
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗವಿಕಲರಿಗೆ ಸಹಾಯಧನ ಸೇರಿದಂತೆ ಅನೇಕ ವಿಧವಾದ ಸೇವೆಯನ್ನು ನೀಡುತ್ತಿದ್ದು, ಅವರ ಅಭಿವೃದ್ಧಿಗೆ ಸಾಕಷ್ಟು ಸಹಕಾರ ಒದಗಿಸಿದಂತಾಗಿದೆ. ಅಂಗವಿಕಲರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ಕಾರದ ಯೋಜನೆ ಈ ಹಿಂದಿನಿಂದಲೂ ಕೂಡ ಪ್ರಚಲಿತದಲ್ಲಿದ್ದು, ಅಂತಹ ಯೋಜನೆಯ ಸಾಲಿನಲ್ಲಿ ಒಂದಾಗಿ ನಾವು ಮಾಸಾಶನವನ್ನು ಕಾಣಬಹುದಾಗಿದೆ. ಕರ್ನಾಟಕದಲ್ಲಿ ಈ ಯೋಜನೆಯನ್ನು ಕಂದಾಯ ಇಲಾಖೆ ಮುಖೇನ ಜಾರಿಗೆ ತರಲಾಗುತ್ತಿದೆ.
ಯಾರಿಗೆ ಈ ಸೌಲಭ್ಯ
ಮಗು ಹುಟ್ಟುವಾಗಲೇ ಅಂಗವಿಕಲ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ಜನಿಸಿದ ಬಳಿಕ ಅಪಘಾತ ಇನ್ನಿತರ ಸಂದರ್ಭ ಅಂಗವೈಕಲ್ಯ ಕಂಡು ಬಂದರೆ ಅಂತವರಿಗೆ ಸರ್ಕಾರದಿಂದ ನೀಡಲಾಗುವ ಸಹಾಯಧನವೇ ಈ ಮಾಸಾಶನ. ಇದು ತಿಂಗಳಲ್ಲಿ ಒಮ್ಮೆ ನೀಡುವ ಕಾರಣ ಮಾಸಿಕ ಭತ್ಯೆ ಎಂದು ಸಹ ಉಚ್ಛರಣೆ ಮಾಡಲಾಗುತ್ತಿದೆ. ಅಂಗವಿಕಲರನ್ನು ಸಾಮಾನ್ಯ ಜನರಂತೆ ಸಮಾಜದ ಮುಖ್ಯವಾಹಿನಿಗೆ ತರಲು ಮತ್ತು ಸಣ್ಣ ಮಟ್ಟಿಗಾದರೂ ಆರ್ಥಿಕ ಭದ್ರತೆ ಒದಗಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಅಂಗವಿಕಲರ ಮಾಸಾಶನ ಯೋಜನೆಯನ್ನು ಇಂದಿರಾಗಾಂಧಿ ರಾಷ್ಟ್ರೀಯ ವಿಕಲಚೇತನ ಪಿಂಚಣಿ ಯೋಜನೆಯೊಂದಿಗೆ ವಿಲೀನ ಮಾಡಲಾಗಿದ್ದು, ಇದು ರಾಷ್ಟ್ರೀಯ ಮಟ್ಟದಲ್ಲಿ ಸಿಗಲಾಗುವ ಒಂದು ಯೋಜನೆ ಎಂದು ಕೂಡ ಮಾನ್ಯತೆ ಪಡೆದಿದೆ. ಕಣ್ಣು ಕಾಣದಿರುವುದು, ಮಂದ ದೃಷ್ಟಿ, ಕಿವುಡರು, ಬುದ್ಧಿ ಮಾಂದ್ಯತೆ, ಕುಷ್ಠರೋಗದವರು, ಕೈಕಾಲು ಊನತೆ, ಚಲನವಲನ ಸಾಧ್ಯವಾಗದೇ ಇರುವವರು, ಮಾನಸಿಕ ಅಸ್ವಸ್ಥತೆ ಈ ಎಲ್ಲ ಸಮಸ್ಯೆ ಇರುವವರನ್ನು ಪರಿಗಣಿಸಲಾಗುವುದು.
ಅರ್ಹತೆ ಏನು?
*ಭಾರತೀಯ ಪ್ರಜೆಯಾಗಿದ್ದು ಸ್ಥಳೀಯ ಸ್ಥಳ ದಾಖಲೆ ಇರಬೇಕು.
*10ವರ್ಷದಿಂದ ಕರ್ನಾಟಕದಲ್ಲಿ ಕನಿಷ್ಟ ವಾಸ್ತವ್ಯ ಇರಬೇಕು.
*ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಆದಾಯ ತೆರಿಗೆ ವ್ಯಾಪ್ತಿ ಮಿತಿಯಲ್ಲಿ ಇರಬೇಕು.
*ವೈದ್ಯಕೀಯ ಪ್ರಾಮಾಣೀಕರಿಸಿದ್ದ ರೀತಿಯಲ್ಲಿ ಅಂಗವಿಕಲತೆ ಸಮಸ್ಯೆ ಪತ್ರ ಇರಬೇಕು.
*ದೃಢೀಕರಣ ಪತ್ರದಲ್ಲಿ ಆದಾಯ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕರಣ ಪತ್ರ, ವಾಸಸ್ಥಳದ ದೃಢೀಕರಣ, ವಯಸ್ಸಿನ ದೃಢೀಕರಣ, 3ಪಾಸ್ ಪೋರ್ಟ್ ಫೋಟೋ ಇರಬೇಕಾಗುತ್ತದೆ.
*40%ಅಂಗವೈಕಲ್ಯ ಹೊಂದಿದ್ದು ವೈದ್ಯಕೀಯ ಪತ್ರ ವಿದ್ದರೆ ಅವರಿಗೆ ತಿಂಗಳಿಗೆ 500ರೂ. ಮಾಸಾಶನ ನೀಡಲಾಗುವುದು.
*ಅದೇ ರೀತಿ 75% ಅಂಗವೈಕಲ್ಯ ಇದ್ದರೆ ಅವರಿಗೆ 1,200ರೂ. ಮಾಸಾಶನ ನೀಡಲಾಗುವುದು.
ಒಟ್ಟಾರೆಯಾಗಿ ಅಂಗವಿಕರನ್ನು ಶೈಕ್ಷಣಿಕ , ಸಾಮಾಜಿಕ, ಆರ್ಥಿಕ ಇನ್ನಿತರ ಮೂಲಗಳಲ್ಲಿ ಅಭಿವೃದ್ಧಿ ಹೊಂದುವಂತೆ ಮಾಡುವ ಮುಖ್ಯ ಉದ್ದೇಶವನ್ನು ಹೊಂದಲಾಗಿದೆ. ನಮ್ಮ ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ 6%ದಷ್ಟು ಅಂಗವಿಕಲ ಸಮಸ್ಯೆ ಇರುವುದನ್ನು ಕಾಣಬಹುದು. ಆರ್ಥಿಕ ಅವಕಾಶ ತಡೆರಹಿತ ವಾತಾವರಣ, ಇತರ ಸೌಲಭ್ಯ ನೀಡುವ ನೆಲೆಯಲ್ಲಿ ಈ ಸೌಲಭ್ಯ ಬಹಳ ಮಹತ್ವದಾಯಕ ಎಂದು ಅನಿಸುತ್ತದೆ.
