
ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಮಳೆ ಜೋರಾಗಿರುವ ಪ್ರದೇಶಗಳಲ್ಲಿ ಶಾಲಾ-ಕಾಲೇಜಿಗೆ ರಜೆಯನ್ನು ನೀಡಲಾಗುತ್ತಿದೆ. ಇಂದೂ ಕೂಡ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜಿಗೂ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಮೊದಲಿಗೆ ಜಿಲ್ಲೆಯ ಬ್ರಹ್ಮಾವರ ಮತ್ತು ಕುಂದಾಪುರ ತಾಲೂಕಿನ ಶಾಲಾ-ಕಾಲೇಜಿಗೆ ಮಾತ್ರ ರಜೆ ಘೋಷಿಸಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಬಿಟ್ಟುಬಿಡದೇ ಮಳೆಯಾಗುತ್ತಿರುವುದರಿಂದ ಹವಾಮಾನ ಇಲಾಖೆಯ ಮುನ್ಸೂಚನೆಯನ್ನೂ ಮನಗಂಡ ಜಿಲ್ಲಾಧಿಕಾರಿ, ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿದ್ದಾರೆ.
ಇನ್ನು, ಮುಂದಿನ 72 ಗಂಟೆಗಳ ಕಾಲ ಮಳೆಯ ಅಬ್ಬರ ಜೋರಾಗಿರಲಿದ್ದು, ಜನರು ಹೊರಗೆ ಹೋಗುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮರಳ ಕೆಳಗೆ ನಿಲ್ಲುವುದು, ಲೈಟ್ ಕಂಬಗಳ ಕೆಳಗೆ ನಿಲ್ಲುವುದನ್ನು ಮಾಡಬಾರದು ಎನ್ನಲಾಗಿದೆ.
