
ಕಟಪಾಡಿ: ಜಪಾನ್ ಮೂಲದ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಎಂದು ಹೇಳಲಾದ ಮಿಯಾಝಕಿ ಮಾವಿನ ತಳಿಯು ಉಡುಪಿ ಜಿಲ್ಲೆಯ ಶಂಕರಪುರದ ಜೋಸೆಫ್ ಲೋಬೋ ಅವರ ತೋಟದಲ್ಲಿ ಕಂಡುಬಂದಿದೆ. ತಾರಸಿ ಕೃಷಿ ಪ್ರಯೋಗದಲ್ಲಿ ಹೆಸರುವಾಸಿಯಾಗಿರುವ ಇವರು ಕೇರಳದ ಕಣ್ಣೂರಿನಲ್ಲಿ ನಡೆದ ಕೃಷಿ ಮೇಳವೊಂದರಲ್ಲಿ 16.800 ರೂ ಕೊಟ್ಟು ಈ ತಳಿಯ ಮಾವಿನ ಗಿಡವನ್ನು ಖರೀದಿಸಿದ್ದರು. ಗಿಡ ನೆಟ್ಟು ಮೂರುವರೆ ವರ್ಷದ ಬಳಿಕ ಮಾವಿನ ಹಣ್ಣು ಬಿಟ್ಟಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಣ್ಣಿನ ಬೆಲೆ ಕೆ.ಜಿ.ಗೆ 2.3 ಲಕ್ಷ ರೂ ನಿಂದ 2.7ಲಕ್ಷ ರೂ ವರೆಗೆ ಇದೆ. ಕಾಯಿಯ ಹಂತದಲ್ಲಿ ನೇರಳೆ ಬಣ್ಣದಲ್ಲಿರುವ ಈ ಹಣ್ಣು ಔಷಧೀಯ ಗುಣಗಳನ್ನೂ ಕೂಡ ಹೊಂದಿದೆ. ಕಣ್ಣಿನ ಆಯಾಸ ನಿವಾರಣೆ ಹಾಗೂ ದೃಷ್ಟಿ ದೋಷ ನಿವಾರಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ತಾರಸಿಯಲ್ಲಿ ಸುಮಾರು ನಾಲ್ಕೂವರೆ ಅಡಿ ಎತ್ತರಕ್ಕೆ ಬೆಳೆಯುವ ಈ ಗಿಡವನ್ನು ನೆಲದಲ್ಲಿ ನೆಟ್ಟರೆ ಸುಮಾರು 15 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಈ ತಳಿಯ ಗಿಡವನ್ನು ಕೊಪ್ಪಳ, ಶಿವಮೊಗ್ಗದಲ್ಲೂ ಕೂಡ ಬೆಳೆಯುತ್ತಾರೆ.
ಇನ್ನು, ಜೋಸೆಫ್ ಲೋಬೋ ಅವರ ತಾರಸಿಯಲ್ಲಿ ಈಗ ಬಿಟ್ಟಿರುವ ಕೆಂಪು, ಸಾದಾ ಹಸಿರು ಬಣ್ಣದ ಮೂರು ಮಾವಿನ ಹಣ್ಣು ಒಂದೊಂದು ಸುಮಾರು 600 ರಿಂದ 650 ಗ್ರಾಂ ಇದೆ. ರುಚಿಯಲ್ಲಿ ಮಲ್ಲಿಕಾ ತಳಿಯನ್ನು ಹೋಲುವ ಈ ಮಾವಿನ ಹಣ್ಣಿಗೆ ಸಾಕಷ್ಟು ಬೇಡಿಕೆಯಿದ್ದು, ಇದರ ಬಣ್ಣ ಮತ್ತು ಆಕರ್ಷಣೆಯಿಂದಾಗಿ ದುಬಾರಿ ಬೆಲೆಯನ್ನು ಹೊಂದಿದೆ. ಈ ತಳಿಯ ಮಾವು ಜಪಾನ್, ಅರಬ್ ರಾಷ್ಟ್ರ ಮತ್ತು ಗುಜರಾತ್ನಲ್ಲಿ ಬೆಂಕಿಯ ಜ್ವಾಲೆಯ ಬಣ್ಣವನ್ನು ಪಡೆಯುತ್ತದೆ. ಆದರೆ ಜನವರಿಯಲ್ಲಿ ಮಳೆ ಬಿದ್ದ ಹಿನ್ನೆಲೆ ಜೋಸೆಫ್ ಲೋಬೋ ಅವರ ತೋಟದಲ್ಲಿ ಬೆಳೆದ ಹಣ್ಣು ಆ ಬಣ್ಣಕ್ಕೆ ತಿರುಗಿಲ್ಲ ಎನ್ನಲಾಗಿದೆ.
