದಿದ್ದೇ ಆದರೆ ನೆಹರೂ ಕಾಲದಲ್ಲೇ ನೆಹರೂ ಹೇಳಿದ ಅಪಾಯ ಆಗಬಹುದಾದ ಎಲ್ಲ ಲಕ್ಷಣಗಳಿದ್ದವು. ಯಾರು ಅಪಾಯಕಾರಿಯಾಗಬಹುದೆಂದು ನೆಹರೂ ಅಂದುಕೊಂಡಿದ್ದರೋ ಅವರನ್ನು ಮೊದಲು ನೆಹರೂ ಸಂತಯಿಸಬೇಕಾಗಿತ್ತು.ತುಷ್ಟೀಕರಿಸಬೇಕಿತ್ತು ನೆಹರು ಹಾಗೆ ಮಾಡಲಿಲ್ಲ. ಇದು ನೆಹರೂವಿನ ಅಪ್ರಬುದ್ಧದ, ಅಮುತ್ಸದ್ದಿತನದ, ಮುಸ್ಲಿಂ ತುಷ್ಟೀಕರಣದ ರಾಜಕೀಯಕ್ಕೆ ಸಾಕ್ಷಿಯಾಗಿ ಉಳಿಯಿತು. ಇದರಿಂದಾಗಿ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತವೆಂದು ಭಾರತೀಯರನ್ನೇ ವರ್ಗೀಕರಿಸಿ ಪರಮ ಮೂರ್ಖತನವನ್ನು ನೆಹರೂ ಮೆರೆದರು. ಕಾಂಗ್ರೆಸ್ಸು ಇನ್ನುಳಿದ ಎಡಪಕ್ಷಗಳು ಅದನ್ನೇ ಮುಂದೂವರೆಸಿದವು. ಒಟ್ಟಂದದ ಸೌಹಾರ್ದತೆ ಸತ್ತುಹೋದದ್ದು ಹೀಗೆ! ಸೆಮೆಟಿಕ್ ಧರ್ಮಗಳ ಮೂಲಭೂತವಾದವೇ ಕಾಲಗತಿಯ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಹಿಂದೂ ಮೂಲಭೂತವಾದಕ್ಕೆ ಪ್ರಚೋದನೆ ನೀಡುತ್ತ ಸನಾತನ ಧರ್ಮದ ಔದಾರ್ಯದ ಬೇರುಗಳು ಪ್ರಧಾನವಾಹಿನಿಯಿಂದ ಬೇರ್ಪಡುವಂತೆ ಮಾಡಲೆತ್ನಿಸಿದವು. ಆದರೆ ಗುಪ್ತಗಾಮಿನಿಯೊಂದು ಹರಿದೇ ಇತ್ತು.

ಸ್ವಾತಂತ್ರ್ಯಪೂರ್ವ ಮತ್ತು ಆನಂತರದಲ್ಲೂ ರಾಮಮಂದಿರದ ವಿಚಾರವಾಗಿ ಸರ್ಕಾರಗಳು ತುಷ್ಟೀಕರಣದ ನೀತಿಯನ್ನು ಅನುಸರಿಸುತ್ತ ಕಾಲಹರಣ ಮಾಡುತ್ತಲೇ ಬಂತು. ಆದರೂ ಮಂದಿರ ನಿರ್ಮಾಣದ ಬೇಡಿಕೆಯನ್ನು ಹಿಂದೂ ಸಂಘಟನೆಗಳು ಆಗ್ರಹಿಸುತ್ತಲೇ ಬಂದವು.

ಪಿ.ವಿ.ನರಸಿಂಹರಾಯರ ಕಾಲದಲ್ಲಿ ಬಾಬರ ಕಟ್ಟಿಸಿದ್ದ ಅಂತ ಉಲ್ಲೇಖಿಸಲಾದ ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಅದೊಂದು ಬೃಹತ್ ವಿವಾದವಾಗಿ ಅಲ್ಲಿಂದೀಚಿಗೆ ಕೋರ್ಟುಕಚೇರಿಗಳ ಸುತ್ತಾಟವೇ ನಡೆಯಿತು ಬಿಟ್ಟರೆ ರಾಮಮಂದಿರ ನಿರ್ಮಾಣದ ಕನಸು ಚಿಗುರೊಡೆಯಲು ಸಾಧ್ಯವಾಗಲೇ ಇಲ್ಲ. ರಾಮಮಂದಿರ ನಿರ್ಮಾಣದ ಬಗ್ಗೆ ನೆಹರೂದಿಂದ ಹಿಡಿದು ಮೋದಿ ಅಧಿಕಾರದವರೆಗೂ ಕೇಂದ್ರದ ಆಡಳಿತನೀತಿ ಒಲವು ತೋರಲೇ ಇಲ್ಲ. (ವಾಜಪೇಯಿ ಸರ್ಕಾರದಲ್ಲಿ ಅಷ್ಟಿಷ್ಟು ಒಲವು ಇದ್ದರೂ ಕನಸು ಕನಸಾಗೇ ಉಳಿಯಿತು) ರಾಜಕೀಯ ಪ್ರೇರಣೆಯಿಂದಾಗಿ, ಓಟಿಗಳಿಕೆಗಾಗಿ ಅದು ಅವರಿಗೆ ಬೇಕಾಗಿಯೂ ಇರಲಿಲ್ಲವಾಗಿತ್ತು. ವಿಶ್ವ ಹಿಂದೂ ಪರಿಷತ್ತು ರಾಮಲಲ್ಲ ಟ್ರಸ್ಟ್, ಸಮಸ್ತ ಹಿಂದೂ  ರಾಮಮಂದಿರಕ್ಕಾಗಿ ಹಂಬಲಿಸುತ್ತ ಹಿಂದೂ ಧರ್ಮಸಂಸತ್ತನ್ನು, ನ್ಯಾಯಾಲಯದಲ್ಲಿ ಹೋರಾಟವನ್ನು ಆಯೋಜಿಸುತ್ತಲೇ ಬಂತು. ಅದೇ ಹಂಬಲವೀಗ ತುರಿಯಾವಸ್ಥೆಯನ್ನು ತಲುಪಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದು, ಅಪ್ಪಟ ಹಿಂದೂವೊಬ್ಬ ದೇಶದ ಪ್ರಧಾನಿ ಸ್ಥಾನದಲ್ಲಿದ್ದಾಗಲೇ ಮಂದಿರವೂ ಮಂದಿರ ನಿರ್ಮಾಣವಾಗಿ ಸೂಕ್ತಕಾಲದಲ್ಲಿ ಇವತ್ತು ಲೋಕಾರ್ಪಣೆಗೊಳ್ಳಲಿದೆ. ೫೦೦ ವರ್ಷಗಳ ಕನಸು ನನಸಾಗುತ್ತಿದೆ.. ಇದು ಕೇವಲ ಮತ-ಧರ್ಮಗಳ ಸಂಘರ್ಷದ ಮಾತಲ್ಲ. ರಾಜಕೀಯ ಇದರಲ್ಲಿ ಸಲ್ಲ. ರಾಮಮಂದಿರವಿದ್ದ ಸ್ಥಳವೆಂಬುದು ಉತ್ಖನನದ ಮೂಲಕ ರುಜುವಾಗಿದೆ. ಸುಪ್ರೀಂಕೋರ್ಟು ಇದನ್ನೊಪ್ಪಿದೆ. ನೆಹರೂ ವಿರೋಧವಿದ್ದರೂ ಸೋಮನಾಥ ದೇವಾಲಯದ ಮರುನಿರ್ಮಾಣ ಮಾಡಿದವರು ಸರ್ದಾರ್ ಪಟೇಲರು. ಅದೇ ಪಟೇಲರ ನೆಲದಿಂದ ಬಂದ ಮೋದಿಯವರು ಈಗ ಮಂದಿರ ನಿರ್ಮಾಣಕ್ಕೂ ಅಡಿಪಾಯವಿಟ್ಟು ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠೆಯನ್ನೂ ಮಾಡಿ ಮತ್ತೆ ಅಯೋಧ್ಯೆಯ ಗತವೈಭವವನ್ನು ಸೃಷ್ಟಿಸುತ್ತಿದ್ದಾರೆ. ಇಂದಿನ ದಿನ ಭಾರತದ ಸ್ವಾತಂತ್ರ್ಯೋತ್ತರ ಚರಿತ್ರೆಯ ಪುಟದಲ್ಲಿ ಸುವರ್ಣಾಕ್ಷರದಿಂದ ಹೆಗ್ಗುರುತಾಗಿದ್ದಷ್ಟೇ ಅಲ್ಲದೆ ಈ ದಿನವನ್ನು ಪ್ರತಿವರ್ಷ ಮತ್ತೆಮತ್ತೆ ಆಚರಿಸಿ ಸಂಭ್ರಮಿಸಬೇಕಾದ ದಿನವಾಗಿಬಿಟ್ಟಿತು ಹಿಂದೂಗಳ ಪಾಲಿಗೆ! ಹಿಂದೂಗಳು ನತದೃಷ್ಟರಲ್ಲವೆಂಬುದನ್ನು ಮೋದಿ ಸಾಬೀತು ಮಾಡಿದರು.

ಟಿ. ದೇವಿದಾಸ್

 
Previous articleಪುತ್ತಿಗೆ ಪರ್ಯಾಯೋತ್ಸವ: ದಾಖಲೆ ಪ್ರಮಾಣದಲ್ಲಿ ಹೊರೆಕಾಣಿಕೆ ಸಲ್ಲಿಕೆ
Next articleಪೇಜಾವರ ಮಠದ ಗೋಶಾಲೆಯಲ್ಲಿ ಶ್ರೀರಾಮ ಜನನ !!!