ಮಂಗಳೂರು: ಈ ವರ್ಷದ ಕುಡ್ಲದ ಪಿಲಿಪರ್ಬ ಅಕ್ಟೋಬರ್ 21 ರ ಶನಿವಾರದಂದು ಜಿಲ್ಲೆಯ ಕೇಂದ್ರದ ಮೈದಾನದಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಕರಾವಳಿಯ ಜನಪ್ರಿಯ 15 ಹುಲಿ ವೇಷ ತಂಡಗಳು ಭಾಗವಹಿಸಲಿವೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜನಸಾಮಾನ್ಯರ ಮನರಂಜನೆಯನ್ನು ಕೇಂದ್ರವಾಗಿರಿಸಿಕೊಂಡು ಆಯೋಜಿಸಿರುವ ಈ ಬಾರಿಯ ಕುಡ್ಲದ ಪಿಲಿಪರ್ಬ 2023 ರಲ್ಲಿ ಜನಪ್ರಿಯ 15 ಹುಲಿವೇಷ ತಂಡಗಳು ಭಾಗವಹಿಸಲಿವೆ. ಮೆರವಣಿಗೆಯ ಮೂಲಕ ವೇದಿಕೆಗೆ ಆಗಮಿಸುವ ಹುಲಿವೇಷ ತಂಡಗಳು 20 ನಿಮಿಷಗಳ ಕಾಲ ಪ್ರದರ್ಶನವನ್ನು ನೀಡಲಿವೆ. ಈ ವೇಳೆ ಪ್ರತಿ ತಂಡವೂ 38 ಕೆ.ಜಿ ಭಾರದ ಅಕ್ಕಿಮುಡಿ ಹಾರಿಸುವುದು ಕಡ್ಡಾಯ ಎಂದು ತಿಳಿಸಿದರು.
ಇನ್ನು, ಕುಡ್ಲದ ಪಿಲಿಪರ್ಬ ನಡೆಯುವ ಮೈದಾನದಲ್ಲಿ 5 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಸಜ್ಜಿತ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗಿದೆ.ಸ್ಪರ್ಧೆಯನ್ನು ವೀಕ್ಷಿಸಲು ಬರಲು ಸಾಧ್ಯವಾಗದವರಿಗಾಗಿ ನೇರ ಪ್ರಸಾರದ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಸ್ವಚ್ಛತೆಗೆ ವಿಶೇಷವಾದ ಆದ್ಯತೆ ನೀಡಲಾಗಿದ್ದು, ಪಾಕಿಂಗ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಒಟ್ಟಾರೆಯಾಗಿ ಅಕ್ಟೋಬರ್ 21ರಂದು ಹುಲಿಗಳ ಭರ್ಜರಿ ಘರ್ಜನೆ ಕರಾವಳಿ ಸಾಕ್ಷಿಯಾಗಲಿದೆ.
