ನವದೆಹಲಿ: ಕಳೆದ ಜನವರಿ 19ರಂದು ಕದನ ವಿರಾಮ ಘೋಷಣೆಯಾದ ಬಳಿಕ ಮತ್ತೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಇಂದು ಮುಂಜಾನೆ ಇಸ್ರೇಲ್ ಸೇನೆಯು (Israeli military) ಗಾಜಾದ ಮೇಲೆ ನಡೆದ ಭೀಕರ ವೈಮಾನಿಕ ದಾಳಿಯಲ್ಲಿ (Israel AirStrikes) ಕನಿಷ್ಠ 330 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್, ಉತ್ತರ ಗಾಜಾ, ಗಾಜಾ ನಗರ ಮತ್ತು ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯ ದೇರ್ ಅಲ್-ಬಲಾಹ್, ಖಾನ್ ಯೂನಿಸ್ ಮತ್ತು ರಫಾ ಸೇರಿದಂತೆ ಅನೇಕ ಸ್ಥಳಗಳನ್ನು ಧ್ವಂಸಗೊಳಿಸಿದೆ. ಭೀಕರ ವಾಯುದಾಳಿಯಲ್ಲಿ ಮೃತಪಟ್ಟವರ ಪೈಕಿ ಪ್ಯಾಲೆಸ್ತೀನಿನ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೆಚ್ಚಿನವರು ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಮಾಹಿತಿ ನೀಡಿದೆ.
ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ಆಂತರಿಕ ಭದ್ರತಾ ಸೇವೆಗಳ ಮುಖ್ಯಸ್ಥ ಮಹಮೂದ್ ಅಬು ವತ್ಫಾ ಕೂಡ ಇಸ್ರೇಲ್ ದಾಳಿಗೆ ಬಲಿಯಾಗಿದ್ದಾನೆಂದು ವರದಿಗಳು ತಿಳಿಸಿವೆ.
