ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗಕ್ಕೆ ವಿಶೇಷವಾದ ಸ್ಥಾನಮಾನವಿದೆ. ಪತ್ರಿಕಾರಂಗವನ್ನು ಸತ್ಯದ ಇನ್ನೊಂದು ನೋಟ ಎಂದೆ ನಂಬಲಾಗುತ್ತದೆ. ಸಮಾಜದ ಆಗು ಹೋಗುಗಳು, ಸತ್ಯ ಅಸತ್ಯತೆಗಳನ್ನು ಜನರಿಗೆ ಮನದಟ್ಟು ಮಾಡುವ ನೆಲೆಯಲ್ಲಿ ಮಾಧ್ಯಮದ ಪಾತ್ರ ಬಹಳ ಮಹತ್ವದಾಯಕವಾಗಿದೆ. ಅಧಿಕಾರಿಗಳ, ರಾಜಕಾರಣಿಗಳ ಸರಿ ತಪ್ಪಿನ ನಡೆಯನ್ನು ಮನದಟ್ಟು ಮಾಡಿ ಭ್ರಷ್ಟ ಮಾರ್ಗ ತೊರೆದು ಸರಿ ಮಾರ್ಗಕ್ಕೆ ಕೊಂಡೊಯ್ಯುವಂತೆ ಮಾಡುವ ನೆಲೆಯಲ್ಲಿ ಪತ್ರಿಕಾರಂಗ ಬಹಳ ಪ್ರಾಮುಖ್ಯ ಸ್ಥಾನ ಪಡೆದಿದೆ.
ಮನವಿ ಸಲ್ಲಿಕೆ
ಪತ್ರಕರ್ತರಲ್ಲಿ ಕೆಲವೊಂದಿಷ್ಟು ನ್ಯೂನ್ಯತೆ ಇದ್ದರೂ ಸಮಾಜವನ್ನು ಸುಸ್ಥಿತಿಯಲ್ಲಿ ನಡೆಯುವಂತೆ ಮಾಡಲು ಪತ್ರಕರ್ತರ ಸಹಕಾರ ಅಗತ್ಯವಿದ್ದು ನ್ಯಾಯಯುತ ಮಾರ್ಗದಲ್ಲಿ ಆಡಳಿತದಾರರು ಹೋಗದಿದ್ದರೆ ಪತ್ರಕರ್ತರು ಅಲ್ಲೆಗೆಳೆಯುತ್ತಾರೆ ಎಂಬ ಭಯ ಇರುವ ಕಾರಣ ಈ ನಿಟ್ಟಿನಲ್ಲಿ ಸದಾ ಎಚ್ಚೆತ್ತ ಆಡಳಿತ ವ್ಯವಸ್ಥೆ ಇರಲಿದೆ. ಆದರೆ ಅನೇಕ ಪತ್ರಕರ್ತರಿಗೆ ಸೌಲಭ್ಯ ಕೊರತೆ ಇದೆ. ಪತ್ರಕರ್ತರೆಂದರೆ ಮೂರನೇ ದೃಷ್ಟಿಯಿಂದ ಸತ್ಯ ಹುಡುಕಾಟ ಮಾಡಬೇಕು ಅವರಿಗೆ ಓಡಾಟವು ಅಧಿಕವಾಗೇ ಇರುತ್ತದೆ ಹಾಗಾಗಿ ಈ ಬಗ್ಗೆ ರಾಜ್ಯ ಸರಕಾರದಿಂದ ಪತ್ರಕರ್ತರಿಗೆ ವಿನಾಯಿತಿ ಸೌಲಭ್ಯ ನೀಡಬೇಕು ಎಂಬ ಮನವಿ ಕೂಡ ಕೇಳಿ ಬರುತ್ತಿದೆ.
ದಶಕದ ಪ್ರಯತ್ನ
ಪತ್ರಕರ್ತರಿಗೆ ರಕ್ಷಣಾ ವ್ಯವಸ್ಥೆ ಸಮಸ್ಯೆ ಕೂಡ ಇದೆ. ವಿಮೆ ಸೌಲಭ್ಯ ಸಹ ಇಲ್ಲ ಎಂಬ ಬಗ್ಗೆ ಅನೇಕ ಮನವಿ ಬಂದಿದೆ ಈ ಎಲ್ಲ ಮನವಿಯ ನಡುವೆಯೇ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂಬ ಮನವಿ ಬಂದಿದ್ದು ಈ ವಿಚಾರ ಮತ್ತೆ ಈಗ ಮುನ್ನಲೆಗೆ ಬರುತ್ತಿದೆ. ಕಳೆದ 10 ವರ್ಷದಿಂದ ಉಚಿತ ಬಸ್ ಪಾಸ್ ಗಾಗಿ ಬೇಡಿಕೆ ಮುಂದಿಟ್ಟಿದ್ದು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಈ ಯೋಜನೆಗೆ ಅನುಮೋದನೆ ದೊರೆತಿದೆ.
ಬಜೆಟ್ ನಲ್ಲಿ ಪ್ರಸ್ತಾಪ
ಕಾಂಗ್ರೆಸ್ ಸರಕಾರದ ಅವಧಿಯ ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ವ್ಯವಸ್ಥೆಯನ್ನು ಸರಕಾರ ತಿಳಿಸಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಈ ಬಗ್ಗೆ ಪ್ರಸ್ತಾಪವಿತ್ತಾಗ ಈಡೇರಿಕೆ ಮಾಡುವ ಭರವಸೆ ನೀಡಿದ್ದರು, ಆದರೆ ಈಗ ಕಾರ್ಯ ರೂಪಕ್ಕೆ ತಂದಿದ್ದಾರೆ. ಹೀಗಾಗಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಸಿಎಂ ಬಜೆಟ್ ಗೆ ವಿಶೇಷ ಅಭಿನಂದನೆ ವ್ಯಕ್ತ ಪಡಿಸಿದ್ದಾರೆ.
ಏನಂದ್ರು ರಾಜ್ಯಾಧ್ಯಕ್ಷ
ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಸಿಎಂ ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ವ್ಯವಸ್ಥೆಯನ್ನು ಅಭಿನಂದಿಸಿದ್ದಾರೆ. ಈ ಮೂಲಕ ರಾಜ್ಯ ಪತ್ರಕರ್ತರ ಸಂಘದಲ್ಲಿ ಮನವಿಗೆ ಸ್ಪಂದಿಸಿ , ನುಡಿದಂತೆ ನಡೆದಿದ್ದೀರಿ, ಹಾಗಾಗಿ ದಶಕಗಳ ಕನಸ್ಸು ಈಡೇರಿದಂತಾಗಿದೆ. ವಾರ್ತಾ ಇಲಾಖೆ ಮೂಲಕ ಈ ಕ್ರಮ ಶೀಘ್ರ ಜಾರಿಗೆ ಬರುವಂತಾಗಲಿ, ಇದಕ್ಕೆ ಸಹಕಾರವಿತ್ತ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ, ಮುಖ್ಯ ಮಂತ್ರಿ ಅವರ ಮಾಧ್ಯಮ ಸಲಹೆಗಾರರಾದ ಕೆ. ವಿ. ಪ್ರಭಾಕರ್ ಅವರಿಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಪರವಾಗಿ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
