ಉಡುಪಿ: ಕುಸ್ತಿಪಟುಗಳು ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ವಿದೇಶದಿಂದ ಫಂಡಿಂಗ್ ಆಗಿದೆ. ಆ ಮೂಲಕ ದೇಶವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಮುಂದಾಗಿದೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದೇಶವನ್ನು ಅಸ್ಥಿರಗೊಳಿಸುವ ವ್ಯಕ್ತಿಗಳು ಯಾರೇ ಆದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದು ಎಂದು ಕುಟುಕಿದರು.
ಈ ಕುರಿತು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಹೇಳಿಕೆಯಿಂದ ದೇಶದ ಪ್ರಜೆಯಾಗಿ ನನಗೆ ಆಘಾತವಾಗಿದೆ. ನಿಮ್ಮ ಹೇಳಿಕೆ ಅತ್ಯಂತ ಕನಿಷ್ಠವಾಗಿದೆ. ಒಲಂಪಿಕ್ಸ್ ನಲ್ಲಿ ಮೆಡಲ್ ಗೆದ್ದವರನ್ನು ಅವಮಾನಗೊಳಿಸಿದ್ದೀರಿ. ಮೆಡಲ್ ಗೆದ್ದಾಗ ಕರೆದು ಪ್ರಧಾನಿ ಜೊತೆ ಚಹಾ ಕೂಟ ನಡೆಸುತ್ತೀರಿ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎನ್ನುತ್ತಿದ್ದಾರೆ. ಇದಕ್ಕೂ ವಿದೇಶಿ ಹಣಕ್ಕೂ ಏನು ಸಂಬಂಧ. ನೀವು ಒಬ್ಬ ಮಹಿಳಾ ಮಂತ್ರಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ. ಕೇಂದ್ರದ ಎಲ್ಲಾ ತನಿಖಾ ಸಂಸ್ಥೆಗಳು ನಿಮ್ಮ ಕೈಯಲ್ಲಿದೆ, ಸರಕಾರ ಅಧಿಕಾರ ನಿಮ್ಮ ಕೈಯಲ್ಲಿದೆ. ದೇಶವನ್ನು ಅಸ್ಥಿರಗೊಳಿಸುವ ವ್ಯಕ್ತಿಗಳು ಯಾರೇ ಇರಬಹುದು ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಅದನ್ನು ಹೊರತುಪಡಿಸಿ ಇಂತಹ ಬಾಲಿಷ ಹೇಳಿಕೆಗಳನ್ನು ಕೊಡಬೇಡಿ ಎಂದರು.
