
ಉಳ್ಳಾಲ: ನೇತ್ರಾವತಿ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ. ಆತ್ಮಹತ್ಯೆ ತಡೆಗೆ ತಡೆಬೇಲಿ ಹಾಕಿದ್ದರೂ ಕೂಡ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೃತರನ್ನು ಚಿಕ್ಕಮಗಳೂರಿನ ಮುಗುಳಬಳ್ಳಿ ಗೋಕುಲ್ ಫಾರ್ಮ್ ನಿವಾಸಿ ಬಿ.ಎಸ್. ಶಂಕರಗೌಡ ಎಂಬುವವರ ಪುತ್ರ ಪ್ರಸನ್ನ(37) ಎಂದು ಗುರುತಿಸಲಾಗಿದೆ.
ಯುವಕ ನದಿಗೆ ಹಾರುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣಕ್ಕೆ ರಕ್ಷಣೆಗೆ ಧಾವಿಸಿದರಾದರೂ ಅಷ್ಟರಲ್ಲಾಗಲೇ ಆತ ನೀರುಪಾಲಾಗಿದ್ದರು. ಘಟನಾ ಸ್ಥಳದಲ್ಲಿ ಸಾಕಷ್ಟು ಜನರು ಆಗಮಿಸಿದ್ದರಿಂದ ಕೆಲ ಹೊತ್ತು ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು.
ಇನ್ನು, 2019ರಲ್ಲಿ ಕೆಫೆ ಡೇ ಮಾಲೀಕ ಸಿದ್ದಾರ್ಥ್ ಅವರು ಕೂಡ ಇದೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಬಳಿಕ ಆ ಸ್ಥಳದಲ್ಲಿ ಸರಣಿ ಆತ್ಮಹತ್ಯೆ ನಡೆದ ಹಿನ್ನೆಲೆ ಅಲ್ಲಿ ತಡೆಬೇಲಿಯನ್ನೂ ಕೂಡ ನಿರ್ಮಾಣ ಮಾಡಲಾಗಿತ್ತು. ಆದರೂ ಕೂಡ ಇದೀಗ ಮತ್ತೆ ಆತ್ಮಹತ್ಯೆ ನಡೆದಿರುವುದು ಆತಂಕವನ್ನುಂಟು ಮಾಡಿದೆ.
