
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮಧ್ವನವಮಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಯಕ್ಷಗಾನ ಕಾರ್ಯಕ್ರಮ ‘ಹಂಸಾನ್ವಯ ದಿಗ್ವಿಜಯ’ ಬಯಲಾಟದಲ್ಲಿ ಪುಟಾಣಿ ಪೋರನೊಬ್ಬನ ದಿಗಿಣ ಜನರ ಮನಸೂರೆಗೊಂಡಿದೆ.
ವಿದ್ವಾನ್ ಮಹೇಂದ್ರ ಸೋಮಯಾಜಿ ಮತ್ತು ತಂಡ ಉಡುಪಿ ಇವರಿಂದ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಐದು ವರ್ಷದ ಪೋರ ಜಿತಮನ್ಯು ತನ್ನ ಯಕ್ಷಗಾನದ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾನೆ. ಪುಟ್ಟ ಬಾಲಕನು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ದಿಗಿಣ ತೆಗೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಲಕನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಘಟಾನುಘಟಿ ಅನುಭವಸ್ಥ ಯಕ್ಷಗಾನ ಕಲಾವಿದರ ಮುಂದೆ ಒಂಚೂರೂ ಅಳುಕಿಲ್ಲದೆ, ತಾಳ ಬದ್ದವಾಗಿ ಕುಣಿದಿರುವ ಜಿತಮನ್ಯುವಿನ ಅಸಾಧಾರಣ ಪ್ರತಿಭೆ ಮತ್ತು ಯಕ್ಷಗಾನ ಪ್ರೀತಿಗೆ ಜನರು ತಲೆದೂಗಿದ್ದಾರೆ.
