ಮಂಗಳೂರು: ಮೈಸೂರಿನ ನಂತರ ದಸರಾ ವಿಜೃಭಂಣೆಯಿಂದ ನಡೆಯುವ ಇನ್ನೊಂದು ಸ್ಥಳ ಅಂದರೆ ಮಂಗಳೂರು. ನವರಾತ್ರಿಯ ಸಂಧರ್ಭ ಇಲ್ಲಿ ನಡೆಯುವ ದಸರಾ ಉತ್ಸವ ನೋಡಲು ಎರಡು ಕಣ್ಣುಗಳು ಸಾಲದು. ದಸರಾ ವೇಳೆ ಮೆರವಣಿಗೆ ನಡೆಯುವ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ದಸರಾ ಮೆರವಣಿಗೆ ನಡೆಯುವ ದಿನದಂದು ಮದ್ಯದ ಅಂಗಡಿ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಸೂಚಿಸಿದ್ದಾರೆ.
ಈ ಬಗ್ಗೆ ಆದೇಶ ಹೊರಡಿಸಿರುವ ಅವರು, ಮೆರವಣಿಗೆ ಸಾಗುವ ಮಾರ್ಗದಲ್ಲಿ ಮತ್ತು ಆಸುಪಾಸಿನ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಮದ್ಯದ ಅಂಗಡಿ, ಬಾರ್, ವೈನ್ ಶಾಪ್‌ಗಳನ್ನು ಬಂದ್ ಮಾಡುವಂತೆ ತಿಳಿಸಿದ್ದಾರೆ.
ಇನ್ನು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಈ ದಸರಾ ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿಯಂತೆ ಮಂಗಳೂರಿನ ದಸರಾದಲ್ಲಿ ಶಾರದಾ ದೇವಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಈ ವೇಳೆ ಹುಲಿ ಕುಣಿತ, ಜಾನಪದ ಕಲೆ, ಕರಡಿವೇಷದ ಕುಣಿತ ಹೀಗೆ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಮನ ಸೆಳೆಯುತ್ತವೆ.
