ಬೆಂಗಳೂರು: ನಟ, ನಿರ್ಮಾಪಕ, ನಿರ್ದೇಶಕ ‘ದ್ವಾರಕೀಶ್’ ಏಪ್ರಿಲ್ 16ರ ಬೆಳಗ್ಗೆ ಹೃದಯಾಘಾತದಿಂದ ಅಪಾರ ಅಭಿಮಾನಿ ಬಳಗ ಮತ್ತು ಕುಟುಂಬದವರನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಕನ್ನಡ ಚಿತ್ರರಂಗದ ಕಲಾವಿದರು ಸೇರಿದಂತೆ ಅನೇಕ ಅಭಿಮಾನಿಗಳು ಕೂಡ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.
ದ್ವಾರಕೀಶ್ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು,
“ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ ‘ಪ್ರಚಂಡ ಕುಳ್ಳ’ನಾಗಿ ಐದು ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ” ಎಂದು ಬರೆದು ಕೊಂಡಿದ್ದಾರೆ.
ನಟ ಸತೀಶ್ ನಿನಾಸಂ ಕೂಡ ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಕನ್ನಡಕ್ಕೆ, ಕನ್ನಡ ಚಿ ತ್ರರಂಗಕ್ಕೆ ನಿಮ್ಮ ಸೇವೆ ಅಪಾರ, ನಮ್ಮ ಬಾಲ್ಯ ಸಿನಿಬದುಕು ಚೆಂದವಾಗಿರಲು ನಿಮ್ಮ ಸಿನಿಮಾಗಳು ಕಾರಣ.ಕ ನ್ನಡ ಚಿತ್ರರಂಗದ ಶ್ರೀಮಂತಿಕೆಗೆ ನೀವು ಬಹು ಕಾರಣ ಅಂತಿಮ ನಮನಗಳು ಸರ್… ಹೋಗಿ ಬನ್ನಿ ನಿಮ್ಮ ಹೆಜ್ಜೆ ಗುರುತುಗಳು ಸದಾ ಚಿರಾಯು” ಎಂದಿದ್ದಾರೆ.
ನಿರ್ದೇಶಕ ಸಿಂಪಲ್ ಸುನಿ ಕೂಡ ಹಿರಿಯ ನಿರ್ಮಾಪಕರನ್ನು ನೆನಪಿಸಿಕೊಂಡಿದ್ದಾರೆ. “ಹೆಮ್ಮೆಯ ನಿರ್ಮಾಪಕ .. ನೆಚ್ಚಿನ ನಟ .. ಕರುನಾಡ ಪ್ರಚಂಡ ಕುಳ್ಳ ದ್ವಾರಕೀಶ್ ರವರ ಅಗಲಿಕೆಗೆ ಸಂತಾಪ ಸೂಚಕಗಳು” ಎಂದು ಟ್ವೀಟ್ ಮೂಲಕ ಬರೆದು ಕೊಂಡಿದ್ದಾರೆ.
ದ್ವಾರಕೀಶ್ ಅವರು 19 ಆಗಸ್ಟ್ 1942 ರಲ್ಲಿ ಜನಿಸಿ ಕನ್ನಡ ಚಲನಚಿತ್ರೋದ್ಯಮದಲ್ಲಿ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಹೆಸರು ಗಳಿಸಿದ್ದಾರೆ.
