ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಬಹಳ ಚುರುಕುಗೊಂಡಿದೆ. ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಇದೀಗ ಶವವನ್ನು ವಿಲೇವಾರಿ ಮಾಡಲು ದರ್ಶನ್ ಇತರ ಆರೋಪಿಗಳಿಗೆ 30 ಲಕ್ಷ ಹಣ ನೀಡಿದ್ದಾರೆ ಎಂದು ಹೇಳಲಾಗಿದೆ.
ರೇಣುಕಾಸ್ವಾಮಿ ಮೃತಪಟ್ಟ ವಿಷಯ ತಿಳಿದು ಗಾಬರಿಗೊಂಡ ದರ್ಶನ್ ಪಟ್ಟಣಗೆರೆ ಶೆಡ್‌ಗೆ ಬಂದು ಸುಮಾರು ಒಂದುವರೆ ತಾಸು ಅಲ್ಲಿಯೇ ಇದ್ದು, ಮೃತದೇಹವನ್ನು ಬೇರೆಡೆ ಸಾಗಿಸುವಂತೆ ತನ್ನ ಆಪ್ತ ಪ್ರದೋಶ್‌ಗೆ ಸೂಚಿಸಿದ್ದಾರೆ. ಇದಕ್ಕೆ 30 ಲಕ್ಷ ರೂ ವನ್ನು ನಿಮಗೆ ನೀಡುತ್ತೇನೆ ಎಂದು ಹೇಳಿದ್ದರಂತೆ.
ರೇಣುಕಾಸ್ವಾಮಿಯ ಶವ ಪತ್ತೆಯಾಗುತ್ತಿದ್ದಂತೆ ದರ್ಶನ್ ಆಪ್ತ ದೀಪಕ್, ಚಿತ್ರದುರ್ಗದ ರಾಘವೇಂದ್ರ, ದರ್ಶನ್ ಕಾಅರು ಚಾಲಕ ಕಾರ್ತಿಕ್, ನಿಖೀಳ್ ನಾಯಕ್, ಕೇಶವ ಮೂರ್ತಿಗೆ ಕೊಲೆ ಪ್ರಕರಣದಲ್ಲಿ ಶರಣಾಗುವಂತೆ ಸೂಚಿಸಿದ್ದ. ಪ್ರಕರಣದಲ್ಲಿ ದರ್ಶನ್ ಹೆಸರು ಎಲ್ಲಿಯೂ ಬರಬಾರದು ಒಬ್ಬೊಬ್ಬರಿಗೆ ತಲಾ 5ಲಕ್ಷ ನೀಡುತ್ತೇನೆ ಎಂದಿದ್ದಾರೆ ಎಂದು ಶರಣಾದ ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ.
ಇನ್ನು, ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಕೇವಲ 13 ಮಂದಿ ಅಲ್ಲ, 17 ಮಂದಿ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ತಲೆ ಮರೆಸಿಕೊಂಡಿರುವ ಇನ್ನೂ ನಾಲ್ವರು ಆರೋಪಿಗಳನ್ನು ಪೊಲೀಸರು ಹುಡುಕಾಡುತ್ತಿದ್ದಾರೆ ಎನ್ನಲಾಗಿದೆ.
