ಮುಖದಲ್ಲಿ ಮಾಸದ ಮಂದಹಾಸ, ಸದಾ ವಿಶ್ವದ ಔನತ್ಯಕ್ಕೆ ತುಡಿಯುವ ಮನಸ್ಸು, ಪಶುಗಳಿರಲಿ ಪಕ್ಷಿಗಳಿರಲಿ ಕೊನೆಗೆ ದೇವ ಸೃಷ್ಟಿಯ ವಿಷಸರ್ಪವೇ ಆಗಿರಲಿ ಎಲ್ಲವನ್ನು ಕರುಣೆಯಿಂದ ನೋಡುವ ಕರುಣಾಳು. ಎಲ್ಲಿ ಮಾರ್ದವತೆಯೊ ಅಲ್ಲಿ ಮೃದುಸ್ವಭಾವ. ಎಲ್ಲಿ ಕಾಠಿಣ್ಯವೋ ಅಲ್ಲಿ ನಿಷ್ಠುರ ಭಾವ. ಇದೆಲ್ಲದರ ಸಮಾಗಮವೇ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥರು. ವಿಶ್ವಪ್ರಸನ್ನರ ಹೆಸರು ಕೇಳಿದ ಕೂಡಲೇ ತಟ್ಟನೇ ನೆನಪಾಗುವುದು ಗೋಶಾಲೆ, ನಾನಾ ಪಶುಪಕ್ಷಿಗಳನ್ನು ಉಪಚರಿಸಿದ ಅವರ ಕಾರುಣ್ಯಮುಖ. ಆದರೆ ಅವರು ಇದರ ಜೊತೆಯಲ್ಲಿಯೇ ಬಹುಕಠಿಣವಾದ ಸನ್ಯಾಸಾಶ್ರಮವನ್ನು ಕೂಡ ಚಾಚೂ ತಪ್ಪದೇ ಪಾಲಿಸುತ್ತಿರುವ ಕಲಿಯುಗದ ಸಂತರು.
ಕಠೋರ ಸನ್ಯಾಸಾಶ್ರಮ- ಸನ್ಯಾಸಿಗಳೆಂದರೆ ವಿಲಾಸಜೀವನವನ್ನು ತ್ಯಾಗ ಮಾಡಿ ನಿಷ್ಕಾಮನೆಯಿಂದ ಪ್ರತಿಯೊಂದು ಕಾರ್ಯಗಳನ್ನು ಮಾಡುವ ಆಶ್ರಮ. ಕೆಲವರಲ್ಲಿ ಒಂದು ಭ್ರಮೆಯಿದೆ. ಸನ್ಯಾಸಾಶ್ರಮವೆಂದರೆ ಸಕಲವನ್ನು ತ್ಯಾಗ ಮಾಡಿ ಯಾವುದೇ ಕರ್ಮದ ನಂಟಿಲ್ಲದೆ ಸಮಾಜದಿಂದ ವಿಮುಖರಾಗಿ ಇರುವುದು ಎಂದು. ಆದರೆ ಅದನ್ನು ಸುಳ್ಳು ಮಾಡಿ ಸನ್ಯಾಸಿಗಳು ಹೇಗೆ ಸಮಾಜದ ಒಳಗೆ ಇದ್ದು ಸಮಾಜದ ಯಾವುದೇ ನಂಟನ್ನು ಅಂಟಿಸಿಕೊಳ್ಳದೆ ಮೀನು ನೀರನ್ನು ಶುದ್ಧ ಮಾಡುವಂತೆ ತಾವು ಸಮಾಜವನ್ನು ಶುದ್ಧಗೊಳಿಸಬೇಕು ಎಂದು ತೋರಿಸಿಕೊಟ್ಟವರು ಗುರು ಶ್ರೀವಿಶ್ವೇಶತೀರ್ಥರು.
ಅವರ ಮಾರ್ಗವನ್ನು ಚಾಚೂತಪ್ಪದೆ ಜೊತೆಯಲ್ಲಿ ಸನ್ಯಾಸಾಶ್ರಮದ ನಿಯಮಗಳನ್ನು ಮೀರದೆ. ಸಮಾಜವನ್ನು ಶುದ್ಧಗೊಳಿಸುತ್ತಾ ಶುದ್ಧಪಾರಿವ್ರಾಜಕ ಧರ್ಮವನ್ನು ಆಚರಿಸುತ್ತಿರುವವರು. ಇವರ ಕಠೋರ ಸನ್ಯಾಸ ನಿಯಮಗಳನ್ನು ಹತ್ತಿರದಿಂದ ನೋಡಿದವರು ಚಕಿತಗೊಳ್ಳುವುದು ನಿಶ್ಚಯ. ಬೆಳಿಗ್ಗೆ 4.00 ರಿಂದ ಆರಂಭವಾಗುವ ಇವರ ದಿನಚರಿ ಬಿಡುವಿಲ್ಲದ ಕಾರ್ಯಕ್ರಮಗಳೊಂದಿಗೆ ರಾತ್ರಿ -12.00 ರ ಸಮಯಕ್ಕೆ ಮುಗಿಯುತ್ತದೆ. ಇದರಲ್ಲಿ ದಿನ-ನಿತ್ಯದ ಜಪಪೂಜೆ-ಪಾಠ-ಪ್ರವಚನ-ಸಂದರ್ಶನ ಬೇರೆ ಬೇರೆ ಕಡೆಗಳ ಕಾರ್ಯಕ್ರಮ ಎಲ್ಲವೂ ಸೇರಿರುತ್ತದೆ. ಎಷ್ಟೇ ಕಾರ್ಯಕ್ರಮದ ಒತ್ತಡವಿರಲಿ ಸಮಚಿತ್ತಭಾವವನ್ನು ಕಳೆದುಕೊಳ್ಳದ ಸನಾತನ ಯೋಗಿ. ಇಂದಿನ ಸಮಸ್ತ ಸನ್ಯಾಸ ತಾರೆಗಳ ಮಧ್ಯೆ ಚಂದ್ರನಂತೆ ಕಂಗೊಳಿಸುತ್ತಿದ್ದಾರೆ.
ವೌನ ಸಾಧಕ 24ನೆಯ ಹರಯದಲ್ಲಿ ಎಲ್ಲ ವಿಷಯ ಸುಖಗಳ ಆಸೆಯನ್ನು ಬದಿಗೆ ಸರಿಸಿ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು. ಅಂದಿನಿಂದ ಕೃಷ್ಣನ ಸೇವೆ ಗುರುಸೇವೆ ಮುಖ್ಯವಾಗಿ ಗೋಸೇವೆ ತನ್ನ ಉಸಿರನ್ನಾಗಿಸಿಕೊಂಡರು. ಗುರು ವಿಶ್ವೇಶತೀರ್ಥರು ಭಾರತಾದ್ಯಂತ ಸಂಚರಿಸುತ್ತಾ ದೀನ ದಲಿತರ ಒಳಿತನ್ನು ಬಯಸುತ್ತಾ ಅನೇಕ ಕಡೆ ತಮ್ಮ ಸಂಸ್ಥೆಗಳನ್ನು ಸ್ಥಾಪಿಸಿದರು.
ಆ ಸಂದರ್ಭದಲ್ಲಿ ಗುರುಗಳು ಪ್ರತಿಯೊಂದು ಕಾರ್ಯಗಳಿಗೂ ಹೆಗಲುಕೊಟ್ಟು ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಎಲೆ ಮರೆಯ ಕಾಯಿಯಂತೆ ಗುರುಸೇವೆಯನ್ನು ಮಾಡಿದರು. ಆಶ್ರಮ ಸ್ವೀಕಾರದ ನಂತರ 33 ವರ್ಷ ಯಾವುದೇ ಅಕಾರದ ಆಸೆಯಿಲ್ಲದೆ ವೌನವಾಗಿ ಗುರುಗಳ ಮಾತನ್ನು ಪಾಲಿಸುತ್ತಿದ್ದರು. 2 ವರ್ಷ ಪಂಚಮ ಪರ್ಯಾಯದ ಅವಧಿಯಲ್ಲಿ ಗುರುಗಳನ್ನು ಸರ್ವಜ್ಞಪೀಠದಲ್ಲಿ ಕೂರಿಸಿ ಅವರಿಗೆ ಯಾವುದೇ ಆಯಾಸವೂ ಆಗದ ರೀತಿಯಲ್ಲಿ ತಾವೇ ಎಲ್ಲಾ ಜವಾಬ್ದಾರಿಯನ್ನು ಹೊತ್ತು ಶ್ರೀಕೃಷ್ಣ ಮತ್ತು ಶ್ರೀಮುಖ್ಯಪ್ರಾಣನ ವಿಶೇಷ ಸೇವೆಯನ್ನು ಮಾಡಿದರು.
ಸ್ವತಃ ಗುರುಗಳೇ ಸ್ವಂತ ಮಗನೂ ಕೂಡ ತನ್ನ ತಂದೆ-ತಾಯಿಯರಿಗೆ ಈ ರೀತಿಯಾಗಿ ಸೇವೆ ಮಾಡಲಾರ. ಆ ರೀತಿಯಾಗಿ ನನ್ನ ಶಿಷ್ಯ ನನ್ನ ಸೇವೆಯನ್ನು ಮಾಡಿದ್ದಾರೆ’ ಎಂದು ಮನದುಂಬಿ ಕೊಂಡಾಡಿದರು. ಒಬ್ಬ ವ್ಯಕ್ತಿ ತನ್ನ ಕಣ್ಣೆದುರು ಬಹುದೊಡ್ಡ ಸಾಮ್ರಾಜ್ಯವಿದ್ದಾಗಲೂ ಅದರ ಬಗ್ಗೆ ಯಾವುದೇ ಆಸೆ ಬೆಳಸದೆ ವೌನವಾಗಿ 33ವರ್ಷ ಗುರುಸೇವೆಯನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ. ಇಂತಹ ಬಹು ದೊಡ್ಡ ವೌನಕ್ರಾಂತಿಯನ್ನೇ ಶ್ರೀಗಳವರು ಮಾಡಿದ್ದರು. ನಾನಾಜನಸ್ಯ ಶುಶ್ರೂಷಾ ಗುರು ವಿಶ್ವೇಶತೀರ್ಥರು ದೀನ-ದಲಿತರಲ್ಲಿ ಭಗವಂತನನ್ನು ಕಂಡು ಅವರ ಉದ್ಧಾರವೇ ಭಗವಂತನ ಪೂಜೆ ಎಂದು ತಿಳಿದಿದ್ದರೆ ವಿಶ್ವಪ್ರಸನ್ನರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಗವಂನತನ ಸೃಷ್ಟಿಯ ಎಲ್ಲ ಪ್ರಾಣಿಗಳು ಕರುಣೆಗೆ ಆರ್ಹರು ಎಂದು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ದೃಷ್ಟಾಂತವೇ ನೀಲಾವರದ ಗೋಶಾಲೆ. ಸಾವಿರಾರು ಕಸಾಯಿಕಾನೆಗೆ ಹೋಗಬೇಕಾದ ಹಸುಗಳನ್ನು ಸಂರಕ್ಷಿಸಿ ಯಾವುದೇ ಪ್ರತಿಲದ ಅಪೇಕ್ಷೆಯಿಲ್ಲದೆ. ಗೋಸಂರಕ್ಷಣೆಯನ್ನು ಮಾಡುತ್ತಿದ್ದಾರೆ.
ಅವರು ಪಕ್ಷಿಗಳ ಮೇಲೆ ಇತರ ಜಂತುಗಳ ಮೇಲೆ ತೋರಿಸುತ್ತಿದ್ದ ಕಾರುಣ್ಯ ನಾವೆಲ್ಲಾ ಸಾಮಾಜಿಕ ಜಾಲತಾಣದ ಮುಖಾಂತರ ನೋಡಿದ್ದೇವೆ. ಶ್ರೀಗಳವರ ಪ್ರತಿಭೆ ಅಪಾರವಾದದ್ದು, ಬಾಲ್ಯದಿಂದಲೂ ಯೋಗಾಭ್ಯಾಸದಲ್ಲಿ ಅಪಾರ ಆಸಕ್ತಿಯನ್ನು ಹೊಂದಿ ಇಂದಿಗೂ 20ರ ಹರಯದವರಿಂದಲೂ ಮಾಡಲು ಅವಶಕ್ಯವಾದ ಯೋಗಾಸನಗಳನ್ನು ನಿರಾಯಾಸವಾಗಿ ಮಾಡುತ್ತಾರೆ. ಇವರ ಅಪಾರವಾದ ಉತ್ಸಾಹ ಚಟುವಟಿಕೆ ಇವುಗಳೆಲ್ಲದ್ದಕ್ಕೂ ಕಲಶಪ್ರಾಯದಂತೆ ಇವರು ರಾಮಮಂದಿರದ ವಿಶ್ವಸ್ಥ ಮಂಡಲಿಯಲ್ಲಿ ಒಬ್ಬರಾಗಿದ್ದಾರೆ. ಅರವತ್ತನೆಯ ಈ ಸಂವತ್ಸರದ ಸಂದರ್ಭದಲ್ಲಿ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಯ ಪ್ರಾಣಪ್ರತಿಷ್ಠೆ ಯನ್ನು ಮಾಡುವ ಮುಖಾಂತರ 48 ದಿನಗಳ ಪರ್ಯಂತ ಅಯೋಧ್ಯೆಯಲ್ಲಿಯೇ ನೆಲೆಸಿ ಪ್ರತಿನಿತ್ಯ ಕಲಶಾಭಿಷೇಕ ನಡೆಸುವವರಿದ್ದಾರೆ.
ತಾವು ಗುರುಗಳಂತೆ ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಸುಧಾಪಾಠವನ್ನು ನಡೆಸಿ ದೊಡ್ಡ ದೊಡ್ಡ ವಿದ್ವತ್‌ಪಡೆಯನ್ನು ಸಿದ್ಧಪಡಿಸುತ್ತಿದ್ದಾರೆ. ಅಲ್ಲದೆ ಅಯೋಧ್ಯೆಯಲ್ಲಿಯೇ ಸುಧಾಮಂಗಳವನ್ನು ನಡೆಸುವವರಿದ್ದಾರೆ. ಅಂತೆಯೇ ತಮ್ಮ ಅರವತ್ತನೆಯ ವರ್ಷದ ಸಮಾರೋಪವನ್ನು ಅಯೋಧ್ಯೆಯಲ್ಲಿಯೆ ನಡೆಸುವವರಿದ್ದಾರೆ. ಹೀಗೆ ಗುರು ವಿಶ್ವೇಶತೀರ್ಥರ ಅಚ್ಚು-ಮೆಚ್ಚಿನ ಶಿಷ್ಯರಾಗಿ ಅವರ ಬಹುದೊಡ್ಡ ಸಂಸ್ಥಾನವನ್ನು ಸಮರ್ಥವಾಗಿ ಮುನ್ನಡೆಸುತ್ತಾ ಸಮರ್ಥ ಉತ್ತರಾಕಾಧಿರಿಯಾಗಿ ಸಮಾಜಕ್ಕೆ ಉತ್ತರದಾಯಿಗಳಾಗಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ಶಿಷ್ಯರು ಹಾಗೂ ಭಕ್ತಕೋಟಿಯರು ತಮ್ಮ ಭಕ್ತಿಪ್ರಣಾಮವನ್ನು 60ನೆವರ್ಷದ ಸವಿನೆನೆಪಿನ ಕಾರ್ಯಕ್ರಮದ ಮುಖಾಂತರ ಸಮರ್ಪಿಸುತ್ತಿದ್ದಾರೆ.
ಲೇಖಕರು: ಡಾ॥ ಶ್ರೀಕಾಂತಬಾಯರಿ
