
ಚಿಕ್ಕಮಗಳೂರು: ತೋಟದ ಬಾಳೆಹಣ್ಣಿಗೆ ಪ್ರಜ್ಞೆ ತಪ್ಪುವ ಔಷಧ ಬೆರೆಸಿ ಅದನ್ನು ತಿಂದು ಮಂಗಗಳು ಪ್ರಜ್ಞೆ ತಪ್ಪಿದ ಬಳಿಕ ಅವುಗಳ ತಲೆಗೆ ಬಲವಾಗಿ ಹೊಡೆದು, 30 ಮಂಗಗಳನ್ನು ಸಾಯಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ದ್ಯಾವಣ ಎಂಬ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಮಂಗಗಳ ಪೈಕಿ 16 ಗಂಡು, 14 ಹೆಣ್ಣು, 4 ಮರಿ ಮಂಗಗಳು ಸೇರಿವೆ ಎನ್ನಲಾಗಿದೆ. ಮಂಗಗಳನ್ನು ಕೊಂದು ಬಳಿಕ ರಸ್ತೆಗೆ ಎಸೆದು ಹೋಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತಪಟ್ಟ 30 ಮಂಗಗಳ ತಲೆಯಲ್ಲೂ ಒಂದೇ ರೀತಿಯ ಗಾಯವಾಗಿದ್ದು, ರಕ್ತ ಸುರಿದು ಮೃತಪಟ್ಟಿವೆ ಎನ್ನಲಾಗಿದೆ.
ಎನ್‌ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಡಿಎಫ್‌ಓ, ಆರ್‌ಎಫ್‌ಓ, ಪಿಎಸ್‌ಐ, ಪಶುಸಂಗೋಪನೆ, ಪಶುವೈದ್ಯರು, ಪಂಚಾಯತ್‌ನವರು, ಆಶಾ ಕಾರ್ಯಕರ್ತೆಯರು ಸೇರಿ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
