ಕಾರ್ಕಳ: ಕೆಲವರು ಅಪಪ್ರಚಾರ ಮಾಡೋದಕ್ಕಾಗಿ ಕಾರ್ಕಳದ ಅಭಿವೃದ್ಧಿ ಬಗ್ಗೆ ಗೇಲಿ ಮಾಡುತ್ತಾರೆ. ದಿನಕ್ಕೊಂದು ಕಟ್ಟು ಕತೆಗಳನ್ನು ಹೇಳುತ್ತಾ ಜನರನ್ನು ನಂಬಿಸುವ ಕೆಲಸ ಮಾಡ್ತಾ ಇದ್ದಾರೆ. ಪರಶುರಾಮ ಥೀಮ್ ಪಾರ್ಕ್ ನಾಲ್ಕು ದಿನದ ಯೋಜನೆಯಲ್ಲ.ಅದು 10 ವರ್ಷಗಳ ನನ್ನ ಕನಸು ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಅನುಮಾನವಿದ್ದಲ್ಲಿ ತನಿಖೆ ನಡೆಸಲಿ, ಕಾಮಗಾರಿಯಲ್ಲಿ ಲೋಪವಾಗಿದ್ದಲ್ಲಿ ಶಿಕ್ಷೆಯಾಗಲಿ. ಈ ಯೋಜನೆ ಪೂರ್ಣ ಗೊಂಡಿಲ್ಲ, ಎರಡು ತಿಂಗಳ ಕಾಲಾವಕಾಶ ಬೇಕು ಎಂದು ವಿಗ್ರಹ ನಿರ್ಮಿಸಿದ ಶಿಲ್ಪಿಗೆ ಸನ್ಮಾನ ಮಾಡುವ ಸಂದರ್ಭದಲ್ಲಿಯೇ ನಾನು ಹೇಳಿದ್ದೆ ಎಂದರು.
ಅಂದು ಸರ್ಕಾರ 16.5 ಕೋಟಿ ರೂ. ಯೋಜನೆಗೆ ಮಂಜೂರಾತಿ ನೀಡಿತ್ತು. ಅದರಲ್ಲಿ 6.5 ಕೋಟಿ ರೂ. ಬಿಡುಗಡೆಗೊಂಡಿದ್ದು ಬಾಕಿ ಮೊತ್ತವನ್ನು ಸರ್ಕಾರ ಇನ್ನು ಭರಿಸಬೇಕಿದೆ. ಪರಶುರಾಮ ಥೀಮ್ ಪಾರ್ಕ್ ಧಾರ್ಮಿಕ ಕೇಂದ್ರವಲ್ಲ, ಅದೊಂದು ಪ್ರವಾಸಿ ತಾಣ. ಆದರೆ, ಇದೀಗ ಕೆಲವರು ಧಾರ್ಮಿಕ ಭಾವನೆಗೆ ಧಕ್ಕೆ ಎಂದು ಹೇಳುತ್ತಿದ್ದಾರೆ, ಇದು ಕೇವಲ ಅಪಪ್ರಚಾರಕ್ಕಾಗಿ ಹೇಳುವ ಮಾತು ಎಂದರು.
ಇನ್ನು, ಈಗಾಗಲೇ ಕಾಮಗಾರಿ ಪೂರ್ಣಗೊಂಡಿಲ್ಲ, ಬಾಕಿ ಮೊತ್ತ ಇನ್ನೂ ಮಂಜೂರಾಗಬೇಕಿದೆ. ತಡೆ ಹಿಡಿದ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ಬಗ್ಗೆ ಅನುಮಾನವಿದ್ದಲ್ಲಿ ತನಿಖೆ ನಡೆಸಿ, ಕಾಮಗಾರಿ ಮುಂದುವರಿಸಿ, ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಿ, ಸುಳ್ಳು ಮಾಹಿತಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಗುಡುಗಿದರು. ಸಭೆಯಲ್ಲಿ ಕಾರ್ಕಳ ಕ್ಷೇತ್ರಾಧ್ಯಕ್ಷ ಮಣಿರಾಜ್ ಶೆಟ್ಟಿ, ಮುಖಂಡರಾದ ಮಹಾವೀರ ಜೈನ್, ರೇಶ್ಮಾ ಉದಯ ಶೆಟ್ಟಿ ಉಪಸ್ಥಿತರಿದ್ದರು.
