
ಉತ್ತರಕನ್ನಡ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕತ್ತಿದ್ದರೆ ಹಿಂದೂ ರಾಷ್ಟ್ರವಾಗುವುದನ್ನು ತಡೆಯಲಿ ಎಂದು ಸಂಸದ ಅನಂತ ಕುಮಾರ್ ಹೆಗ್ಗಡೆ ಸವಾಲು ಹಾಕಿದ್ದಾರೆ.
ಶಿರಸಿಯಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಹಿಂದೂ ರಾಷ್ಟ್ರ ನಿರ್ಮಾಣವಾಗುವ ಮೊದಲ ಹೆಜ್ಜೆಯಾಗಿದೆ. ದೇಶದ ಜನತೆಗೆ ಇದೊಂದು ಶತಮಾನದ ಸಂಭ್ರಮವಾಗಿದೆ. ಕಾಂಗ್ರೆಸ್ ಯಾವತ್ತೂ ಬಹು ಸಂಖ್ಯಾತರ ಪರ ರಾಜಕಾರಣ ಮಾಡಿದ್ದೇ ಇಲ್ಲ. ಕಾಂಗ್ರೆಸ್ ಸರ್ಕಾರ ತಾಕತ್ತಿದ್ದರೆ ಹಿಂದೂ ರಾಷ್ಟ್ರವಾಗುವುದನ್ನು ತಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ, ಹಿಜಾಬ್ ಮೊದಲಾದ ಅನವಶ್ಯಕ ವಿಷಯಗಳಿಂದಲೇ ರಾಜಕಾರಣ ಮಾಡುತ್ತಿದೆ. ಟಿಪ್ಪು ಸುಲ್ತಾನ್ ಒಬ್ಬ ಈ ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳಿಗೆ ತೊಂದರೆ ಮಾಡಿದ ವ್ಯಕ್ತಿ. ಸಿದ್ದರಾಮಯ್ಯ ಸಾಮಾಜಿಕ ಕಲ್ಪನೆ ಇಲ್ಲದೇ ಹೇಳಿಕೆ ನೀಡಬಾರದು. ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಇರುವಾಗ ಬೇಕಾಬಿಟ್ಟಿ ಹೇಳಿಕೆ ಕೊಡುವುದು ಸರಿಯಲ್ಲ ಇದೆಲ್ಲದಕ್ಕೂ ರಾಜ್ಯದ ಜನತೆ ಉತ್ತರ ನೀಡಲಿದ್ದಾರೆ ಎಂದರು.
