Home ಅಂಕಣ ಶ್ರೀ ಕೃಷ್ಣಾವತಾರ: ಮುಕ್ತಪ್ರಜ್ಞೆಯ ಅನಾವರಣ

ಶ್ರೀ ಕೃಷ್ಣಾವತಾರ: ಮುಕ್ತಪ್ರಜ್ಞೆಯ ಅನಾವರಣ

ಭಾರತದ ಸಾಂಸ್ಕೃತಿಕ ಕಥಾ ಪ್ರಪಂಚ ಹಾಗೂ ಪುರಾಣಗಳಲ್ಲಿ ಅಧಿಕವಾಗಿ ಕಾಡಿದ, ಕಾಡುತ್ತಿರುವ ಪಾತ್ರವೆಂದರೆ ಶ್ರೀಕೃಷ್ಣ. ಮನುಷ್ಯ ಸಹಜ ಶಕ್ತಿಯನ್ನು ಮೀರಿದ ಅತಿಮಾನುಷ ಶಕ್ತಿಯೇ ಶ್ರೀಕೃಷ್ಣ. ಅವಜಾನಂತಿ ಮಾಂ ಮೂಢಾಃ ಮಾನುಷೀಂ ತನುಮಾಶ್ರಿತಂ- ಇದು ಕೃಷ್ಣನದೇ ಮಾತು. ಮನುಷ್ಯ ರೂಪದಲ್ಲಿ ನಾನು ಕಾಣಿಸುತ್ತಿರುವುದರಿಂದ ನನ್ನನ್ನು ಮನುಷ್ಯ ಮಾತ್ರನೆಂದು ತಿಳಿದವರು ಮೂಢರು-ಬುದ್ಧಿಗೇಡಿಗಳು. ವಿಷ್ಣುವಿನ ಅವತಾರವೆನ್ನುವ ಕೃಷ್ಣನ ಜನ್ಮ ಹಿನ್ನೆಲೆಯಲ್ಲಿ ಎದ್ದು ಕಾಣುವುದು ಧರ್ಮಸಂಸ್ಥಾಪನೆಯ ಮೂರ್ತಪ್ರಜ್ಞೆ. ಲೋಕೋದ್ಧಾರ, ಲೋಕಕ್ಷೇಮ, ಲೋಕ ಸಂರಕ್ಷಣೆ- ಈ ಬಗೆಯ ಅವತಾರಗಳ ಉದ್ದೇಶವಾಗಿರುತ್ತದೆ. ಆದ್ದರಿಂದ ಅವತಾರಗಳು ಮನುಷ್ಯ ಜನಾಂಗದ ಪ್ರಜ್ಞಾವಿಕಾಸದ ಕಥನಗಳು. ಏರುದಾರಿಯ ವಿಕಾಸದ ಪಥಗಳು. ಅವತಾರಗಳಲ್ಲಿ ಪೂರ್ಣಪ್ರಮಾಣದ ಮಾನುಷಾವತಾರವೆಂದರೆ ಪರಶುರಾಮಾವತಾರ. ಇದು ಆವೇಶ ಪ್ರಧಾನವಾದ ಅವತಾರ. ದುಷ್ಟ ಸಂಹಾರದ ಆವೇಶ. ಇದರಿಂದಾಗಿ ಕುಪಿತ ಭಾರ್ಗವನ ಪರಶು ಇಪ್ಪತ್ತೊಂದು ಬಾರಿ ಮೆರೆಯಿತು. ಐದು ಕೊಳಗಳು ರಕ್ತಮಯವಾದುವು. ಯುಗಾಂತ್ಯವೊಂದರ ಅಂತ್ಯದಲ್ಲಿ ಕಾಣಿಸಿಕೊಳ್ಳುವ ಮನೋಸ್ಥಿತಿಯಿದು. ಈ ಆವೇಶದ ಅಂತ್ಯದಲ್ಲಿ ಹುಟ್ಟಿದ್ದೇ ಸ್ವಪ್ರಜ್ಞೆಯ ಶ್ರೀ ರಾಮಾವತಾರ.

ನಾಗರಿಕತೆಯು ಪೂರ್ಣ ಅನಾವರಣಗೊಂಡ ಅವತಾರ. ನಾಗರಿಕತೆಯ ಮೊದಲ ಸ್ಥಿತಿಯಿದು. ನಾಗರಿಕ ಪ್ರಪಂಚವು ಶ್ರೀರಾಮನನ್ನು ದೇವರೆಂದು ಆರಾಧಿಸುತ್ತಿದೆ. ದುಷ್ಟಸಂಹಾರ ಈ ಅವತಾರದಲ್ಲಿದ್ದರೂ ಸಾರ್ವಕಾಲಿಕ ನಾಗರಿಕ ಜೀವನಮೌಲ್ಯಗಳನ್ನು ಇದು ನಿರ್ವಚಿಸುತ್ತದೆ. ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ, ಉದಾತ್ತ ಮಹಾಪುರುಷ, ರಾಜಾರಾಮ, ತ್ಯಾಗಮೂರ್ತಿ- ಎಂದು ಕೊಂಡಾಡಿದರು. ಇವೆಲ್ಲವನ್ನೂ ಮೀರಿ ಶ್ರೀರಾಮಚಂದ್ರ ವಿಶ್ವದ ಆರಾಧ್ಯದೇವನಾಗಿ ಬೆಳೆದ. ರಾವಣ ಸಂಹಾರವಾಗಿ, ಸೀತೆಗೆ ಅಗ್ನಿಪರೀಕ್ಷೆಯಾದ ಮೇಲೆ ತನ್ನನ್ನು ದೇವರ ದೇವನೆಂದು ಹಾಡಿಹೊಗಳಿ ಪ್ರಾರ್ಥಿಸಿದ ಇಂದ್ರಾದಿ ದೇವತೆಗಳೊಡನೆ ಶ್ರೀರಾಮ ಹೀಗೆ ಆಡುತ್ತಾನೆ: ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ-ನಾನು ಮನುಷ್ಯ; ನಾನು ರಾಮ; ನಾನು ದಶರಥನ ಮಗ, ಇದು ನನ್ನ ತಿಳಿವಳಿಕೆ. ಇದಕ್ಕಿಂತ ಬೇರೆಯಿದ್ದರೆ ತಾವು ಹೇಳಬೇಕು. ಹೀಗೆ ತನ್ನ ಅನುಭವವನ್ನು ಬಿಟ್ಟುಕೊಡದ ಈ ಮಾತನ್ನು ಮುಂದಿನ ಅವತಾರದೊಂದಿಗೆ ಹೋಲಿಸಿ ನೋಡಿದರೆ, ಮೊದಲು ಆವೇಶ ಪ್ರಜ್ಞೆಯ ಪರಶುರಾಮಾವತಾರ, ಅನಂತರ ಸ್ವಪ್ರಜ್ಞೆಯ ಶ್ರೀರಾಮಾವತಾರ, ತದನಂತರ ಮುಕ್ತಪ್ರಜ್ಞೆಯ ಶ್ರೀಕೃಷ್ಣಾವತಾರ‌ ಕಾಣಿಸುತ್ತದೆ.

ಶ್ರೀಕೃಷ್ಣಾವತಾರ‌ ಕಲಿಯುಗದ ಆರಂಭದ ಅವತಾರ. ಶ್ರೀರಾಮನದು ಸ್ವಪ್ರಜ್ಞೆಯ ಮಾತಾದರೆ, ಶ್ರೀಕೃಷ್ಣನದು ಮುಕ್ತಪ್ರಜ್ಞೆಯ ಮಾತು. ಪ್ರಜ್ಞಾವಿಕಾಸದ ಮಾತು. ತನಗೇ ತಾನೇ ಹಂಗಿಲ್ಲದೆ ಬೆಳೆದ ಶ್ರೀಕೃಷ್ಣ ಮನುಷ್ಯ ಸಹಜವಾಗಿಯೂ ಅತಿಮಾನುಷ ಸಹಜವಾಗಿಯೂ ನಟಿಸಿ ನಿಜವನ್ನು ಅನಾವರಣಗೊಳಿಸಿದ ಗೀತಾಚಾರ್ಯ. ದೈವತ್ವದ ಗಾಂಭೀರ್ಯವೂ, ಬದುಕಿನ ರಮ್ಯಭಾವಗಳ ಸಂವಾದಿಯೂ ಆಗಿ ಶ್ರೀಕೃಷ್ಣ ಬದುಕಿದನಾದ್ದರಿಂದ ಅಬಾಲವೃದ್ಧರಿಗೂ ಮತ್ತೆ ಮತ್ತೆ ಕಾಡುತ್ತಲೇ ಇದ್ದಾನೆ.

ಶ್ರೀಕೃಷ್ಣನ ಬದುಕಿನಲ್ಲಿ ಎರಡು ಆಯಾಮಗಳಿವೆ. 1. ಬಾಲ್ಯದಿಂದ ಜವ್ವನದವರೆಗಿನ ಗೋಕುಲದ ಕಾಲ. 2. ಜವ್ವನದಾಚೆಗಿನ, ಮಧುರೆಯಿಂದ ಹಸ್ತಿನೆಯವರೆಗಿನ ಧರ್ಮಸಂಸ್ಥಾಪನೆಯ ಕಾಲ. ಲೋಕೋದ್ಧಾರಕ್ಕೆ ಮತ್ತೆಮತ್ತೆ ಅವತರಿಸುತ್ತೇನೆಂದು ಕೃಷ್ಣ ಗೀತೆಯಲ್ಲೇ ಹೇಳಿದ. ಅವನ ಜೀವನದ ನಿರಂತರ ಪ್ರಕ್ರಿಯೆಯಿದು. ಆದ್ದರಿಂದ ಶ್ರೀಕೃಷ್ಣ ಕ್ರಾಂತಿಕಾರಕನಾಗಬೇಕಾಗುತ್ತದೆ. ನಾವಂದುಕೊಂಡಂಥ ಕ್ರಾಂತಿಕಾರಿಯಲ್ಲ. ಕ್ರಾಂತಿ ಅಂದರೆ ಕ್ರಮಣ- ಹೆಜ್ಜೆ ಇಡುವುದು- ಮುಂದೆ ಸಾಗುವುದು. ಇಂದ್ರ ನದಿಗಳ ಸೆರೆ ಬಿಡಿಸಿದ, ಭೂಮಿಯ ಬಂಜರನ್ನು ನೀಗಿದ- ಅನ್ನುತ್ತದೆ ವೇದ. ಇದು ಉತ್ಕರ್ಷದ ಕ್ರಾಂತಿ. ಲೋಕ ಕಂಟಕವನ್ನು ನಿರ್ಮೂಲನಗೊಳಿಸಿ ಉತ್ ಕ್ರಾಂತಿಯನ್ನು ಸುಗಮವಾಗಿಸುವ ಪ್ರಕ್ರಿಯೆ. ವಿಕೃತಿಗಳ, ವಿಭೃತಿಗಳ ನಾಶ. ಶ್ರೀರಾಮ, ರಾವಣ ಸಹಿತ ಲಂಕೆಯ ರಕ್ಕಸ ಸಮೂಹವನ್ನು ನಿರ್ಮೂಲನಗೊಳಿಸಿದ ರೀತ್ಯ ಶ್ರೀಕೃಷ್ಣ ಮಾಡಿದ ಕ್ರಾಂತಿ ಈ ತೆರನದ್ದು. ಕೃಷ್ಣನ ಹುಟ್ಟೇ ಪವಾಡಗಳನ್ನು ಸೃಷ್ಟಿಸಿದೆ ಎಂದ ಮೇಲೆ ಶ್ರೀಕೃಷ್ಣನ ಒಟ್ಟಂದದ ಬದುಕು ಲೀಲಾಮಯವಾಗಿ ಇರಲೇಬೇಕು. ನಂದಗೋಕುಲದಲ್ಲಿ ಹೇಗೆ ಇದ್ದ, ಹಸ್ತಿನೆಗೆ ಬಂದ ಮೇಲೆ ಹೇಗಾದ- ಎಂಬುದನ್ನು ಗ್ರಹಿಸುತ್ತಾ ಹೋದ ಹಾಗೆ ಅವನ ಬದುಕಿನ ವ್ಯಾಪಕತೆಯನ್ನು ಅರ್ಥೈಸಲು ಸಾಧ್ಯ.

ಮಥುರಾದಲ್ಲಿ ಮಧುರವಾಗಿಯೇ ಇದ್ದ ಶ್ರೀಕೃಷ್ಣನದು ಹಸ್ತಿನೆಯಲ್ಲಿ ಹಸ್ತಿಯನ್ನು ನೆನಪಿಸುವ ವಿಶಾಲಾರ್ಥವನ್ನು ಹೇಳುವ, ಅಂದರೆ ಮುಗ್ಧತೆಯಿಂದ ವಾಲಿದ ರಾಜತಾಂತ್ರಿಕ ನಡೆ. ಈ ಎರಡೂ ಆಯಾಮಗಳು ಬದುಕಿನ ಅನಂತ ಸಾಧ್ಯತೆಯ ನೆಲೆಗಳಾಗಿ ಸಾಮಾನ್ಯನಿಗೂ ಮಹತ್ತ್ವದ ಮಾದರಿಯಾಗುತ್ತದೆ. ಆದ್ದರಿಂದ ಶ್ರೀಕೃಷ್ಣ ಈ ರಾಷ್ಟ್ರದ ಅಧಿದೈವ; ಇಷ್ಟ ದೈವ. ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಜಯಂತಿ ಇದು ರಾಷ್ಟ್ರೀಯ ಹಬ್ಬ. ಸಾಂಪ್ರದಾಯಿಕ ಆಚರಣೆಯಲ್ಲಿ ಸಂಭ್ರಮ ಸಡಗರಪಡುವ, ಭಕ್ತಿಯ ಔನ್ನತ್ಯವನ್ನು ಮುಟ್ಟುವ ಬಹುದೊಡ್ಡ ಹಬ್ಬವಿದು.

ಯದುವಂಶದ ಕ್ಷತ್ರಿಯರ ಮನೆತನದಲ್ಲಿ ಶ್ರೀಕೃಷ್ಣ ಹುಟ್ಟಿದನಾದರೂ ಬೆಳೆದದ್ದು ಗೊಲ್ಲರ ಜೊತೆಯಲ್ಲಿ- ಗೋವುಗಳ ಜೊತೆಯಲ್ಲಿ-ಗೋಪಗೋಪಿಕೆಯರ ಮುದ್ದಿನಲ್ಲಿ. ಅದ್ವಿತೀಯ ಮಹಾನ್ ಪುರುಷನಾಗಿ ಮೆರೆದ ಶ್ರೀಕೃಷ್ಣ ಬದುಕಿನುದ್ದಕ್ಕೂ ಸಾಮಾನ್ಯರ ಜೊತೆಗೇ ಇದ್ದು ಅವರ ಸುಖ- ದುಃಖಗಳಿಗೆ ಅನನ್ಯವಾಗಿ ಸ್ಪಂದಿಸಿದ. ದೀನರ, ಬಡವರ ದನಿಯಾದ. ಯಾರ ಪಕ್ಷಪಾತಿಯೂ ಆಗದೆ ತಾನೇ ಬೋಧಿಸಿದ ಕರ್ಮಸಿದ್ಧಾಂತದಲ್ಲಿ ಪೂರ್ಣವಾಗಿ ಮುಳುಗಿದ. ಇದು ಅವನ ವ್ಯಕ್ತಿತ್ವದ ವಿಶಿಷ್ಟತೆ.

ಮಧುರೆಗೆ ಮರಳಿದ ಮೇಲೂ ಅರಸೊತ್ತಿಗೆಯನ್ನು ತ್ಯಜಿಸಿದ. ಒಲಿದು ಬಂದ ಸಿಂಹಾಸನವನ್ನು ನಿರಾಕರಿಸಿ ಸಾಮಾನ್ಯನಂತೆ ಬದುಕಿದ. ಭಕ್ತಿ-ಕರ್ಮ–ಧರ್ಮಕ್ಕೆ ಜ್ಞಾನವನ್ನು ಬೆಸೆದ. ತನ್ನನ್ನು ಅರಿಯದ ಗೊಲ್ಲರಿಗೆ, ಅರಿತರೂ ದ್ವೇಷವನ್ನೇ ಸಾಧಿಸಿದ ಶಿಶುಪಾಲಾದಿ ಅನೇಕ ದುರುಳರಿಗೆ; ಮುಕ್ತಿಗೆ ಯಾವ ಸಾಧನವೂ ಇಲ್ಲದ ಕೋಟಿ ಕೋಟಿ ಅಕಿಂಚನರಿಗಾಗಿ; ಗಿಡಮರಗಳ, ಹುಲ್ಲುಕಡ್ಡಿಗಳ ರೂಪದ ತಿರ್ಯಗ್ ಸ್ಥಾವರಗಳಿಗಾಗಿ, ಯಮುನೆಗಾಗಿ, ಗೋಕುಲಕ್ಕಾಗಿ, ಧರ್ಮಸಂಸ್ಥಾಪನೆಗಾಗಿ, ಸ್ತ್ರೀಯರಿಗಾಗಿ ಸಂಪೂರ್ಣ ಬದುಕನ್ನು ಮುಡಿಪಾಗಿಟ್ಟ. ಧರ್ಮದ ಪುನರ್ ವ್ಯಾಖ್ಯಾನ ಮಾಡಿದ. ವೇದಾರ್ಥಗಳ ಮುಸುಕು ತೆರೆದ. ಯಾರಿಗೇ ಆದರೂ ಪುರುಷಾರ್ಥ ಪ್ರಾಪ್ತಿಯಿದೆ, ಸಾಧನೆಯಿದೆ, ಪರಮಾರ್ಥವಿದೆ ಎಂದ.

ಅಧರ್ಮಿಗಳನ್ನು ನಿವಾರಿಸಿದ. ಯುದ್ಧ ಭೂಮಿಯಾದರೂ ಒಂದೇ, ದೇವಾಲಯವಾದರೂ ಒಂದೇ- ಜ್ಞಾನ ಬೇಡುವ ಹೃದಯವಿದ್ದರೆ ಆಯಿತು ಎಂದು ಆಚರಿಸಿ ತೋರಿದ. ಗೋಪಿಕೆಯರನ್ನು ಸಂತೈಸಿದ ಕೈಯಲ್ಲಿ ಜ್ಞಾನಮುದ್ರೆಯನ್ನೂ ಕೊಳಲನ್ನೂ ಚಕ್ರವನ್ನೂ ಹಿಡಿದ. ಶಸ್ತ್ರ-ಶಾಸ್ತ್ರ ಎರಡೂ ಲೋಕರಕ್ಷಣೆಗೆ ಬೇಕೆಂದ. ಅಂತರಂಗ-ಬಹಿರಂಗಗಳ ಸಮರಸವೇ ಜೀವನವೆಂದ. ದ್ವೇಷವಿಲ್ಲದ ಯುದ್ಧ, ಮೋಸವಿಲ್ಲದ ವ್ಯವಹಾರ, ಅಹಂಕಾರವಿಲ್ಲದ ಜ್ಞಾನ, ಇತರರ ಒಳಿತಿಗಾಗಿ ಬದುಕಿದ ಬಾಳು- ಇವೆಲ್ಲವೂ ‘ಯೋಗ’ ವೆಂದ. ಲೋಕಕ್ಷಯವಾಗುವ ಯಾವ ಕಾರ್ಯವನ್ನೂ ಸಹಿಸುವುದಿಲ್ಲವೆಂದ. ಎಲ್ಲಿಯೂ ನಿಲ್ಲದೆ, ಯಾವುದಕ್ಕೂ ಆಸೆಪಡದೆ, ಲೋಕಸೇವೆ ಮಾಡಲು ಸಾಧ್ಯ, ಅಂಥವನನ್ನು ಲೋಕ ಆಮೇಲೂ ನೆನಪಿಸುತ್ತದೆ ಎಂದು ಬದುಕಿ ತೋರಿದ. ಮಮಕಾರದಲ್ಲಿದ್ದೂ ನಿರ್ಮಮಕಾರವನ್ನು ಅಭಿವ್ಯಕ್ತಿಸಿದ. ಎಲ್ಲ ಕೆಲಸಗಳೂ ಶ್ರೇಷ್ಠ, ಯಾವುದೂ ಕೀಳಲ್ಲವೆಂದ. ಅಂತೆಯೇ ಬಾಳಿದ. ಸಂಧಾನಕ್ಕೆ ಬಂದಾಗಲೂ ರಾಜಾತಿಥ್ಯವನ್ನು ನಿರಾಕರಿಸಿ ಶೂದ್ರನಾದ ವಿದುರನ ಮನೆಗೆ ತೆರಳಿದ. ಬಾಹ್ಯ ಶ್ರೀಮಂತಿಕೆಯನ್ನು ಮೆಚ್ಚದೆ ಹೃದಯ ಸಿರಿವಂತಿಕೆಯನ್ನು ಮೆಚ್ಚಿದ. ವಿದುರನನ್ನು ಅಪ್ಪಿದ. ಅವನ ಮನೆಯಲ್ಲಿ ಹಸಿವನ್ನು ನೀಗಿಕೊಂಡ. ಇದರಿಂದಾಗಿ ವಿದುರನ ಮೈಮನಸ್ಸು ಕುಣಿದು ಕುಪ್ಪಳಿಸಿ ಜನ್ಮಸಾರ್ಥಕ್ಯವನ್ನು ಪಡೆಯಿತು. ಗೋಪಿಕೆಯರೊಂದಿಗೆ ಹಗಲು ರಾತ್ರಿಯೆನ್ನದೆ ಆಡಿದ, ನಲಿದ, ಅವರೊಳಗೊಂದಾಗಿ ಪರಿಪರಿಯಾಗಿ ಕಾಡಿದ. ಕೊನೆಗೊಂದು ದಿನ ಬಿಲ್ಲಹಬ್ಬದ ನೆಪದಲ್ಲಿ ಅವರನ್ನಗಲಿದ. ಅವರು ಪರಿತಪಿಸಿದರು; ಕಣ್ಣೀರು ಸುರಿಸಿದರು; ಅಡ್ಡಗಟ್ಟಿದರು; ತಡೆದರು. ಆದರೂ ಅವರನ್ನು ಅಗಲಿದ. ಹೀಗೆ ಅಗಲುವುದರ ಮೂಲಕ ‘ಅಗಲಿ’ ಬದುಕುವುದನ್ನು ಕಲಿಸಿದ. ನಮಗೆ ಪ್ರೀತಿಪಾತ್ರರಾದವರನ್ನೂ ‘ಬಿಟ್ಟು ಬದುಕುವ ಶಕ್ತಿ’ ಯನ್ನು ಬೆಳೆಸಿಕೊಳ್ಳಬೇಕೆಂಬ ಜೀವನಪಾಠವನ್ನು ಅಪರೋಕ್ಷವಾಗೇ ಬೋಧಿಸಿದ. ವರ್ತಮಾನದಲ್ಲಿ ಇದು ತೀರಾ ಅಗತ್ಯವಾದ ಜೀವನಮೌಲ್ಯವಾಗಿದೆ.

ಬಾಲ್ಯದಲ್ಲಿ ಅಗ್ನಿಯನ್ನು ಆಹುತಿ ಮಾಡಿದಾಗಲೂ, ಮರಳನ್ನು ಚಿನ್ನ ಮಾಡಿದಾಗಲೂ, ಕಾಳಿಯ ಮರ್ದನದಲ್ಲೂ, ಯಶೋದೆಯ ಮುಂದೆ ದಾಮೋದರನಾದಾಗಲೂ, ವರುಣನನ್ನು ನಿಗ್ರಹಿಸಿದರಲ್ಲೂ, ನರಕಾಸುರ-ಕಂಸ-ಶಿಶುಪಾಲಾದಿ ವಧೆಯಲ್ಲೂ, ಭೀಷ್ಮನಿಗ್ರಹದಲ್ಲೂ, ದ್ರೋಣವಧೆಯಲ್ಲೂ, ಸೈಂಧವ-ಭೂರಿಶ್ರವಸ್ಸು, ಕರ್ಣ-ದುರ್ಯೋಧನ ವಧೆಯಲ್ಲೂ, ಅಶ್ವತ್ಥಾಮ ನಿಗ್ರಹದಲ್ಲೂ, ಸುದರ್ಶನ ಚಕ್ರಧಾರಿಯಾದಾಗಲೂ, ಗೀತಾಚಾರ್ಯನಾದಾಗಲೂ, ಅವರಿವರು ಉಪಾಯನವೀಯುತ್ತಾ ಬಂದು ಹೋಗುತ್ತಿದ್ದಾಗ, ತಾನೇನೂ ತರಲಿಲ್ಲ, ತನ್ನದೆಂಬುದೇನೂ ಇಲ್ಲ, ವಿಷ ತುಂಬಿದ ಮೊಲೆಹಾಲು ಬಿಟ್ಟರೆ ಬೇರೆಯಿರಲಿಲ್ಲ ಎಂದು ಕಂಬನಿ ಹಾಕಿದಳಲ್ಲ ಪೂತನಿ, ಇವಳ ಈ ಕಾರ್ಪಣ್ಯದಲ್ಲೂ, ಅರ್ಜುನನ ಗಾಂಢೀವದಲ್ಲೂ- ಶ್ರೀಕೃಷ್ಣ ಅನುಸರಿಸಿದ್ದು ಶುಕ್ರನೀತಿ, ಬೃಹಸ್ಪತಿ ನೀತಿಯೇ ಹೊರತು ಕಣಿಕ ನೀತಿಯಲ್ಲ. Right means for the right end- ಇದು ಬೃಹಸ್ಪತಿನೀತಿ. Wrong means for right ends , When your enemy follows wrong means- ಇದು ಶುಕ್ರನೀತಿ. ಧರ್ಮಕ್ಕಾಗಿ ವಕ್ರನೀತಿ. Any means for any end- ಇದು ಕಣಿಕನೀತಿ; ಅಧರ್ಮ, ಅನ್ಯಾಯದ ನೀತಿ. ಕಂಸ, ಶಿಶುಪಾಲ, ರಾವಣ, ಸೈಂಧವ, ಕರ್ಣ, ದುರ್ಯೋಧನರ ನೀತಿ.
***

ಜೀವನವನ್ನೆಲ್ಲ ಮಾನವ ಒಂದು ಸಮಗ್ರಯೋಗವನ್ನಾಗಿ, ತನ್ನ ಕಾರ್ಯಕ್ಷೇತ್ರಗಳಲ್ಲಿ ಬಾಳಿ ಪೂರ್ಣತೆಯನ್ನು ಸಾಧಿಸಬೇಕು. ಅದು ಇಲ್ಲೂ ತೃಪ್ತಿ ತರುತ್ತದೆ, ಪರದಲ್ಲೂ ಶಾಶ್ವತ ಫಲ ನೀಡುತ್ತದೆ. ವೈಯಕ್ತಿಕ ಜೀವನ, ಕೌಟುಂಬಿಕ ಜೀವನ, ಸಾಮೂಹಿಕ ಜೀವನ, ಅದರಲ್ಲಿ ಆರ್ಥಿಕ-ಸಾಮಾಜಿಕ-ರಾಜಕೀಯ ಮುಖಗಳು ಒಂದಕ್ಕೊಂದು ಪೂರಕವಾಗಬೇಕು. ವ್ಯಕ್ತಿಗೆ ವ್ಯಕ್ತಿ ಹೊರೆಯಾಗಬಾರದು. ಹೊರೆಯಾದರೆ ಶೋಷಣೆ ಬರುತ್ತದೆ. ಇಂದ್ರಿಯ ಜಯದಲ್ಲಿ ಯೋಗಸಾಧನೆ ಆರಂಭವಾಗುತ್ತದೆ. ಇದಿಲ್ಲದವನು ಎಲ್ಲೂ ಭಾರವಾಗುತ್ತಾನೆ. ಇದು ಆಸುರೀ ಪ್ರಕೃತಿಯನ್ನು ಉದ್ದೀಪಿಸುತ್ತದೆ. ಆಹಾರ- ವಿಹಾರ–ವಿಚಾರ–ಸಂಗ-ಜೀವನೋಪಾಯ ಕ್ರಮ- ಎಲ್ಲದರಲ್ಲೂ ಶುದ್ಧಿ ಬೇಕು. ಮನೆಯ ವಾತಾವರಣ, ರಾಷ್ಟ್ರದ ವ್ಯವಸ್ಥೆ, ವಿದ್ಯಾಕ್ರಮ ಇದನ್ನು ಗುರಿಯಾಗಿ ಹೊಂದಿರಬೇಕು. ದುಡಿಮೆಯೇ ಕರ್ಮಯೋಗ, ಸಮಾಜಕ್ಕೆ ಉಪಯುಕ್ತವಾದ ಯಾವ ವೃತ್ತಿಯೂ ಸರಿ, ಅದರಲ್ಲಿ ಕೀಳುಮೇಲಿಲ್ಲ. ಧರ್ಮವೇ ಸರಿ-ತಪ್ಪು, ತಿಳಿವಳಿಕೆಗೆ ನಿರ್ಣಾಯಕ. ಧರ್ಮ ಎಲ್ಲ ವ್ಯವಸ್ಥೆಯ ಆಧಾರ. ಮನುಷ್ಯ ಮನುಷ್ಯನ ಸಂಬಂಧ ಒಂದು ಸಮರಸ ಯೋಗ ಆಗಬೇಕು. ‌”ನೀನು ಮಣ್ಣಿನ ಮಗನೇ ಆಗಿರು, ಭೂಮಿಗೆ ಭಾರವಾಗಬೇಡ. ದುಡಿದು ಬಾಳು, ಇತರರನ್ನು ಬದುಕಿಸು, ಅವರಿಗಾಗಿಯೂ ಒಂದಿಷ್ಟು ವೇಳೆ, ಶಕ್ತಿ, ಗಮನ, ಚಿಂತನೆ ಇರಲಿ ಎಂದ ಶ್ರೀಕೃಷ್ಣ. ಅದೇ ರೀತಿ ಆಚರಿಸಿ ತೋರಿದ” ಎನ್ನುತ್ತಾರೆ ಡಾ. ಕೆ.ಎಸ್. ನಾರಾಯಣ ಆಚಾರ್ಯರು.
**

ಕೃಷ್ಣ ಅಂದರೆ ಆಕರ್ಷಣೆ; ಅಂದರೆ ಆಕರ್ಷಣೆಗೆ ಒಳಗಾಗುವವನು. ಕೃಷ್ಣನನ್ನು ಸಂಕರ್ಷಣಶಕ್ತಿ ಎಂತಲೂ ಕರೆಯುತ್ತಾರೆ. ಆದ್ದರಿಂದ ಕೃಷ್ಣ ಅಂದರೆ ಎಲ್ಲರಿಗೂ ಆಕರ್ಷಣೆ, ಪ್ರೀತಿ. ಮನುಷ್ಯನಲ್ಲಿ ಮೂರು ಬಗೆಯ ಶಕ್ತಿಗಳಿರುತ್ತದೆ. ಅವೆಂದರೆ: ಅಂತಃಶಕ್ತಿ, ಬಹಿರ್ಶಕ್ತಿ ಮತ್ತು ಕನಿಷ್ಟ ಶಕ್ತಿ. ಅಂತಃಶಕ್ತಿ ಕೃಷ್ಣಪ್ರಜ್ಞೆಗೆ ಪೂರಕ. ಇದು ಅದ್ವಿತೀಯ. ಇಡಿಯ ಆಧ್ಯಾತ್ಮ ಪ್ರಪಂಚವೇ ಆತನ ಅಂತಃಶಕ್ತಿಯ ಅವತಾರ. ಪಾರಲೌಕಿಕ ಪ್ರಪಂಚಕ್ಕೂ ಲೌಕಿಕವಾದ ಪ್ರಪಂಚಕ್ಕೂ ಶ್ರೀಕೃಷ್ಣ ಜಗದ್ಗುರು. ಕೃಷ್ಣ ಅಂದರೆ ಪ್ರೀತಿ. ಪ್ರೀತಿಯೆಂದರೆ ಭಕ್ತಿ. ಅದಕ್ಕಾಗಿ ಕೃಷ್ಣನ ಬದುಕಿನ ಅನಂತ ಸಾಧ್ಯತೆಯನ್ನು ನಾವು ಸ್ವೀಕರಿಸಿ ಬದುಕುತ್ತೇವೆ. ಶ್ರೀಕೃಷ್ಣನ ಜನ್ಮದಿನದಂದು ಜನಪದೀಯ ಉತ್ಸವವಾಗಿ ಬೆಳೆದುಬಂದದ್ದು ಮೊಸರುಕುಡಿಕೆ. ಗೊಲ್ಲರ ಹಬ್ಬವಿದು. ಗೋಕುಲದ ಗೊಲ್ಲರ ನಲ್ಲ ಶ್ರೀಕೃಷ್ಣನೊಂದಿಗೆ ಗೊಲ್ಲರು ಆಡಿದ ಈ ಆಟದ ನೆನಪು ವೃಂದಾವನವನ್ನು ಮತ್ತೆ ನೆನಪಿಸುತ್ತದೆ. ಈಗ ಈ ಆಟದಲ್ಲಿ ಎಲ್ಲಾ ಜಾತಿಯವರೂ ಸೇರುತ್ತಾರೆ. ಇದು ಭಾವೈಕ್ಯದ ಸಂಕೇತ. ನಮ್ಮ ನಮ್ಮಲ್ಲಿರುವ ಅಜ್ಞಾನವೆಂಬ ಅಂಧಕಾರವನ್ನು ಹೊರಹಾಕುವ ಪ್ರಯತ್ನದ ನಿಜಾರ್ಥವಿದು. ಇದು ಅಧ್ಯಾತ್ಮದ ಜೊತೆಗೆ ಶುದ್ಧ ಮನೋರಂಜನೆಯೂ ಹೌದೆನ್ನುತ್ತಾರೆ ಶ್ರೀ ಬನ್ನಂಜೆಯವರು.

ಮುಂದುವರಿದು ಭಗವಂತನ ಅವತಾರದ ಹಬ್ಬಗಳಲ್ಲಿ ಕೃಷ್ಣಾವತಾರದ್ದೇ ಮೇಲುಗೈ. ಇದನ್ನು ಬಿಟ್ಟರೆ ರಾಮನವಮಿ. ಆದರೂ ಕೃಷ್ಣಾಷ್ಟಮಿಯೇ ಜನಪ್ರಿಯ. ಕಾರಣ ಈ ನೆಲವನ್ನು, ಜನರನ್ನು ಅಖಂಡವಾಗಿ ಗೆದ್ದವ ಶ್ರೀಕೃಷ್ಣ. ಕಾರಣ ಇಷ್ಟೆ: ಕೃಷ್ಣಾವತಾರ ನಮಗೆ ಹತ್ತಿರದ ಅವತಾರ. ದ್ವಾಪರದ ಅವತಾರವಾದರೂ ಶ್ರೀಕೃಷ್ಣ ಕಲಿಯುಗದಲ್ಲೂ ಇದ್ದ. ದ್ವಾಪರ ಕಳೆದು ಕಲಿಯುಗದ ಆರಂಭವಾದಾಗ ಕೃಷ್ಣನಿಗೆ ಎಪ್ಪತ್ತು ವರ್ಷಗಳು. ಮತ್ತೆ ಮೂವತ್ತಾರು ವರ್ಷಗಳ ಕಾಲ ನಾವಿದ್ದ ಈ ಕಲಿಯುಗದ ಆರಂಭದಲ್ಲಿ ಶ್ರೀಕೃಷ್ಣ ಬದುಕಿದ್ದ. ಹಾಗಾಗಿ ಶ್ರೀಕೃಷ್ಣಾವತಾರ ನಮ್ಮ ಯುಗದ ಅವತಾರವೂ ಅಹುದು. ಶ್ರೀಕೃಷ್ಣನಿಗಿಂತಲೂ ಬುದ್ಧಾವತಾರ ನಮಗೆ ಹತ್ತಿರವಾದರೂ ಶಾಸ್ತ್ರಕಾರರು ಬುದ್ಧಾವತಾರವನ್ನು ಮೋಹಕಾವತಾರವೆಂದರು. ಆದರೆ ಕೃಷ್ಣಾವತಾರ ಜ್ಞಾನಕ್ಕೆ ಮೀಸಲು. ಭಾರತೀಯ ತತ್ತ್ವಜ್ಞಾನದ ಕೆನೆಯಾದ ಭಗವದ್ಗೀತೆಯನ್ನು ಇಡಿಯ ಜಗತ್ತಿಗೆ ನೀಡಿದ ಶ್ರೀಕೃಷ್ಣನ ಜಯಂತಿ ಜನಮಾನ್ಯವೂ ಜನಪ್ರಿಯವೂ ಜನಪ್ರಸಿದ್ಧಿಯೂ ಆಯಿತು.
***

ಶ್ರೀಕೃಷ್ಣ ‘ಯೋಗೀಶ್ವರ’- ಎಂಬುದು ನಮ್ಮ ಗ್ರಹಿಕೆ. ಶ್ರೀಕೃಷ್ಣ ‘ಯೋಗೇಶ್ವರ’- ಎಂಬುದು ದಿವ್ಯತ್ವದ ಗ್ರಹಿಕೆ. ಶ್ರೀಕೃಷ್ಣ- ದೇವರೆಂದರೆ ದೇವರು; ಮಾನವನೆಂದರೆ ಮಾನವ; ಪ್ರೀತಿಯೆಂದರೆ ಪ್ರೀತಿ; ಭಕ್ತಿಯೆಂದರೆ ಭಕ್ತಿ. ಯಾರು ಯಾವ ನೆಲೆಯಲ್ಲಿ ನೆನೆಯುತ್ತಾರೋ ಶ್ರೀಕೃಷ್ಣನು ಆ ನೆಲೆಯಲ್ಲೇ ದಕ್ಕುತ್ತಾನೆ. ಅಂತೂ ನಮಗೆ ಶ್ರೀಕೃಷ್ಣ ಬೇಕು. ಕಾರಣ ಅವ ರಾಷ್ಟ್ರಪುರುಷ. ಅವನಿಲ್ಲದೆ ಮಹಾಭಾರತವಿಲ್ಲ; ಭಾರತವಿಲ್ಲ; ಭಾರತೀಯನಿಲ್ಲ. ಅವನನ್ನು ಅರಿಯದಿರುವುದು ಪರಮಮೌಢ್ಯ. ಅವಹೇಳನ ಮಾಡುವುದು ಸಮಾಜದ್ರೋಹ, ರಾಷ್ಟ್ರದ್ರೋಹ. ಶ್ರೀಕೃಷ್ಣನಿಗೆ ಇಲ್ಲದ ಪೂಜೆ, ಸಲ್ಲದ ಪೂಜೆ ಪೂಜೆಯೇ ಅಲ್ಲ. ಅವನ ಸುಬೋಧೆಯನ್ನು ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡರೆ ಅದು ಕರ್ಮಯೋಗವೂ ಜ್ಞಾನಯೋಗವೂ ಭಕ್ತಿಯೋಗವೂ ಆಗುತ್ತದೆ. ಜೀವನ ಉತ್ಕರ್ಷವನ್ನು ಉತ್ಕರ್ಷಿಸುವ ಅದಮ್ಯ ಶಕ್ತಿಯೇ ಶ್ರೀಕೃಷ್ಣ ಶಕ್ತಿ. ಅದನ್ನು ಯಾರು ಯಾವ ಹೆಸರಿನಿಂದ ಕರೆದರೂ ಸರಿಯೆ. ಭಾರತಕ್ಕಂತೂ ಶ್ರೀರಾಮ-ಕೃಷ್ಣರೇ ದಿಕ್ಕು. ಅವರ ಆರಾಧನೆಯೇ ಭಾರತೀಯರ ಹಕ್ಕು.

-ಟಿ. ದೇವಿದಾಸ್

 

 
Previous articleಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮತ್ತೆ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
Next articleನಕಲಿ ನೋಟು ಪತ್ತೆಗೆ ಮದರಸಾಗೆ ನುಗ್ಗಿದ್ದ ಅಧಿಕಾರಿಗಳಿಗೆ ಶಾಕ್: ಅಲ್ಲಿ ಸಿಕ್ಕಿದ್ದು ವಿವಾದಾತ್ಮಕ ಪುಸ್ತಕ